ತತ್ವಶಾಸ್ತ್ರ

	ತನ್ನ ಚರಿತ್ರೆಯ ದೃಷ್ಟಿಯಿಂದಲೂ ಮತ್ತು ತಾನು ಎದುರಿಸುವ ಸಮಸ್ಯೆಗಳ ದೃಷ್ಟಿಯಿಂದಲೂ ತತ್ತ್ವಶಾಸ್ತ್ರ (ಫಿಲಾಸಫಿ) ಪ್ರಾಚೀನವೂ ಬಹುಮುಖವೂ ಆದದ್ದು. ಇದರ ಆದಿ ಅಥವಾ ಮೂಲ ಮಾನವ ಸಹಜವಾಸದ ಕುತೂಹಲ ಪ್ರವೃತ್ತಿ. ಮಾನವ ತನ್ನ ಜೀವನದಲ್ಲಿ ಎದುರಿಸುವ ಎಲ್ಲ ಸಮಸ್ಯೆಗಳಿಗೂ (ವೈಯಕ್ತಿಕ, ಸಾಮಾಜಿಕ ಇಲ್ಲವೆ ಪ್ರಕೃತಿಯಲ್ಲಿ, ಜೀವನದಲ್ಲಿ ಒದಗುವ ಆಶ್ಚರ್ಯಕಾರಕ ಘಟನೆಗಳು ಇತ್ಯಾದಿ) ಸಹಜವಾಗಿಯೇ ಉತ್ತರಗಳನ್ನು ನಿರೀಕ್ಷಿಸುತ್ತಾನೆ. ತನ್ನ ಅನುಭವದ ದೃಷ್ಟಿಯಿಂದ ತಾನೇ ಉತ್ತರ ನೀಡಲು ಪ್ರಯತ್ನಿಸುತ್ತಾನೆ. ಒದಗುವ ಸಮಸ್ಯೆಗಳು ಆಂತರಿಕವಾಗಿರಬಹುದು, ಬಾಹ್ಯವಾಗಿರಬಹುದು. ಸಮಾಧಾನ ಹುಡುಕುವುದು ಸಹಜ ಪ್ರವೃತ್ತಿ, ತಾನು ಕಂಡುಕೊಂಡ ಸಮಾಧಾನದಿಂದ ಆತನಿಗೆ ವ್ಯಾವಹಾರಿಕ ಪ್ರಯೋಜನ ಆಗಬಹುದು. ಅಥವಾ ಕೇವಲ ತಿಳಿವಳಿಕೆಯ ಸಂತೃಪ್ತಿ ಮಾತ್ರ ಸಿಗಬಹುದು. ತಿಳಿದುಕೊಳ್ಳಬೇಕು ಎನ್ನುವ ಆಕಾಂಕ್ಷೆ, ತಿಳಿವಿನಲ್ಲಿನ ಒಲವು ಆತನನ್ನು ತಾತ್ತ್ವಿಕನನ್ನಾಗಿ ಮಾಡುತ್ತವೆ. ಇಂಥ ಅಭಿಲಾಷೆ ಮತ್ತು ಒಲವುಗಳನ್ನು ಪಡೆದವನೇ ತಾತ್ತ್ವಿಕ ಎಂದು ಗ್ರೀಕ್ ಮೇಧಾವಿ ಸಾಕ್ರೇಟೀಸನ ಅಭಿಪ್ರಾಯ.

	ತತ್ತ್ವಶಾಸ್ತ್ರದ ಆದಿ ಸಹಜಪ್ರವೃತ್ತಿಯಾದ ಕುತೂಹಲ ಮತ್ತು ಒಲವುಗಳಲ್ಲಿ ಇದ್ದರೂ ತತ್ತ್ವಕ್ರಿಯೆಯ ಇತಿಹಾಸ ಅಷ್ಟಕ್ಕೆ ಪರಿಸಮಾಪ್ತಿಯಾಗುವುದಿಲ್ಲ. ತತ್ತ್ವಶಾಸ್ತ್ರದ ಲಕ್ಷಣ ಮತ್ತೂ ಗಹನವಾದುದೆಂದೂ ಹೇಳಬೇಕು. ಅದು ವಸ್ತುಸ್ವರೂಪಾವಧಾರಣ ಕ್ರಿಯೆ ಎನ್ನುವುದು ಭಾರತೀಯ ದೃಷ್ಟಿ. ತತ್ತ್ವ ಎನ್ನುವುದರಲ್ಲಿನ ತತ್ ಹಾಗೂ ತ್ವ ಎನ್ನುವುದಕ್ಕೆ ಅದರ ತನ ಎಂದು ಅರ್ಥ. ಇದು ವಸ್ತುಗಳ ಸ್ವರೂಪವನ್ನೂ ಅಥವಾ ಯಥಾರ್ಥವನ್ನೂ ಅರಿಯುವ ಬಗೆ. ಅದನ್ನು ಅರಿಯುವ ಶಾಸ್ತ್ರಕ್ಕೆ ತತ್ತ್ವಶಾಸ್ತ್ರ ಎಂದು ಹೆಸರು. ಈ ರೀತಿಯ ಅರ್ಥವಿಸ್ತಾರದ ಮಹತ್ತ್ವವನ್ನು ನಾವು ಕಂಡುಕೊಳ್ಳಬೇಕು. ತಿಳಿಯಬಯಸುವುದು ಮಾನವನಿಗೆ ಸಹಜ ಪ್ರವೃತ್ತಿಯಾದರೆ ಎಲ್ಲರೂ ತಾತ್ತ್ವಿಕರೇ ಆಗಬೇಕು. ಆದರೆ ಕುತೂಹಲ ಮತ್ತು ಒಲವುಗಳು ಇದ್ದ ಮಾತ್ರಕ್ಕೆ, ಅರಿಯುವ ಕ್ರಿಯೆ ಒಬ್ಬನಲ್ಲಿ ನಡೆದ ಮಾತ್ರಕ್ಕೆ ಆತ ತಾತ್ತ್ವಿಕನಾಗಲಾರ. ಪ್ರಾಕೃತಿಕವಾದ ಮತ್ತು ಯಾಂತ್ರಿಕವಾದ ಅರಿವು ತತ್ತ್ವಜ್ಞಾನವಾಗುವುದಿಲ್ಲ. ಅದು ಸಾಮಾನ್ಯಜ್ಞಾನವಾಗಬಹುದು. ತತ್ತ್ವಶಾಸ್ತ್ರ ಸಾಮಾನ್ಯಜ್ಞಾನವನ್ನೂ ಮನ್ನಿಸುವುದಾದರೂ ವಿಚಾರದಿಂದ ಉತ್ಕರ್ಷವಾದ ಜ್ಞಾನಕ್ಕೆ ಪ್ರಾಧಾನ್ಯ ನೀಡುತ್ತದೆ. ಇಂದ್ರಿಯಜನ್ಯಜ್ಞಾನದ ಅಥವಾ ಸಾಮಾನ್ಯ ಅನುಭವದಿಂದ ಉಂಟಾದ ಜ್ಞಾನದ ಅರ್ಥ, ಮೌಲ್ಯ, ವಿಮರ್ಶೆ ಮತ್ತು ಅವು ವಸ್ತುಗಳ ಸತ್ - ಸ್ವರೂಪವನ್ನು ಎಷ್ಟರಮಟ್ಟಿಗೆ ನಮಗೆ ತೋರಿಸಿಕೊಡುತ್ತವೆ - ಎನ್ನುವ ಎಲ್ಲ ರೀತಿಯ ಜಿಜ್ಞಾಸೆಗೆ ಒಳಗಾಗುವ ವಿಚಾರ ಕ್ರಮ ತತ್ತ್ವಶಾಸ್ತ್ರದ್ದು. ಕೇವಲ ಊಹೆ, ನಂಬಿಕೆಗಳ ಆಧಾರದ ಮೇಲೆ ನಿಂತ ಜ್ಞಾನ ಪ್ರಮಾಣಬದ್ಧವಾಗಿರದು. ಅನುಭವಕ್ಕೆ ತರ್ಕಕ್ಕೆ ಸರಿಯೆಂದು ತೋರಿದ ಅರಿವು ಸಾಮಾನ್ಯ ರೀತಿಯ ತಿಳಿವಳಿಕೆ. ಜ್ಞಾನ ವಿಜ್ಞಾನದ ಮಟ್ಟಕ್ಕೆ ಹೋದರೆ ಮಾತ್ರ ಅದು ತತ್ತ್ವಜ್ಞಾನವಾಗುತ್ತದೆ, ಶಾಸ್ತ್ರವಾಗುತ್ತದೆ. ಈ ರೀತಿಯ ತತ್ತ್ವಾಭಿಲಾಷೆಯಿಂದ ಪ್ರೇರಿತವಾದ ಜಿಜ್ಞಾಸೆ ಜೀವನವನ್ನು ವಿಶ್ಲೇಷಿಸುತ್ತದೆ. ಅದರ ಅರ್ಥಮೌಲ್ಯಗಳನ್ನು ನಿರ್ಧರಿಸುತ್ತದೆ. ಇದು ಕೇವಲ ಇಂದ್ರಿಯ ಜನ್ಯ ಜ್ಞಾನದಿಂದ ಅಥವಾ ಸಾಮಾನ್ಯ ಜ್ಞಾನದಿಂದ ಸಾಧ್ಯವಾಗದು. ಇವು ಪ್ರಗಲ್ಭವಲ್ಲದ ಪ್ರಾಕೃತಿಕ ಪ್ರತಿಕ್ರಿಯೆಯ ಫಲವಾದರೆ, ತತ್ತ್ವಜ್ಞಾನ ಸತ್ಯ - ಅಸತ್ಯ ನಿತ್ಯ - ಅನಿತ್ಯ ಎನ್ನುವ ನಿರ್ಣಾಯಕ ಮಾನದಂಡಗಳಿಂದ ಪರಿಷ್ಕøತವಾದ ಪ್ರಬುದ್ಧ ಜ್ಞಾನ ಸಂಸ್ಕರಣ. ತತ್ - ತ್ವವನ್ನು ಕಾಣುವ ದೃಷ್ಟಿ ದಿನನಿತ್ಯ ಅನುಭವದ ಬಾಹ್ಯಸ್ವರೂಪವನ್ನು ತೂರಿಕೊಂಡು ಸತ್ಯವನ್ನು ಕಾಣುವ ದರ್ಶನ ಕ್ರಮ. ಆದ್ದರಿಂದ ತಾತ್ತ್ವಿಕನಾದವನು ದಾರ್ಶನಿಕನೂ ಹೌದು. ದ್ರಷ್ಟಾರ ಎನ್ನುವ ಮಾತೂ ಆತನಿಗೆ ಸಲ್ಲುತ್ತದೆ. ಎಂದರೆ ಇಂಥ ಚಟುವಟಿಕೆಗೆ ಅಗತ್ಯವಾದ ಯೋಗ್ಯತೆ ವಿರಳವೆಂದೇ ಹೇಳಬೇಕು. ಈ ದೃಷ್ಟಿ ವಸ್ತುವಿನ ಅಂತರಂಗವನ್ನು ಹೇಗೆ ತಿಳಿಯಬಯಸುವುದೋ ಹಾಗೆಯೇ ವಿಶ್ವರಚನೆಯಲ್ಲಿ ಆ ವಸ್ತು ಯಾವ ಸ್ಥಾನವನ್ನು ಪಡೆದಿದೆ ಎಂದು ತೀರ್ಮಾನಿಸಲೂ ಸಮರ್ಥವಾಗಬೇಕು. ಒಂದು ಒಳ ಹೋಗುವ ಕ್ರಿಯೆ. ಮತ್ತೊಂದು ಒಳಗೊಳ್ಳುವ ಪ್ರಯತ್ನ. ಇವೆರಡಕ್ಕೂ ಅನುಮಾಡಿಕೊಡುವಂಥ ಆತ್ಮಗುಣಕ್ಕೆ ಪ್ರತಿಭೆ, ಪ್ರತಿಭಾನ ಎನ್ನುತ್ತಾರೆ. ಈ ಗುಣವನ್ನು ಸಹಜವಾಗಿ ಉಳ್ಳವನೇ ತತ್ತ್ವಜ್ಞಾನಿ.

	ಎಂದರೆ, ತತ್ತ್ವಜ್ಞಾನ ತನ್ನ ಬೆಳವಣಿಗೆಯಲ್ಲಿ ಎರಡು ಮೇರೆಗಳನ್ನು ಮೀರಿ ಸಾರ್ವತ್ರಿಕವಾಗುತ್ತದೆ. ಅಂತರಂಗದ ಸತ್ಯವನ್ನು ಹೊರಗೆಡಹುವುದರಲ್ಲಿ ವಸ್ತು ಸ್ವರೂಪವನ್ನು ತೋರಿಸುವಂತೆಯೇ ವಸ್ತುಗಳ ಪರಸ್ಪರ ದೃಷ್ಟಿ ವೈಚಿತ್ರ್ಯಗಳನ್ನು ಮೀರಿ ಅಂಥ ವಸ್ತುಗಳನ್ನು ರೂಪಿಸುವ ಕಾಲ ದೇಶಗಳ ಸಂಬಂಧಗಳನ್ನು ಮೀರಿ ಸಾರ್ವತ್ರಿಕವಾಗಿ ಅನ್ವಯವಾಗುವ ಸಾಮಾನ್ಯ ಜ್ಞಾನವನ್ನೂ ಅದು ನೀಡುತ್ತದೆ. ತತ್ತ್ವಜ್ಞಾನದ ಈ ಲಕ್ಷಣ ಭಾರತೀಯ ಜಿಜ್ಞಾಸುವಿನ ಈ ಮಾತಿನಲ್ಲಿ ಕಂಡುಬರುತ್ತದೆ `ಕಸ್ಮಿನ್ನು ವಿಜ್ಞಾತೇ ಸರ್ವಮಿದಂ ವಿಜ್ಞಾತಂ ಭವತಿ ?' (ಮು. ಉ. 1. 3) - ಯಾವುದನ್ನು ಅರಿಯುವುದರಿಂದ ಎಲ್ಲವನ್ನೂ ತಿಳಿಯಬಲ್ಲೆವೋ, ಅದು ಯಾವುದು ? ಎಲ್ಲದರ `ಸದ್ವಸ್ತು ಯಾವುದು ? ಆ ಸದ್ವಸ್ತುವನ್ನು ಅರಿತರೆ ಎಲ್ಲವನ್ನೂ ಅರಿತಂತೆಯೇ, ಮಿಕ್ಕ ಎಲ್ಲವೂ ನಾಮ ರೂಪಗಳೇ - `ವಾಚಾರಂಭಣಂ ನಾಮಧೇಯಂ ಮೃತ್ತಿಕೇತ್ಯೇವ ಸತ್ಯಂ ' (ಛಾ. ಉ. 6, 1 4). ಮಣ್ಣು ಮಾತ್ರ ಸತ್ಯ, ಮಿಕ್ಕ ಎಲ್ಲವೂ ವ್ಯವಹಾರಕ್ಕಾಗಿ ಉದಿಸಿರುವ ನಾಮ ಮತ್ತು ರೂಪಗಳು. ಗ್ರೀಕ್ ತತ್ತ್ವಜ್ಞಾನಿ ಅರಿಸ್ಟಾಟಲ್ ತತ್ತ್ವಶಾಸ್ತ್ರವನ್ನು ಕುರಿತು ಇದೇ ರೀತಿಯಲ್ಲಿ ಹೇಳುತ್ತಾನೆ : `ಅಸ್ತಿತ್ವ (ಅಥವಾ ಇರವು, ಬೀಯಿಂಗ್) ಎನ್ನುವುದನ್ನು ``ಅಸ್ತಿತ್ವ" ಎನ್ನುವ ರೀತಿಯಲ್ಲಿಯೇ ವಿಚಾರ ಮಾಡುವ ವಿಜ್ಞಾನವೊಂದಿದೆ. ಅದು `ಅಸ್ತಿತ್ವ ಕ್ಕೆ ಸ್ವಾಭಾವಿಕವಾಗಿ ಸಂಬಂಧಪಟ್ಟ ಅಂಶವನ್ನೇ ಕುರಿತು ಜಿಜ್ಞಾಸೆ ನಡೆಸುತ್ತದೆ. ಈ ವಿಜ್ಞಾನ ವಿಶಿಷ್ಟ ವಿಜ್ಞಾನಗಳಂತೆ ಮತ್ತೊಂದು ವಿಜ್ಞಾನವಲ್ಲ. ಏಕೆಂದರೆ ಅವುಗಳಂತೆ ಇದು ಅಸ್ತಿತ್ವ ಎನ್ನುವ ಭಾವವನ್ನು ಎಲ್ಲಕ್ಕೂ ಸಾಮಾನ್ಯವಾಗಿ ಅನ್ವಯವಾಗುವ ರೀತಿಯಲ್ಲಿ ವಿಚಾರಿಸದೆ, ಅಸ್ತಿತ್ವದ ಅಂಶಗಳನ್ನು ಪ್ರತ್ಯೇಕಿಸಿ, ಗಣಿತಶಾಸ್ತ್ರ ಮಾಡುವ ರೀತಿಯಲ್ಲಿ ಅವುಗಳ ಗುಣವನ್ನು ವಿಚಾರಿಸುತ್ತದೆ. ಅಂದರೆ ನಾವು ವಸ್ತುಗಳ ಮೂಲ ಮತ್ತು ಮುಖ್ಯ ಕಾರಣಗಳನ್ನು ಹುಡುಕುತ್ತಿರುವುದರಿಂದ, ಇವುಗಳಿಗೆ ವಿಶಿಷ್ಟವಾದ ಲಕ್ಷಣ ಇರಲೇಬೇಕೆನ್ನುವುದೂ ಅದು ಅಗತ್ಯವೆನ್ನುವುದೂ ಸ್ಪಷ್ಟ (ಮೆಟಫಿಸಿಕ್ಸ್). ಹೀಗೆ ಮೂಲಭೂತವಾದ ವಸ್ತುವನ್ನು ಹುಡುಕುವ ಪ್ರಯತ್ನ ನಿಜವಾದ ತತ್ತ್ವಶಾಸ್ತ್ರವೆನಿಸಿ, ಜತೆಗೆ ಅಂಥ ಮೂಲಭೂತವಾದ ವಸ್ತುವಿನ ಶೋಧನೆ ಎಂಬ ಒಂದೇ ಕ್ರಿಯೆಯಲ್ಲಿಯೇ ಸಮಸ್ತ ವಿಶ್ವವನ್ನು ಸಮೀಕ್ಷಿಸುವ ಪ್ರಯತ್ನವೂ ತತ್ತ್ವಶಾಸ್ತ್ರ ಆಗುತ್ತದೆ ಎನ್ನುವ ವಿಚಾರ ಅರಿಸ್ಟಾಟಲನ ನಿರೂಪಣೆಯಲ್ಲಿ ಸೂಚಿತವಾಗಿದೆ. ಹೇಗೆಂದರೆ, ತತ್ತ್ವಶಾಸ್ತ್ರ ಎಲ್ಲ ವಸ್ತುಗಳ ಬೇರುಗಳನ್ನು ಅಥವಾ ಮೂಲಕಾರಣಗಳನ್ನು ಅರಸಿ ಅಧ್ಯಯನ ಮಾಡುವ ಕ್ರಿಯೆ. ಎಂದರೆ ಯಾವುದಾದರೂ ಒಂದನ್ನು ಮೂಲಭೂತ ಎಂದು ನಿರ್ಣಯಿಸುವುದಾದರೆ, ಆ ಸ್ಥಾನಮಾನಕ್ಕೆ ಅರ್ಹವೆನ್ನುವ ಇತರ ಎಲ್ಲವನ್ನೂ ಅದು ನಿರ್ಧರಿಸಬೇಕಲ್ಲವೇ? ಎಲ್ಲದರ ಸಂಬಂಧದ ದೃಷ್ಟಿಯಿಂದಲೇ ಒಂದು ವಸ್ತು ಮೂಲಭೂತ ಎನಿಸಬೇಕಲ್ಲವೇ? ಆದ್ದರಿಂದ ಈ ಸಂಬಂಧ ಶೋಧನೆ ಇಲ್ಲದೆ ಯಾವ ನಿರ್ಣಯವೂ ಆಗಲಾರದು. ಈ ಶೋಧನೆ ತತ್ತ್ವಜಿಜ್ಞಾಸೆಯ ಸಮಗ್ರ ದೃಷ್ಟಿಗೆ ದ್ಯೋತಕ. ಏಕೆಂದರೆ ಈ ಸಮಗ್ರದ ದೃಷ್ಟಿಯಿಂದಲೇ ಒಂದನ್ನು ಮೂಲಭೂತವೆಂದೂ ಮಿಕ್ಕೆಲ್ಲವೂ ಅದರ ಮೇಲೆ ಆಧಾರಗೊಂಡಿರತಕ್ಕ ವಸ್ತುಗಳು ಎಂದೂ ತಿಳಿಯಬೇಕಾಗುತ್ತದೆ. ಎಂದರೆ ತತ್ತ್ವದೃಷ್ಟಿಗೆ ಸಮಸ್ತವೂ ವಿಚಾರವಾಗುತ್ತದೆ. ವಿಜ್ಞಾನಗಳು ಎಸಗುವ ಪ್ರತ್ಯೇಕಿಕರಣ ಅನುಭವದ ಕೆಲವು ಅಂಶವನ್ನು ಮಾತ್ರ ಗುರಿಯಾಗಿಸಿಕೊಂಡರೆ ಈ ಸಮಗ್ರೀಕರಣ ಅನುಭವದ ವಿಸ್ತಾರವಾದ ನೆಲೆಯನ್ನು ವೀಕ್ಷಿಸುತ್ತದೆ. ತತ್ತ್ವಶಾಸ್ತ್ರದ ವೀಕ್ಷಣೆಗೆ ಬದುಕಿನ ಎಲ್ಲ ಅಂಶಗಳೂ ಸಲ್ಲುವಂಥವೇ. ಅನುಭವದ ಕ್ಷೇತ್ರದಲ್ಲಿ ಒಳ್ಳೆಯದು ಕೆಟ್ಟದ್ದು ಅರಿವಿಗೆ ಸಿಗುವಂಥದು ಸಿಗದೆ ಇರುವಂಥದು ಸಂಗತವಾದದ್ದು ಅಸಂಗತವಾದದ್ದು ಹೀಗೆ ನಾನಾ ಘಟಕಗಳು ಇರುತ್ತವೆ. ಇವೆಲ್ಲವನ್ನೂ ತತ್ತ್ವಶಾಸ್ತ್ರ ವಿಚಾರದ ಮೂಸೆಯಲ್ಲಿ ಕರಗಿಸಿ ಸ್ಫುಟಗೊಳಿಸಿ ಅಳೆಯುತ್ತದೆ. ಅನುಭವದ ವಿವಿಧ ಕ್ಷೇತ್ರಗಳನ್ನು ಸಂಗತವಾದ ರೀತಿಯಲ್ಲಿ ಸಮನ್ವಯ ಮಾಡುತ್ತದೆ.

	ಇಂಥ ದೃಷ್ಟಿ ಸಾಮಾನ್ಯಜ್ಞಾನವಾಗಲಾರದು. ಪಾಮರನ ಜ್ಞಾನವಂತೂ ಆಗುವುದೇ ಇಲ್ಲ. ಅದು ವಾಡಿಕೆಯಾಗಿ ನಾವು ಕರೆಯುವ ವಿಜ್ಞಾನಗಳ ಜ್ಞಾನದಂತೆಯೂ ಅಲ್ಲದೆ, ಆಳ ಮತ್ತು ವಿಸ್ತಾರವಾದ ವಿಶಿಷ್ಟ ರೀತಿಯ ಜ್ಞಾನ. ಈ ಅರಿವು ಸಮಸ್ತ ಅನುಭವದ ಮೇಲೆ ಬೆಳಕನ್ನು ಬೀರಬಲ್ಲ ಚಿಂತನ ಕ್ರಿಯೆ.

 	ಇಲ್ಲಿ ಎಲ್ಲವೂ ಶೋಧಿತವಾಗುವುದೇ ? ಎಲ್ಲ ಸಮಸ್ಯೆಗಳಿಗೂ ಉತ್ತರ ಸಿಗುವುದೇ ? ಇಲ್ಲ, ಸಿಗಲಾರದು. ಆದರೆ ಪ್ರಜ್ಞೆಯ ಹಂತದಲ್ಲಿ ಜೀವನದ ವಿಶ್ವದ ರಹಸ್ಯಗಳನ್ನು ಸಮಸ್ಯೆಗಳನ್ನು ಪರ್ಯಾಲೋಚಿಸುವ ಕ್ರಿಯೆ ವಿಶಿಷ್ಟ ರೀತಿಯಲ್ಲಿ ಮಾನವನನ್ನು ಮಾನವನನ್ನಾಗಿ ಮಾಡುತ್ತದೆ ಎಂಬುದು ಖಚಿತ. ಇದೇ ಅದರ ಮಹತ್ತ್ವ. ಇದರಿಂದಲೇ ತತ್ತ್ವಶಾಸ್ತ್ರದ ಅಗತ್ಯವೂ ಕೂಡ.

1

	ದೇಶದೇಶಗಳಲ್ಲೂ ತಾತ್ತ್ವಿಕರಿದ್ದಾರೆ. ತಾವು ಕಂಡ ದರ್ಶನವನ್ನು ನಮಗೆ ಇತ್ತಿದ್ದಾರೆ. ಅವರು ಎದುರಿಸಿದ ಸಮಸ್ಯೆಗಳೂ ಅನೇಕ. ಎದುರಿಸಿದ ಬಗೆಯೂ ಅನೇಕ. ಆದ್ದರಿಂದಲೇ ಮೂಲಭೂತವಾದ ಅಂಶಗಳಲ್ಲಿ, ಅವನ್ನು ವಿಚಾರ ಮಾಡಿದ ಬಗೆಯಲ್ಲಿ ವೈವಿಧ್ಯ ಕಂಡುಬರುವುದು ಸಹಜ. ಅಷ್ಟೇ ಅಲ್ಲ. ಅನುಭವ ಬೆಳೆದಂತೆ ಪ್ರಜ್ಞಾವಿಕಾಸ ಬಲಗೊಂಡಷ್ಟೂ ತತ್ತ್ವಶಾಸ್ತ್ರದ ವಿಷಯದಲ್ಲಿ ರೂಪಾಂತರಗಳು ಅರ್ಥಾಂತರಗಳೂ ಕಂಡುಬರುತ್ತವೆ. ಉದಾಹರಣೆಗೆ : 

	1 ತತ್ತ್ವಶಾಸ್ತ್ರ ಯಾವ ವಿಷಯವನ್ನು ಕುರಿತದ್ದು ಎನ್ನುವುದರ ಬಗ್ಗೆ ಅಭಿಪ್ರಾಯ ವೈವಿಧ್ಯ ಉಂಟು. ಅದು ಭೌತಿಕ ಅಥವಾ ಅಭೌತಿಕ, ಜಡ ಅಥವಾ ಚೇತನಾತ್ಮಕ, ಏಕ ಅನೇಕ, ವಾಸ್ತವಿಕ ಆಧ್ಯಾತ್ಮಿಕ, ನಿರಪೇಕ್ಷ ಸಾಪೇಕ್ಷ, ನಿರ್ವಿಶೇಷ ಸವಿಶೇಷ, ಅಂಶಾಂಶ ಸಂಬಂಧ ಉಳ್ಳದ್ದು ಅಖಂಡವಾದದ್ದು ಸಮಗ್ರ ಅಥವಾ ಸಮುದಾಯ ರೂಪವಾದದ್ದು ವಿಕಾಸ ಹೊಂದುವಂಥದು ಅಥವಾ ಅಲ್ಲದ್ದು - ಹೀಗೆ.

	2 ತತ್ತ್ವಶಾಸ್ತ್ರ ಬಳಸುವ ವಿಧಾನದಲ್ಲೂ ವೈವಿಧ್ಯ ಕಾಣಬರುತ್ತದೆ. ಎಂದರೆ - ಬುದ್ಧಿ ಅಥವಾ ತರ್ಕ ಸಾಪೇಕ್ಷವಾಗಿ (ರ್ಯಾಷನಲಿಸಂ), ಅನುಭವ ಅಥವಾ ವ್ಯಾವಹಾರಿಕ ನೆಲೆಯಿಂದ (ಎಂಪಿರಿಸಿಸಂ), ವಸ್ತುಪ್ರಧಾನವಾಗಿ (ರಿಯಲಿಸಂ), ಚಿತ್ಪ್ರಧಾನವಾಗಿ (ಐಡಿಯಲಿಸಂ), ವಿಮರ್ಶೆಯ ರೀತಿಯಾಗಿ (ಕ್ರಿಟಿಸಿಸಂ), ವ್ಯವಹಾರ ಪ್ರಯೋಜನ ದೃಷ್ಟಿಯಿಂದ (ಪ್ರ್ಯಾಗ್ಮ್ಯಾಟಿಸಂ), ವಾಕ್ಯವಿಶ್ಲೇಷಣೆ ಎಂಬಂತೆ (ಲಾಜಿಕಲ್ ಅನ್ಯಾಲಿಸಿಸ್) , ವಸ್ತುಗಳ ಅಂತಃಸತ್ತ್ವ ಪ್ರಜ್ಞೆಗೆ ಗೋಚರವಾಗುವ ಆಧಾರದ ಮೇಲೆ (ಫೆನಾಮಿನಾಲಜಿ), ಸದ್ಯದಲ್ಲಿ ಒಬ್ಬನ ಅಸ್ತಿತ್ವವನ್ನೇ ಮೂಲಭೂತವೆಂದು ಪರಿಗಣಿಸುವುದರ ಮೂಲಕ (ಎಕ್ಸಿಸ್ಟ್ಯಾನ್ಷಿಯಲಿಸಂ) - ಹೀಗೆ.

	ವಿಶ್ವದ ಯಾವ ದೇಶದ ತತ್ತ್ವಶಾಸ್ತ್ರದ ಇತಿಹಾಸದಲ್ಲಾದರೂ ವೈವಿಧ್ಯಗಳು ಕಂಡುಬರುವುದು ಸಹಜ. ಎಂದರೆ ಸರ್ವಮಾನ್ಯವಾದ ಸರ್ವಸಮ್ಮತವಾದ ಸಿದ್ಧಾಂತ ಇರಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆ ಸಹಜವಾದದ್ದೇ. ಧರ್ಮ ಸಿದ್ಧಾಂತಗಳಲ್ಲಿ ಹೇಗೆ ಏಕಾಭಿಪ್ರಾಯವೂ ತತ್ತ್ವವಿಚಾರವಾಗಿಯೂ ಹಾಗೆಯೇ ಇದ್ದರೆ, ತತ್ತ್ವವೆನ್ನುವುದು ಸಾಪೇಕ್ಷವಲ್ಲದೇ ಎನ್ನಲೂಬಹುದು. ಈ ಸಾಪೇಕ್ಷತೆ ಏರ್ಪಡುವುದು ದೃಷ್ಟಿಕೋನಗಳ ಭೇದದಿಂದ. ಪರಮ ಸತ್ಯದ ದೃಷ್ಟಿಯಿಂದಲ್ಲ ಎನ್ನುವ ಉತ್ತರವೂ ಒಂದು. ಎಂದಿನವರೆಗೆ ಮಾನವ ಪರಮಸತ್ಯದ ನೆಲೆಯಲ್ಲಿ ನಿಲ್ಲಲಾರನೋ ಅಂದಿನವರೆಗೆ ಧರ್ಮವಾಗಲೀ, ತತ್ತ್ವವಾಗಲೀ ಸಾಪೇಕ್ಷವಾಗಿಯೇ ಇರುತ್ತದೆ - ಎಂದು ಈ ನಿಲುವಿನ ವಾದ. ಪರ್ವತ ಒಂದೇ ಆದರೂ ಅದನ್ನು ಕಾಣುವ ದೃಷ್ಟಿಕೋನಗಳ ವ್ಯತ್ಯಾಸದಿಂದ ಅದರ ವಿವರಣೆಗಳಲ್ಲಿ ವ್ಯತ್ಯಾಸ ಬರಬಹುದು. ಆದರೆ ಈ ವಿವರಣೆಗಳೇ ಪರ್ವತವಾಗಲಾರದು. ಪರ್ವತ ವಿವರಣೆಗಳಿಗಿಂತ ಬೇರೆ, ಅದು ಒಂದು. ಅನೇಕ ವಿವರಣೆಗಳಿಂದ ಅದು ಅನೇಕವೆನಿಸುವುದಿಲ್ಲ. ವಿವರಿಸುವವನು ಪರ್ವತವೇ ತಾನಾಗಬಲ್ಲನೇ? ಆಗುವುದಾದರೆ ಅಂಥವ ಬರಿ ತಾತ್ತ್ವಿಕನಾಗುವುದಿಲ್ಲ. `ತತ್ತ್ವವೇ ಆಗುತ್ತಾನೆ. ಈ ತೆರನಾದ ವಾದ ನಿರಪೇಕ್ಷ ಪರಮಾರ್ಥವಾದ (ಆಬ್ಸಲೂಟಿಸಂ) ಭಾರತೀಯ ತಾತ್ತ್ವಿಕರ ದೃಷ್ಟಿಯಲ್ಲಿ ಜ್ಞಾತೃ ಜ್ಞೇಯಗಳ ಭಿನ್ನತೆ ಅಭಿನ್ನತೆ ಇವುಗಳ ದರ್ಶನದ ಮೇಲೆ ಎಲ್ಲ ತತ್ತ್ವ ಪ್ರಭೇದಗಳೂ ನಿಂತಿವೆ.

2
	ಈ ಭೇದಗಳು ಏನೇ ಇರಲಿ ತತ್ತ್ವಕ್ರಿಯೆ ಎನ್ನುವುದು ವಿಶಿಷ್ಟವಾದದ್ದು ಎಂದು ಎಲ್ಲ ತಾತ್ತ್ವಿಕರೂ ಒಪ್ಪುತ್ತಾರೆ. ಆದರೆ ಈ ದಿಶೆಯಲ್ಲಿ ಹಲವು ಸಂಶಯಗಳು ಬರಬಹುದು. ತತ್ತ್ವ ಜ್ಞಾನಕ್ರಿಯೆ. ಆದರೆ ಇಂಥ ಇತರ ಜ್ಞಾನಕ್ರಿಯೆಗಳೂ ಇವೆ. ವಿಜ್ಞಾನವೆನ್ನುವ ಶಾಸ್ತ್ರವಿಶೇಷ ಜ್ಞಾನ ಕ್ರಿಯೆಯೇ. ಇವುಗಳಿಗಿಂತ ತತ್ತ್ವಶಾಸ್ತ್ರವೆಂಬ ಜ್ಞಾನಕ್ರಿಯಾ ವಿಶೇಷ ತನ್ನ ಯಾವ ಸ್ವರೂಪದಿಂದ ಭಿನ್ನವೆನಿಸಿಕೊಳ್ಳುತ್ತದೆ? ಈ ತೆರನಾದ ಸಂಶಯಗಳು ಬರುವುದರಿಂದ ತತ್ತ್ವಶಾಸ್ತ್ರದ ಸಾಮಾನ್ಯ ಲಕ್ಷಣಗಳನ್ನು ಗುರುತಿಸುವುದು ಅಗತ್ಯ. ಅಲ್ಲದೆ ಈ ತೆರನಾದ ವಿವೇಚನೆಯಿಂದ ತತ್ತ್ವಶಾಸ್ತ್ರದ ಸೀಮಾ ನಿರ್ಣಯವೂ ರೂಪುಗೊಳ್ಳುತ್ತದೆ. ಇದರ ಕಡೆ ಗಮನ ನೀಡಲು ಪ್ರಯತ್ನಿಸೋಣ. ಇದನ್ನೂ ತತ್ತ್ವಶಾಸ್ತ್ರದ ಇತಿಹಾಸದ ದೃಷ್ಟಿಯಿಂದಲೇ ಮಾಡಬೇಕಾಗುತ್ತದೆ.

	ಈ ಇತಿಹಾಸದಲ್ಲಿ ಮುಖ್ಯವಾಗಿ ನಾಲ್ಕು ರೀತಿಯ, ಆದರೆ ಪರಸ್ಪರ ಸಂಬಂಧವುಳ್ಳ, ಪ್ರವೃತ್ತಿಲಕ್ಷಣಗಳನ್ನು ತತ್ತ್ವಶಾಸ್ತ್ರ ಹೊಂದಿರುವುದು ಕಂಡುಬರುತ್ತದೆ. 

	1. ಮೊದಲನೆಯದಾಗಿ ತತ್ತ್ವಶಾಸ್ತ್ರ ವಿಶ್ವದ ವಿಚಾರವನ್ನು (ಅದರ ಎಲ್ಲ ಅಂಶಗಳನ್ನೂ ಒಳಗೊಂಡಂತೆ) ಮತ್ತು ಅದರೊಳಗೆ ಮಾನವನ ಸ್ಥಾನ ಏನೆಂಬುದನ್ನು ತಿಳಿಯಹೇಳುವ ಪ್ರಯತ್ನವೆಂದು ಕಾಣುತ್ತದೆ. ತತ್ತ್ವಶಾಸ್ತ್ರವನ್ನು ನಿರ್ಣಯಿಸುವ ದೃಷ್ಟಿಗೆ ಅಂಗಗಳಾಗಿ ಎಲ್ಲ ವಿಚಾರ ಕ್ರಿಯೆ ಅಥವಾ ಮಾರ್ಗಗಳೂ ಸೇರಿಕೊಳ್ಳುತ್ತವೆ. ಎಂದರೆ ಸಾಮಾನ್ಯಜ್ಞಾನ; ವಿಜ್ಞಾನವು ನೀಡುವ ವಿಶೇಷ ಜ್ಞಾನ; ನೀತಿ ಧರ್ಮ, ಸೌಂದರ್ಯಾನುಭವಗಳು ನೀಡುವ ಅಂತರ್ದೃಷ್ಟಿ - ಇವೆಲ್ಲದರ ಬಳಕೆಯಿಂದ ತತ್ತ್ವಶಾಸ್ತ್ರ ಜೀವನವನ್ನು ದೃಢವಾಗಿ ಮತ್ತು ಪೂರ್ಣವಾಗಿ ನೋಡಲು ಬಯಸುವ ಪ್ರಯತ್ನ ಎಂದು ಕಾಣುತ್ತದೆ. ಇಲ್ಲಿ ವ್ಯಷ್ಟಿ ಜ್ಞಾನಕ್ಕಿಂತ ಸಮಷ್ಟಿಜ್ಞಾನ, ವಿಶಿಷ್ಟಜ್ಞಾನಕ್ಕಿಂತ ಸಾಮಾನ್ಯಜ್ಞಾನ ಮುಖ್ಯವೆನಿಸುತ್ತದೆ. ಕಾಲ, ದೇಶ, ಜನಾಂಗ, ಸಂಸ್ಕøತಿಗಳಿಗೆ ಸಾಪೇಕ್ಷವಾಗಿ ಅಲ್ಲದೆ ಎಲ್ಲರಿಗೂ ಅನ್ವಯವಾಗಬಲ್ಲಂತೆ ವಿಚಾರದೃಷ್ಟಿಯನ್ನು ಮುಂದಿಡುವ ಪ್ರಯತ್ನ (ಸಿನಾಪ್ಟಿಕ್) ವೆಂಬಂತೆ ತೋರುತ್ತದೆ.

	2. ಈ ವಿಶಾಲದೃಷ್ಟಿಗೆ ಅನುವು ಮಾಡಿಕೊಡುವುದಕ್ಕೆ ಮುಖ್ಯ ಅಂಗವಾದ ಚಿಂತನ (ರಿಫ್ಲೆಕ್ಷನ್) ಎಂಬ ಕ್ರಿಯೆಯನ್ನು ತತ್ತ್ವಜ್ಞಾನಿ ಬಳಸುತ್ತಾನೆ. ಎಂದರೆ ಸಾಮಾನ್ಯ ವ್ಯಾವಹಾರಿಕ ವೈಜ್ಞಾನಿಕ ಜ್ಞಾನ ನಿರ್ಣಯಗಳನ್ನು ಮೀರುವ ರೀತಿಯಲ್ಲಿ ಸಮಸ್ಯಾ ಪರಿಹಾರಗಳನ್ನು ತತ್ತ್ವಶಾಸ್ತ್ರ ಉಪಕಲ್ಪನೆಗಳ (ಹೈಪಾತಿಸಿಸ್) ದ್ವಾರ ನೀಡಲು ತೊಡಗುತ್ತದೆ. ಈ ಕ್ರಿಯೆಯನ್ನು ಅನುಸರಿಸಿ ಹೇಳುವುದಾದರೆ ತತ್ತ್ವಶಾಸ್ತ್ರವನ್ನು ಪೂರ್ಣಸತ್ಯದ ಬಗ್ಗೆ ವಿಸ್ತಾರವಾದ ವಿವರಣೆ ನೀಡುವ ಪ್ರಯತ್ನ ಎಂದು ಹೇಳಬಹುದು. ಇಲ್ಲಿ ವಿಶೇಷ ಜ್ಞಾನಗಳ ಸಮನ್ವಯವೂ ಸಿಗುವಂತಾಗುತ್ತದೆ. ಈ ಸಮನ್ವಯಗಳ ಅಭಾವದಿಂದ ವಿಜ್ಞಾನಗಳು ನೀಡುವ ಜ್ಞಾನರಾಶಿಗಳು ನಮ್ಮ ಜೀವನದ ಅರ್ಥಕ್ಕೆ ಮೌಲ್ಯನಿರ್ಧಾರಕ್ಕೆ ಉಪಯೋಗವಿಲ್ಲದೆ ಹೋಗಬಹುದು. ಸಂಸ್ಕøತಿ ಮತ್ತು ನಾಗರಿಕತೆಗಳ ಬೆಳವಣಿಗೆ ತತ್ತ್ವಶಾಸ್ತ್ರದ ಸಮನ್ವಯ ಕ್ರಿಯೆ (ಸಿಂತಿಸಿಸ್) ಹೆಚ್ಚು ಪೋಷಕ.

	3. ತತ್ತ್ವಶಾಸ್ತ್ರದ ಕ್ರಿಯಾ ಚಟುವಟಿಕೆ ಮತ್ತೊಂದು ವಿಶೇಷ ರೀತಿಯಲ್ಲಿ ನಮಗೆ ಕಂಡುಬರಬಹುದು. ಇಲ್ಲಿಯೂ ಸಾಮಾನ್ಯ ವಿಜ್ಞಾನಗಳ ದೃಷ್ಟಿಯಿಂದ ಇದು ಹೇಗೆ ಭಿನ್ನ ಎಂಬುದು ಸ್ಪಷ್ಟ. ವಿಜ್ಞಾನಗಳು ತಮ್ಮ ವಿಷಯ (ಸಬ್ಜಕ್ಟ್) ಗಳನ್ನು ಘಟನೆ (ಫ್ಯಾಕ್ಟ್) ಗಳೆಂದೇ ವಿಶ್ಲೇಷಿಸುತ್ತವೆ. ಅರಿಯತಕ್ಕ ಚೇತನದಿಂದ ಪ್ರತ್ಯೇಕಿಸಿ ಅವನ್ನು ವಿವೇಚಿಸುವ ಕ್ರಮ ಅಲ್ಲಿದೆ. `ಅರಿವಿನ ವಿಚಾರ ಅಷ್ಟಾಗಿ ಮುಖ್ಯವಲ್ಲದೆ ಅರಿತದ್ದೇ ಸತ್ಯ ಎನ್ನುವ ಧೋರಣೆ ವಿಜ್ಞಾನದ್ದು. ಆದರೆ ತತ್ತ್ವಶಾಸ್ತ್ರ ಘಟನೆಗಳೆಲ್ಲ `ಪ್ರಜ್ಞಾಚೈತನ್ಯ ದೃಷ್ಟಿಯಿಂದ ನೋಡಿದ ವಿಷಯಗಳು ಎಂದು ಬಗೆದು, ಘಟನೆ ಅತವಾ ವಾಸ್ತವಿಕ ಸನ್ನಿವೇಶಗಳನ್ನು ಪ್ರಜ್ಞಾಸಂಬಂಧದಿಂದ ನೋಡುತ್ತದೆ. ಪ್ರಪಂಚ ಪ್ರಜ್ಞೆಗೆ ತೋರುವ ಕ್ರಮದಲ್ಲಿ ವಿವೇಚನೆಗೆ ವಿಷಯವಾಗುತ್ತದೆ ಎನ್ನುವ ಈ ಪದ್ಧತಿಯನ್ನು ಫೆನಾಮಿನಾಲಜಿ ಎನ್ನುತ್ತಾರೆ. ಇಲ್ಲಿ ಪ್ರಜ್ಞೆ ಎಂದರೆ ಕೇವಲ ಕಲ್ಪನಾಶಕ್ತಿಯಲ್ಲ. ವಸ್ತು-ಆಧಾರಿತ-ಅರಿವು. ಆದರೆ ಈ ಅರಿವು ವಿಶ್ಲೇಷಣೆಯ ರೂಪದ್ದಲ್ಲ. ವಿವರಣೆಯ ರೂಪದ್ದು. ಸತ್ಯವನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ. ಅದನ್ನು ವಿವರಿಸಿಯೇ ಆಗಬೇಕು. ತತ್ತ್ವಶಾಸ್ತ್ರದ ಮುಖ್ಯ ಗುರಿ ಈ ವಿವರಣೆ (ಡಿಸ್ಕ್ರಿಪ್ಷನ್) ಎನ್ನುವ ಕ್ರಿಯೆ.

	4. ಮತ್ತೊಂದು ವಿಶಿಷ್ಟ ಲಕ್ಷಣ ತತ್ತ್ವಶಾಸ್ತ್ರಕ್ಕೇ ಸೇರಿದ್ದು. ಅದೆಂದರೆ ನಮ್ಮ ಜೀವನ ಮತ್ತು ಜಗತ್ತುಗಳ ಬಗ್ಗೆ ಎಂದು ವಿಶ್ವದೃಷ್ಟಿ (ವಲ್ರ್ಡ್ ವ್ಯೂ) ಯನ್ನು ನೀಡುವುದು. ಅಲ್ಲದೆ ವೈಯಕ್ತಿಕ ಮತ್ತು ಸಾಮಾಜಿಕ ಜೀವನಕ್ಕೆ ಅಗತ್ಯವಾದ ನಿಯಮಗಳನ್ನೂ ತೋರಿಸುವುದು. ನಮ್ಮ ಧಾರ್ಮಿಕ ಮತ್ತು ನೈತಿಕ ಜೀವನಗಳು ವಿಶ್ವನಿಯಮಗಳಿಗೆ ಸಂಬಂಧಿಸಿರಬೇಕೆ ? ಅಧೀನವಾಗಿರಬೇಕೆ ? ಇಲ್ಲಿನ ಶ್ರೇಯಸ್ಸು ಕೇವಲ ಪ್ರಾಪಂಚಿಕವಾದದ್ದೇ ? ಅಥವಾ ಒಬ್ಬನ ಜೀವನದಾಚೆಗೂ ಹರಿಯುತ್ತದೆಯೇ ?-ಇವೇ ಮುಂತಾದ ಪ್ರಶ್ನೆಗಳ ವಿವೇಚನೆಯಿಂದ ವಿವೇಕ ಜೀವನದ ತಳಹದಿಯನ್ನು ಸೂಚಿಸುತ್ತದೆ.

	ಮೇಲೆ ಹೇಳಿರುವ ವಿಶ್ವದೃಷ್ಟಿ ಯಾವುದಾದರೂ ಸತ್ಯವೆಂದು ಅಂಗೀಕರಿಸಿದ ಪ್ರಮಾಣದ ಮೇಲೆ ನಿಂತಿರಬಹುದು. ಆದರೆ, ಅಂಥ ಪ್ರಮಾಣದ ಆಧಾರದ ಮೇಲೆ ಸತ್ಯವಾವುದೆಂಬುದನ್ನು ಸ್ಪಷ್ಟಪಡಿಸಲು ಸಾಧ್ಯವೇ? ಅಸತ್ಯ ಮತ್ತೊಂದು ಎಂದು ಹೇಳಲು ಸಾಧ್ಯವೇ? ಯಾವುದಾದರೂ ಒಂದನ್ನು ನಮ್ಮ ಅನುಭವದ ಅಂಶವೆಂದು ಹೇಳುವುದಾದರೆ ಅದು ರೂಪಗೊಳ್ಳಲು ನೈಸರ್ಗಿಕವಾಗಿ ನಮ್ಮ ಬುದ್ಧಿಯ ರಚನೆಯಲ್ಲಿಯೇ ಯಾವುದಾದರೂ ಅಂಶಗಳಿರಬೇಕೆ? ಇಂದ್ರಿಯಜನ್ಯಜ್ಞಾನದ ಕಾಣಿಕೆ ನಮ್ಮ ಈ ಅನುಭವಕ್ಕೆ ಎಷ್ಟು ಕಾರಣ?-ಇವೇ ಮುಂತಾದ ಸಮಸ್ಯೆಗಳನ್ನು ಸಾಮಾಸಿಕವಾಗಿ (ಸಿಂತೆಟಿಕಲ್) ವಿವರಣಾತ್ಮಕವಾಗಿ ತೋರಿಸಿಕೊಡುವಂಥ ವಿಶ್ಲೇಷಣ ಕ್ರಿಯೆಯೇ ತತ್ತ್ವದ ಮುಖ್ಯಲಕ್ಷಣ ಎನ್ನುವುದೂ ಉಂಟು. ಈ ದೃಷ್ಟಿಯಿಂದ ನೋಡಿದರೆ ತತ್ತ್ವಶಾಸ್ತ್ರವೆನ್ನುವುದು ಎಲ್ಲ ಇತರ ಶಾಸ್ತ್ರಗಳ ಸಾಮಾನ್ಯಜ್ಞಾನದ ಉಪಕಲ್ಪನೆಗಳು ಮತ್ತು ಅವುಗಳ ಸಾಧನೋಪಾಯಗಳನ್ನು ಕೂಲಂಕುಷವಾಗಿ ಚಿಂತಿಸುವ ಶಾಸ್ತ್ರವೆನಿಸುತ್ತದೆ. ಈ ಕ್ರಿಯೆಗೆ ಒಳಪಡುವ ವಿಷಯಗಳು ಅನೇಕ - ಸತ್ಯ, ಪ್ರಮಾ ಒಳಿತು, ಮನಸ್ಸು, ಭೌತವಸ್ತು, ಆತ್ಮವಸ್ತು, ಈಶ್ವರತತ್ತ್ವ, ಕಾಲ-ದೇಶ, ಕಾರ್ಯ ಕಾರಣಭಾವ-ಇತ್ಯಾದಿಗಳೆಲ್ಲ ವಿಚಾರ್ಯ ವಿಷಯಗಳೇ. ಈ ಕ್ರಿಯೆಯಲ್ಲಿ ತೊಡಗಿರುವ ಅಧ್ಯಯನ ಮುಖ್ಯವಾಗಿ ನಮ್ಮ ಅನುಭವದಲ್ಲಿ ಒದಗುವ ಅನೇಕ ಸಂಗತಿಗಳ ಸ್ವರೂಪವನ್ನು ಸ್ಪಷ್ಟಗೊಳಿಸುವ ಕ್ರಿಯೆ ಎಂದು ತೋರುತ್ತದೆ.

	ಹೀಗೆ ತಾತ್ತ್ವಿಕ ಚಿಂತನೆ ಚಿಂತನಾತ್ಮಕ, ವಿವರಣಾತ್ಮಕ, ನಿಯಮಾತ್ಮಕ ಮತ್ತು ವಿಶ್ಲೇಷಣಾತ್ಮಕವಾಗಿ ಕಂಡುಬರುತ್ತದೆ. ಇವನ್ನು ತತ್ತ್ವಚಿಂತನೆಯಲ್ಲಿ ಪರಸ್ಪರ ಪೂರಕಗಳಾಗಿಯೂ ಉಪಯೋಗಿಸಿಕೊಂಡು ತತ್ತ್ವಶಾಸ್ತ್ರದ ಪುಷ್ಟಿಗೆ ಸಹಾಯಕವಾಗುವಂತೆಯೂ ಮಾಡಬಹುದಾಗಿದೆ. ಈ ಕ್ರಮದಲ್ಲೂ ಹಲವು ಬಗೆಗಳುಂಟೆಂದು ತತ್ತ್ವಶಾಸ್ತ್ರದ ಚರಿತ್ರೆ ತೋರಿಸುತ್ತದೆ.

	ಹಲವು ತಾತ್ತ್ವಿಕರ ಮೇರೆಗೆ ಈ ಮೇಲೆ ಹೇಳಿದ ಚಿಂತನ ಮಾರ್ಗಗಳು ಒಂದೇ ಜ್ಞಾನಕ್ರಿಯೆ ಅಥವಾ ಸಮಗ್ರವೆನಿಸುವ ತತ್ತ್ವಜಿಜ್ಞಾಸೆಯ ಅಂಶಗಳೇ ಹೊರತು ಬೇರೆಯಲ್ಲ. ಪಾಶ್ಚಾತ್ಯ ತತ್ತ್ವ ಚಿಂತನೆಯನ್ನು ತೆಗೆದುಕೊಂಡಲ್ಲಿ ಸಮಗ್ರ ದೃಷ್ಟಿಯನ್ನು ಒತ್ತಿಹೇಳುವ ಪ್ರಾಚೀನ ಗ್ರೀಕ್ ತಾತ್ತ್ವಿಕರಾದ ಪ್ಲೇಟೋ ಮತ್ತು ಅರಿಸ್ಟಾಟಲ್, ಆಧುನಿಕ ತಾತ್ತ್ವಿಕರಾದ ಸ್ಪಿನೋಜó ಮತ್ತು ಹೇಗಲ್ ಮುಂತಾದವರು ತತ್ತ್ವಶಾಸ್ತ್ರದ ಪೂರ್ಣತೆ-ಇವೆಲ್ಲದರ ಬಳಕೆಯಿಂದ ಸಾಧ್ಯ ಎನ್ನುತ್ತಾರೆ. ಆದರೆ ಮತ್ತಿತರರು ಇವನ್ನು ಒಂದೇ ತತ್ತ್ವಚಿಂತನೆಯ ಅಂಶಗಳೆಂದೆಣಿಸದೆ, ಅವು ಪ್ರತ್ಯೇಕ ತತ್ತ್ವಶಾಸ್ತ್ರಗಳು ಎನ್ನುತ್ತಾರೆ. ಇದು ಆಧುನಿಕ ದೃಷ್ಟಿ. ಇವುಗಳಲ್ಲಿ ಯಾವುದನ್ನಾದರೂ ಒಂದನ್ನು ಆರಿಸಿಕೊಂಡು ವಿಶಿಷ್ಟ ತತ್ತ್ವಶಾಸ್ತ್ರವಾಗಿ ರೂಪಿಸಬಹುದು ಎನ್ನುವುದು ಇಲ್ಲಿನ ಕ್ರಮ. ಉದಾಹರಣೆಗೆ : ಕಾಂಟ್ ಹೇಳುವಂತೆ ತತ್ತ್ವಶಾಸ್ತ್ರ ಮುಖ್ಯವಾಗಿ ಚಿಂತನೆಯ ವಿಮರ್ಶೆಯಲ್ಲದೆ ಬೇರೇನಲ್ಲ. ವಿಟ್‍ಗೆನ್‍ಸ್ಟಿನ್‍ನ ದೃಷ್ಟಿಯಲ್ಲಿ ತತ್ತ್ವಶಾಸ್ತ್ರದ ವೈಶಿಷ್ಟ್ಯ ಇರುವುದು ವಾಕ್ಯ ವಿಶ್ಲೇಷಣೆಯಲ್ಲಿ. ಅಮೆರಿಕದ ಜಾನ್ ಡ್ಯೂಯಿಯ ಪ್ರಕಾರ ತತ್ತ್ವಶಾಸ್ತ್ರದ ಮುಖ್ಯ ಉದ್ದೇಶ ನಿಯಮಾತ್ಮಕವಾದದ್ದು. ಎಂದರೆ ಮಾನವನ ಸಾಮೂಹಿಕ ಚಟುವಟಿಕೆಗಳಿಗೆ ರೂಪಕೊಟ್ಟು ಅವನನ್ನು ಪ್ರಗತಿಯ ಕಡೆ ಒಯ್ಯುವ ಧ್ಯೇಯ ಮತ್ತು ಮೌಲ್ಯಗಳೇನೆಂಬುದನ್ನು ವಿಚಾರಿಸುವ ಪ್ರಯತ್ನ ಆಗಬೇಕು ಎನ್ನುವುದು. ಆಧುನಿಕ ವಿಚಾರಪರರಲ್ಲಿ ಇತ್ತೀಚೆಗೆ ವಿರಳವೆನ್ನಬಹುದಾದ ಪ್ರಾಚೀನ ದೃಷ್ಟಿಯನ್ನು ಎ. ಎನ್. ಹ್ವೈಟ್‍ಹೆಡ್ ಬೆಳೆಸಿಕೊಂಡಿದ್ದಾನೆ. ಪ್ರಾಚೀನರು ಕಂಡಂತೆಯೇ ತತ್ತ್ವಶಾಸ್ತ್ರದ ಕ್ರಿಯೆ ಚಿಂತನಾತ್ಮಕವಾಗಿದ್ದು ಸಮಗ್ರ ದೃಷ್ಟಿಯನ್ನು ರೂಢಿಸುವಂಥ ಮತ್ತು ಜೀವ, ಜಗತ್ತು ಹಾಗೂ ಈಶ್ವರ-ಇವನ್ನು ಒಂದು ವ್ಯವಸ್ಥಿತ ರಚನೆಯಲ್ಲಿ ನೀಡಬಲ್ಲ ಪ್ರಯತ್ನವಾಗಿರಬೇಕೆಂದು ಇವನ ಮತ.
						

3
	ಹೀಗೆ ತತ್ತ್ವಚಿಂತನೆ ತತ್ತ್ವಕ್ರಿಯೆಗಳ ಇತಿಹಾಸವನ್ನು ವೀಕ್ಷಿಸಿದಲ್ಲಿ ಈ ಮೇಲಿನ ಅಂಶಗಳನ್ನು ಪ್ರತ್ಯೇಕವಾಗಿ ಅಥವಾ ಒಟ್ಟಿಗೆ ಉಪಯೋಗಿಸಿಕೊಂಡು ತಾತ್ತ್ವಿಕರು ತಮ್ಮ ಸಿದ್ಧಾಂತಗಳನ್ನು ಮಂಡಿಸಿರುವುದು ಕಂಡುಬರುತ್ತದೆ.

4

	ತಾತ್ತ್ವಿಕರು ನೀಡಿರುವ ಸಿದ್ಧಾಂತಗಳು ಯಾವುದೇ ಆಗಿರಲಿ ಪ್ರತಿಯೊಂದರಲ್ಲಿಯೂ ಆಯಾ ಸಿದ್ಧಾಂತಕ್ಕೆ ಅನ್ವಯಿಸುವಂತೆ ವಿಷಯ ಅಥವಾ ವಸ್ತುವನ್ನು ವಿಚಾರಿಸುವ ದೃಷ್ಟಿಯಿಂದ ಹಲವು ವಿಭಾಗಗಳನ್ನು ಕಾಣಬಹುದು. ಇವನ್ನು ಸಾಮಾನ್ಯವಾಗಿ ತತ್ತ್ವಶಾಸ್ತ್ರದ ವಿಭಾಗಗಳೆಂದೇ ಗಣಿಸಬಹುದು. ಇವುಗಳಲ್ಲಿ ಪ್ರಮುಖವಾದವನ್ನು ಇಲ್ಲಿ ಗಮನಿಸಬಹುದು.

	1. ಮೆಟಫಿಸಿóಕ್ಸ್ ವಿಭಾಗ: ಇದರ ಮುಖ್ಯ ವಿಚಾರವಸ್ತು ಮೂಲಭೂತವಾದ ಸತ್, ಸತ್ಯ, ಸದ್ವಸ್ತು ಎನ್ನುವುದರ ವಿವೇಚನೆ (ಬಹುಶಃ ಭಾರತೀಯರ ದೃಷ್ಟಿಯಲ್ಲಿ ನಿಜವಾದ ತತ್ತ್ವಶಾಸ್ತ್ರ ಎನ್ನುವುದು ಈ ಜಿಜ್ಞಾಸೆಯೇ). ಸಾಮಾನ್ಯವಾಗಿ ಈ ವಿವೇಚನೆಯಲ್ಲಿ ಬರುವ ಪ್ರಶ್ನೆಗಳೆಂದರೆ - ಸತ್ ಅಥವಾ ಅಸ್ತಿತ್ವ ಎನ್ನುವುದರ ಲಕ್ಷಣವೇನು? ಅದು ಏಕವೇ, ಅನೇಕವೇ? ಜಡವೇ, ಚೈತನ್ಯವೇ? ಅದು ಉದ್ದೇಶ ಹೊಂದಿರುವಂಥದೇ ಅಥವಾ ಯಾಂತ್ರಿಕವೇ? ಈ ಜಿಜ್ಞಾಸೆಯನ್ನು ಹಲವು ರೀತಿಯಲ್ಲಿ ಹೆಸರಿಸಬಹುದು. ಅಸ್ತಿತ್ವದ ಜಿಜ್ಞಾಸೆ ಆನ್ಟಾಲಜಿ, ವಿಶ್ವರಚನೆ ಮತ್ತು ಅದರ ಉದ್ದೇಶದ ಜಿಜ್ಞಾಸೆ ಕಾಸ್ಮಾಲಜಿ. ಪ್ರಕೃತಿಯಲ್ಲಿ ಮನಸ್ಸಿನ ಸ್ಥಾನ ಮತ್ತು ಮನಸ್ಸಿಗೆ ಸಂಬಂಧಿಸಿದ ವಿಚಾರ ರ್ಯಾಷನಲ್ ಸೈಕಾಲಜಿ. ಈಶ್ವರನ ಕಲ್ಪನೆ, ಜಗತ್ತುಜೀವರುಗಳಿಗೆ ಅದರ ಸಂಬಂಧ - ಇವನ್ನು ಕುರಿತ ಜಿಜ್ಞಾಸೆ ರ್ಯಾಷನಲ್ ತಿಯಾಲಜಿ. ಮೌಲ್ಯಗಳ ವಿಚಾರ, ಅವುಗಳ ಅರ್ಥ ಜೀವನದಲ್ಲಿ ಮತ್ತು ವಿಶ್ವದಲ್ಲಿ ಅವುಗಳ ಪಾತ್ರ, ಸ್ಥಾನ ಇತ್ಯಾದಿ ಆಕ್ಸಿಯಾಲಜಿ. ಇವು ತತ್ತ್ವಶಾಸ್ತ್ರದ ಪ್ರಮುಖ ಕ್ಷೇತ್ರಗಳು. ಜಿಜ್ಞಾಸಾ ವಿಧಾನವನ್ನು ಅನುಸರಿಸಿ ಹೇಳುವುದಾದರೆ ಈ ಎಲ್ಲ ಕ್ಷೇತ್ರಗಳಲ್ಲೂ ಪ್ರಯೋಗಕ್ಕಿಂತ ಚಿಂತನ ಮತ್ತು ವಿಚಾರ ವಿಧಾನಗಳೇ ಪ್ರಧಾನವಾಗಿರುತ್ತವೆ.

	2. ಎಪಿಸ್ಟೀಮೋಲಜಿ : ಇದು ಜ್ಞಾನ ಮೀಮಾಂಸೆ : ಇಲ್ಲಿ ಮುಖ್ಯವಾಗಿ ವಿಚಾರಕ್ಕೆ ಬರುವ ಸಮಸ್ಯೆಗಳೆಂದರೆ - ಜ್ಞಾನದ ಸ್ವರೂಪ, ಅದರ ಉತ್ಪತ್ತಿ, ಅದರ ಸತ್ಯ, ಅದು ಸತ್ಯವಾಗಬೇಕಾದರೆ ಉಪಯೋಗಿಸಿಕೊಳ್ಳುವ ಪ್ರಮಾಣಗಳು, ಜ್ಞಾನದ ಸತ್ಯನಿರ್ಧಾರದ ಮಾನದಂಡಗಳು, ಜ್ಞಾನ ಅಸತ್ಯವೆನಿಸಿದರೆ, ಅದು ಹೇಗೆ, ವಿಪರ್ಯಾಸಗಳು ಹೇಗೆ ಉಂಟಾಗುತ್ತವೆ - ಇತ್ಯಾದಿ.

	3 ನಾರ್ಮಟಿವ್ ಫಿಲಾಸಫಿ : ನಿಯಮಗಳನ್ನೇ ವಿಚಾರಿಸುವ ಭಾಗವಿದು. ನಿಯಮಗಳು ಮತ್ತು ಆದರ್ಶಗಳಿಗೆ ಸಂಬಂಧಿಸಿದಂತೆ ನಡೆಯಬೇಕಾದ ಮೌಲ್ಯ ನಿರ್ಧಾರ ಇಲ್ಲಿನ ಕರ್ತವ್ಯ. ಈ ಶೀರ್ಷಿಕೆಯಲ್ಲಿಯೇ ತತ್ತ್ವಶಾಸ್ತ್ರದ ಅನೇಕ ವಿಭಾಗಗಳನ್ನು ಸೇರಿಸಬಹುದು - ತರ್ಕಶಾಸ್ತ್ರ, ನೀತಿಶಾಸ್ತ್ರ ಕಲೆ ಮತ್ತು ಸೌಂದರ್ಯ, ಧರ್ಮ ಅಥವಾ ಮತ, ಸಾಮಾಜಿಕ ತತ್ತ್ವ, ರಾಜಕೀಯ ತತ್ತ್ವ ಇತ್ಯಾದಿ.

	4 ಫಿಲಾಸಫಿ ಆಫ್ ಸೈನ್ಸ್ : ತತ್ತ್ವಶಾಸ್ತ್ರದ ವಿಭಾಗವೆಂಬಂತೆ ಆಧುನಿಕವಾಗಿ ವಿಜ್ಞಾನಕ್ಕೂ ಸಂಬಂಧಿಸಿದ ಜಿಜ್ಞಾಸೆಯಿದು. ಸಾಂಪ್ರದಾಯಿಕ ತತ್ತ್ವಶಾಸ್ತ್ರದಲ್ಲಿ ಬರುವ - ಅದರಲ್ಲೂ ಮುಖ್ಯವಾಗಿ ಜೀವ, ಜಡ, ವಿಶ್ವ, ಕಾರ್ಯಕಾರಣ, ಕಾಲ-ದೇಶ ಮುಂತಾದ ವಿಷಯಗಳು ವಿಜ್ಞಾನದ ದೃಷ್ಟಿಯಿಂದ ಹೇಗೆ ಅರ್ಥಮಾಡಿಕೊಳ್ಳಬಹುದು ಎಂದು ಜಿಜ್ಞಾಸೆಗೆ ಬರುತ್ತವೆ. ಅಲ್ಲದೆ ವೈಜ್ಞಾನಿಕ ವಿಚಾರ ಮಾರ್ಗಗಳು ಮತ್ತು ವಿಜ್ಞಾನ ನೀಡುವ ಸಾಮಾನ್ಯ ಸಿದ್ಧಾಂತಗಳು ಎಷ್ಟರ ಮಟ್ಟಿಗೆ ತಾತ್ತ್ವಿಕ ಅಂಶಗಳಿಂದ ರೂಪುಗೊಂಡಿವೆ. ಅವುಗಳಿಗೆ ಸಾರ್ವತ್ರಿಕವಾದ ವಿಶ್ವದೃಷ್ಟಿ ಬರಬೇಕಾದರೆ ತತ್ತ್ವಶಾಸ್ತ್ರ ಹೇಗೆ ನೆರವು ನೀಡುತ್ತದೆ ಎಂದು ಇಲ್ಲಿ ವಿಚಾರ ಮಾಡಲಾಗುತ್ತದೆ.

	ಹೀಗೆ ಅನುಭವ ಬೆಳೆದಷ್ಟೂ ಚಿಂತನಾಕ್ಷೇತ್ರ ರೂಪುಗೊಳ್ಳುವುದೊಂದೇ ಅಲ್ಲದೆ ವಿಚಾರ ಕ್ರಮ ಅಥವಾ ಪದ್ಧತಿಗಳೂ ಬೆಳೆಯುತ್ತವೆ, ತಾತ್ತ್ವಿಕನಾದವನಿಗೆ ವಸ್ತುವಾಗಿ ಬರಲಾರದ ಯಾವ ವಿಷಯವೂ ಇರುವುದಿಲ್ಲ. ತತ್ತ್ವಚಿಂತನೆಯ ಕ್ರಮದಲ್ಲಿ ಅಳೆಯದ ಯಾವ ಜೀವನಕ್ಷೇತ್ರವೂ ಸಂಸ್ಕøತಿಯ ದೃಷ್ಟಿಯಲ್ಲಿ ಅರ್ಥಪೂರ್ಣ ಅಥವಾ ಮಹತ್ತ್ವವೆಂದೆನಿಸುವುದಿಲ್ಲ. ಮಾನವನ ಜೀವನ ಯೋಗ್ಯವಾಗಬೇಕಾದರೆ ಆತನ ಜೀವನಮಾರ್ಗ ವಿಚಾರಕ್ಕೆ ಒಳಪಡಬೇಕು ಎನ್ನುವ ದೃಷ್ಟಿಯೇ ತತ್ತ್ವಶಾಸ್ತ್ರದ ಮುಖ್ಯ ಉದ್ದೇಶ. ಇದನ್ನು ಗ್ರೀಕ್ ತಾತ್ತ್ವಕ ಸಾಕ್ರಟೀಸ್ ಬಹು ಚೆನ್ನಾಗಿ ಹೇಳಿದ್ದಾನೆ. - `ವಿಚಾರಕ್ಕೆ ಒಳಗಾಗದ ಜೀವನ ಜೀವಿಸಲು ಯೋಗ್ಯವಲ್ಲ ಎಂದು. ಈ ದೃಷ್ಟಿಯನ್ನು ಬೆಳೆಸಿಕೊಳ್ಳುವುದರಲ್ಲಿಯೇ ಇತರ ಪ್ರಾಣಿಗಳಿಗಿಂತ ಮಾನವ ಪ್ರತ್ಯೇಕವೆನಿಸುತ್ತಾನೆ. ಇದೇ ಅತನ ಸಂಸ್ಕøತಿಯ ಬೆಳವಣಿಗೆಗೆ ತಳಹದಿಯಾಗುತ್ತದೆ.

	ಈ ಮೇಲೆ ಹೇಳಿರುವ ಅನೇಕ ವಿವರಗಳು ಭಾರತೀಯ ತತ್ತ್ವದೃಷ್ಟಿಗೂ ಅನ್ವಯವಾಗುತ್ತದೆ. ಆದರೆ ಇಲ್ಲಿ ಕಾಣುವ ವಿಶಿಷ್ಟ ಅಂಶವೆಂದರೆ ತತ್ತ್ವಶಾಸ್ತ್ರ ಕೇವಲ ಜ್ಞಾನಾರ್ಜನೆ ಎಂದಲ್ಲ. ಅದು ಅನುಭವದಲ್ಲೂ ಜೀವನದಲ್ಲೂ ಪ್ರತಿ ಬಿಂಬಿಸಬೇಕು ಎನ್ನುವಂಥದ್ದು. ತತ್ತ್ವಜ್ಞಾನವೆಂದರೆ ವಿಷಯ ಅಥವಾ ವಸ್ತು ಯಾವುದೇ ಆಗಿರಲಿ ಅದರ ವಸ್ತುತ್ವವನ್ನು ಅಥವಾ ಅದರತನವನ್ನು (ತತ್ + ತ್ವ) ಕಾಣುವುದು, ಎಂದರೆ ಮೂಲಭೂತವಾಗಿ ಎಲ್ಲದರ ಅಸ್ತಿತ್ವದ ಅಥವಾ ಸ್ವರೂಪ ಲಕ್ಷಣದ ದರ್ಶನಾಕಾಂಕ್ಷೆ ತಾತ್ತ್ವಿಕನಿಗೆ ಇರಬೇಕು-ಎನ್ನುವಂಥದ್ದು. ಇದು ಸದ್ವಸ್ತುವಿನ ಅಂತರಂಗವನ್ನು ಅರಿಯುವ ಬಯಕೆ. ವಸ್ತುಸ್ವರೂಪಾವಧಾರಣ ಕ್ರಿಯೆಯೇ ವಿದ್ಯೆ ಎಂದು ಶಂಕರಾಚಾರ್ಯರು ಹೇಳುತ್ತಾರೆ. ಈ ವಿದ್ಯೆ ಅಂತಿಮವಾಗಿ ಭಾರತೀಯ ತಾತ್ತ್ವಿಕರ ದೃಷ್ಟಿಯಲ್ಲಿ ಪರಬ್ರಹ್ಮವಸ್ತುವನ್ನು ಕುರಿತದ್ದು. ಅದನ್ನು ಸತ್ ಚಿತ್ ಆನಂದವೆಂದು ನಿರ್ದೇಶಿಸುವರು. ಇದರ ಜ್ಞಾನವೇ ಯಥಾರ್ಥ ಜ್ಞಾನ. ಅಷ್ಟೇ ಅಲ್ಲ. ವಿದ್ಯೆ ಎಂದರೆ ಅರಿವು ಎಂದಾಗುವಂತೆಯೇ ವಿದ್ ಎನ್ನುವ ಧಾತುವಿನಿಂದಲೇ ವಿದ್ಯಮಾನ ಎನ್ನುವ ಅರ್ಥಬಂದು ಇರವು ಎಂತಲೂ ಆಗುವುದರಿಂದ ಜ್ಞಾನವೆನ್ನುವುದು ದ್ರವ್ಯವೊಂದರ ಗುಣವೆಂದಾಗಿರದೆ ಅಭಿನ್ನವಾದ ಸದ್ರೂಪವೇ ಆಗುವುದರಿಂದ, ಅನುಭಾವದಲ್ಲಿ ಅಭೇದಸ್ಥಿತಿ ಅಥವಾ ಪ್ರಜ್ಞೆ ಸಂಭವಿಸಲೇಬೇಕೆಂಬ ಅಭಿಪ್ರಾಯವೂ ಇದೆ. ಭಾರತೀಯ ತಾತ್ತ್ವಿಕರ ದೃಷ್ಟಿಯಲ್ಲಿ ತತ್ತ್ವಾನ್ವೇಷಣೆ ಮೂರು ಹಂತಗಳಲ್ಲಿ ನಡೆಯಬೇಕು - ಶ್ರವಣ, ಮನನ ಮತ್ತು ನಿದಿಧ್ಯಾಸನ. ಮಾನವನ ಅಂತಿಮ ಗುರಿ ಈ ನಿದಿಧ್ಯಾಸನದ ಮಟ್ಟದಲ್ಲಿ ಒದಗುವ ಸಹಜಸ್ಥಿತಿ. ಸತ್ತಾಸ್ವಾತಂತ್ರ್ಯ, ನಿರಪೇಕ್ಷ ಆನಂದ, ಮುಕ್ತಸ್ಥಿತಿ. ಈ ಸ್ಥಿತಿಯನ್ನು ವಿವಿಧ ರೀತಿಯಲ್ಲಿ ನಿರೂಪಿಸಿದ್ದರೂ ತತ್ತ್ವಚಿಂತನೆ ಇಲ್ಲಿನ ದರ್ಶನಗಳ ಪ್ರಕಾರ ಧರ್ಮಚಿಂತನೆ ಅಥವಾ ಧರ್ಮಾನ್ವೇಷಣೆಯೇ ಆಗುತ್ತದೆ. ಇವು ನಿಕಟವರ್ತಿಗಳಾಗಿರಬೇಕು. ಇಲ್ಲದಿದ್ದರೆ ಜೀವನಸಾಫಲ್ಯ ಆಗುವಂತೆ ಇಲ್ಲ. ಪಾಶ್ಚಾತ್ಯರಲ್ಲಿ ಜ್ಞಾನ ಮತ್ತು ಧರ್ಮ, ಧರ್ಮ ಮತ್ತು ಜೀವನಗಳ ಸಮನ್ವಯ ಸಾಮರಸ್ಯ ಆಗಿರಲೇಬೇಕೆಂಬ ದೃಷ್ಟಿ ಇಲ್ಲ. ಇದ್ದರೂ ಆಕಸ್ಮಿಕ, ಅಗತ್ಯವಲ್ಲ.

	ತತ್ತ್ವ ಭಾರತದಲ್ಲಿ ದರ್ಶನವೆಂಬ ಹೆಸರಿನಲ್ಲಿ ವ್ಯವಸ್ಥಿತ ಚಿಂತನೆಗಳ ರೂಪದಲ್ಲಿ ವ್ಯಕ್ತಗೊಂಡಿದೆ. ಇಲ್ಲಿಯೂ ಜಿಜ್ಞಾಸೆಯ ವಸ್ತು ಅಥವಾ ವಿಷಯಗಳು ಎಲ್ಲ ಕಡೆಯೂ ಇರುವಂತೆಯೇ ಆತ್ಮ, ದೇಹ, ಮನಸ್ಸು, ಜಗತ್ತು, ಈಶ್ವರ, ನಿತ್ಯತ್ವ, ಮುಕ್ತಿ, ಧರ್ಮ, ಅಧರ್ಮ, ಕಾರ್ಯಕಾರಣಭಾವ, ಪರಿಣಾಮ, ವಿಕಾಸ, ಇತ್ಯಾದಿಗಳೇ ಆಗಿವೆ. ಇವನ್ನು ವೀಕ್ಷಿಸುವ ದೃಷ್ಟಿಭೇದದಿಂದಾಗಿ ಇಲ್ಲಿ ನಾನಾತ್ವವನ್ನು ಒಪ್ಪುವ ಸಾಂಖ್ಯಯೋಗ, ನ್ಯಾಯ ವೈಶೇಷಿಕ ಮತ್ತು ಪೂರ್ವಮಿಮಾಂಸಾ ಎನ್ನುವ ದರ್ಶನಭೇದಗಳಿವೆ. ಅಭೇದವನ್ನು ಒಪ್ಪುವ ಉತ್ತರ ಮಿಮಾಂಸಾ ಪರವಾದ ಅದ್ವೈತವೇದಾಂತವಿದೆ. ಏಕತ್ವ ನಾನತ್ವಗಳನ್ನು ವಿವಿಧ ರೀತಿಯಲ್ಲಿ ಸಮನ್ವಯಗೊಳಿಸುವ ವೇದಾಂತ ಪ್ರಭೇದಗಳಿವೆ - ದ್ವೈತ, ವಿಶಿಷ್ಟಾದ್ವೈತ ಇತ್ಯಾದಿ. ಚಾರ್ವಾಕಮತವೊಂದನ್ನು ಬಿಟ್ಟರೆ ಸಾಮಾನ್ಯವಾಗಿ ಎಲ್ಲ ತತ್ತ್ವ ವಿಭಾಗಗಳೂ ಆಧ್ಯಾತ್ಮ ತತ್ತ್ವವನ್ನು ಒಪ್ಪುತ್ತವೆ. ಈಶ್ವರನನ್ನೂ ವೇದ ಪ್ರಮಾಣವನ್ನೂ ಒಪ್ಪದ, ಆದರೆ ಅಭೌತಿಕ ತತ್ತ್ವಗಳಾದ ಆತ್ಮ, ವಿಜ್ಞಾನ ಮುಂತಾದವನ್ನು ಒಪ್ಪಿಕೊಂಡ ಜೈನ ಮತ್ತು ಬೌದ್ಧಪಂಥಗಳೂ ಇವೆ.

	ಸಾಮಾನ್ಯವಾಗಿ ಈ ಎಲ್ಲ ದರ್ಶನಗಳಲ್ಲೂ ವ್ಯವಸ್ಥಿತ ರೀತಿಯಲ್ಲಿ ವಿಚಾರ ಮುಂದುವರಿದಿರುವುದು ಕಂಡುಬರುತ್ತದೆ. ಪಾಶ್ಚಾತ್ಯ ತತ್ತ್ವಭೇದಗಳಲ್ಲಿ ಕಂಡುಬಂದ ವಿಭಾಗಗಳೆಲ್ಲ ಇಲ್ಲಿಯೂ ಬರುತ್ತವೆ. ಸತ್ಯವೆಂದರೇನು ಎನ್ನುವ ಪ್ರಮೇಯ ವಿಭಾಗ (ಆಂಟಾಲೊಜಿ) ಇದ್ದ ಹಾಗೆಯೇ ಪ್ರಮಾಣದ (ಎಪಿಸ್ಟೀಮೋಲೊಜಿ) ವಿಚಾರವಾಗಿಯೂ ಚಿಂತನೆ ನಡೆದಿದೆ. ಇಂದ್ರಿಯ ಪ್ರಮಾಣವನ್ನೇ ಒಪ್ಪುವ ಚಾರ್ವಾಕದ ಜೊತೆಗೆ ತರ್ಕವನ್ನು ಒಪ್ಪುವ ಜೈನ ಮತ್ತು ಬೌದ್ಧದರ್ಶನಗಳೂ ವೇದ ಪ್ರಮಾಣವನ್ನೂ ಒಪ್ಪುವ ಇತರ ಆರು ದರ್ಶನಗಳೂ ಅನುಭವದ ಎಲ್ಲ ಕ್ಷೇತ್ರಗಳನ್ನೂ ತತ್ತ್ವ ಸಮೀಕ್ಷೆಗೆ ತೆಗೆದುಕೊಳ್ಳುತ್ತವೆ. ಪ್ರಮಾಣ ಮತ್ತು ಭ್ರಮೆಗಳ ವಿಚಾರದಲ್ಲಿ ದೀರ್ಘ ಚಿಂತನೆ ನಡೆಸಲ್ಪಟ್ಟು, ಪ್ರಮಾಣ ಎನ್ನುವುದನ್ನು ನಿರ್ಧರಿಸುವಲ್ಲಿ ಪಾಶ್ಚಾತ್ಯರಲ್ಲಿ ಕಂಡುಬರುವ ಸಂವಾದಿತ್ವ (ಕರೆಸ್ಪಾಂಟೆನ್ಸ್) ಸಾಂಗತ್ಯ (ಕೋಹಿರೆನ್ಸ್) ಅರ್ಥಕ್ರಿಯಾಕಾರಿತ್ವ (ಪ್ರಾಗ್ಮ್ಯಾಟಿಕ್ ತೀಯೊರಿ) ಮುಂತಾದ ನಿಯಮಗಳನ್ನೂ ಇಲ್ಲೂ ಅಂಗೀಕರಿಸಲಾಗಿದೆ. ಪ್ರತ್ಯಕ್ಷ ಅನುಭವದ ಕಲ್ಪನೆ ಭಾರತದಲ್ಲಿ ಎರಡು ಅರ್ಥದಲ್ಲಿ ಬೆಳೆದುದನ್ನು ಕಾಣಬಹುದು. ಒಂದು ಇಂದ್ರಿಯ ಪ್ರತ್ಯಕ್ಷ. ಇದು ನೇರವಾದ ಜ್ಞಾನವನ್ನು ನೀಡುತ್ತದೆಂದು ಅಂಗೀಕರಿಸಿದ್ದರೂ ಅದಕ್ಕಿಂತ ಆತ್ಮೀಯ ಮಾರ್ಗ ಅಪರೋಕ್ಷ ಜ್ಞಾನ ಎಂದು ಭಾವಿಸಿದ್ದಾರೆ. ಇಲ್ಲಿ ಅಲೌಕಿಕ ಅಥವಾ ಯೋಗಿಕ ಜ್ಞಾನ ರೀತಿಗಳನ್ನು ಬಳಸಲಾಗಿದೆ. ಈ ಜ್ಞಾನ ಸಾಧನಗಳು ಜ್ಞಾನಕ್ಷೇತ್ರವನ್ನೂ ವಿಸ್ತಾರವಾಗಿಯೂ ಮಾಡಿರುವುದೊಂದೇ ಅಲ್ಲದೆ ಅತೀಂದ್ರಿಯ ಗ್ರಹಣಕ್ಕೆ ಸಹಾಯ ಮಾಡುವ ಕಲೆಯಾದ ಯೋಗವನ್ನೂ ತಾತ್ತ್ವಿಕ ಸಾಧನವಾಗಿ ಉಪಯೋಗಿಸಿರುವುದು ವಿಶಿಷ್ಟವಾಗಿದೆ. ಚಿತ್ತವೃತ್ತಿಗಳ ನಿರೋಧ ಮಾರ್ಗ (ಅವುಗಳ ಸಡಲಿಕೆಯಲ್ಲ ಅಥವಾ ಅವುಗಳ ಸಹಜ ಬಳಸುವಿಕೆಯಲ್ಲ) ವಸ್ತುಗ್ರಹಣಕ್ರಿಯೆಯ ಶಿಕ್ಷಣದ ಅಗತ್ಯವನ್ನು ಸೂಚಿಸುತ್ತದೆ. ವಿಷಯ ಬಾಹ್ಯವಾಗಿದ್ದರೂ ಇಂದ್ರಿಯಗಳ ತರಬೇತಿ ಬೇಕು ಎನ್ನುವ ಈ ದೃಷ್ಟಿ ತಾತ್ತ್ವಿಕನಿಗೆ ಎಷ್ಟು ಪ್ರಾಮಾಣಿಕತೆಯನ್ನು ನೀಡುತ್ತದೆಂಬುದನ್ನು ಇಲ್ಲಿ ಗಮನಿಸಬಹುದು. ವಿಷಯ ಆಂತರಿಕವಾದರಂತೂ ಇಂದ್ರಿಯ ಚಾಂಚಲ್ಯ ಎಷ್ಟರಮಟ್ಟಿಗೆ ಹಾನಿಕರ ಎಂಬುದನ್ನು ಹೇಳಬೇಕಾಗಿಲ್ಲ. ಯೋಗವನ್ನು ವೈದಿಕ ಮಾರ್ಗವೇ ಅಲ್ಲದೆ ಬೌದ್ಧ ಮತ್ತು ಜೈನ ದರ್ಶನಗಳೂ ಬಳಸಿಕೊಂಡಿರುವುದು ತತ್ತ್ವದ ದೃಷ್ಟಿಯಿಂದ ಯೋಗಕ್ಕೆ ಎಷ್ಟು ಮಹತ್ತ್ವ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
	ಹಾಗೆಯೇ ವಿಪರ್ಯಾಸ ಅಥವಾ ಭ್ರಮಾ ಹೇಗೆ ಉಂಟಾಗುತ್ತದೆ, ಅದರ ಹಿನ್ನೆಲೆಯ ಮಾನಸಿಕ ಚಿತ್ರವೇನು, ಅದು ಈ ಜೀವನ ವ್ಯಾಪಾರಕ್ಕೆ ಮಾತ್ರವೇ ಸೇರಿದ್ದೇ ಅಥವಾ ಮತ್ತೂ ಮೂಲಭೂತವಾದ ಅವಿದ್ಯಾಕಾರಣ ಇದೆಯೇ, ಭ್ರಮೆಯಲ್ಲಿ ರೂಪಗೊಳ್ಳುವ ವಸ್ತುವಿನ ಸ್ವರೂಪವೇನು-ಎನ್ನುವ ವಿಚಾರವಂತೂ ಭಾರತೀಯ ಜಿಜ್ಞಾಸುವಿನ ಕ್ರಿಯಾದೀಕ್ಷೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.

	ವೈದಿಕ ಅವೈದಿಕ ಭೇದಭಾವಗಳನ್ನು ಎಣಿಸದೆ ಭಾರತದ ಎಲ್ಲ ವಿಭಾಗಗಳೂ ನೀತಿ (ಮಾರಲ್ಸ್) ಹಾಗೂ ಧರ್ಮಗಳ (ರಿಲಿಜನ್) ಚಿಂತನೆಯನ್ನು ಸಾಕಷ್ಟು ಮಾಡಿರುವುದು ಕಂಡು ಬರುತ್ತದೆ. ಅನೇಕ ಅಂಶಗಳಲ್ಲಿ, ಅದರಲ್ಲೂ ವ್ಯವಹಾರದಲ್ಲಿ ಇರಬೇಕಾದ ಸಾಮಾನ್ಯ ಧರ್ಮದ ಬಗ್ಗೆ ಎಲ್ಲ ವಿಭಾಗಗಳಲ್ಲೂ ಸೌಮ್ಯವಿರುವ ವಿಚಾರ ಪ್ರಶಂಸನೀಯ.

	ತತ್ತ್ವಜಿಜ್ಞಾಸೆ ಧರ್ಮ ಜಿಜ್ಞಾಸೆಗಳ ಅನ್ಯೋನ್ಯ ಸಂಬಂಧ, ಜ್ಞಾನ - ನೀತಿ - ವೈರಾಗ್ಯ, ಜ್ಞಾನ - ಕರ್ಮ- ಭಕ್ತಿ ಇವುಗಳ ನಿಕಟ ಬೆಳವಣಿಗೆ ಪೂರ್ಣದೃಷ್ಟಿಯ ಮುಖ್ಯ ಲಕ್ಷಣವೆಂಬಂತೆ ಎಲ್ಲ ದರ್ಶನಗಳಲ್ಲೂ ಕಂಡುಬರುತ್ತದೆ. ಇವೆಲ್ಲವನ್ನೂ ಕೂಲಕಷವಾಗಿ ಮನನ ಮಾಡಿದಲ್ಲಿ ಆಧ್ಯಾತ್ಮಕ್ಕೆ ಇಲ್ಲಿನಂತೆ ಎಲ್ಲೂ ಗಮನಕೊಡಲಿಲ್ಲವೆಂದು ತೋರುತ್ತದೆ. ಈ ಬೆಳಕಿನಲ್ಲಿಯೇ ಜೀವನದ ಅದಿ ಅಂತ್ಯಗಳನ್ನೂ ಅಳೆಯುವ ಪ್ರಯತ್ನ ಇಲ್ಲಿ ನಡೆದಿದೆ. ಒಂದು ಆಯುಃಪ್ರಮಾಣವೇ ಅಂತಿಮ ಎಂಬ ತತ್ತ್ವ ಇಲ್ಲಿ ಕಂಡುಬರುವುದಿಲ್ಲ. ಕರ್ಮದಿಂದ ಜನ್ಮಾಂತರ, ಜನ್ಮಗಳ ಅನೇಕತೆ. ಇವುಗಳ ದೃಷ್ಟಿಯಿಂದ ಮಾನವನ ಜೀವನ ದರ್ಶನ ಇಲ್ಲಿ ರೂಪಗೊಂಡಿದೆ. ಕೇವಲ ಪ್ರಾಪಂಚಿಕದ ಮಟ್ಟದಲ್ಲಿಯೇ ಅಥವಾ ಭೌತದ ಅಂತಸ್ತಿನಲ್ಲೇ ಜೀವನ ಪೂರ್ಣಗೊಳ್ಳದು ಎನ್ನುವ ದೃಷ್ಟಿ ವಿಶ್ವದೃಷ್ಟಿಯ ರೂಪರೇಷೆಗಳ ಬೆಳಕಿನಲ್ಲಿ ಬೆಳೆದದ್ದು ಎಂದು ತೋರುತ್ತದೆ. ಇದು ಜೀವನವನ್ನು ಉದಾತ್ತೀಕರಿಸುವುದೊಂದೇ ಅಲ್ಲದೆ ಇಹಜೀವನ ಪೂರ್ಣಜೀವನದಲ್ಲಿ ಒದಗಿರುವ ಕರ್ಮವಿಪಾಕದ ಫಲವಾಗಿ ಆತ್ಮಪರಿಷ್ಕಾರಕ್ಕೆ ಘಟಿಸಿದ ವಿಶೇಷ ಎಂದು ತೋರುತ್ತದೆ. ಇದು ಆಧ್ಯಾತ್ಮ ಸಾಧನದ ಒಂದು ಹಂತ. ಆಧ್ಯಾತ್ಮವೇ ಅಂತಿಮ. ಅದರ ಸಾಧನೆಯೇ ವ್ಯಕ್ತಿತ್ವದ ಮುಖ್ಯ ಗುರಿ ಎನ್ನುವ ಮತ ತತ್ತ್ವಚಿಂತನೆಯ ಪ್ರವಾಹ ಎತ್ತ ಸಾಗಿದೆ ಎಂಬುದನ್ನು ತೋರಿಸುತ್ತದೆ. ಉಪನಿಷತ್ತಿನ ಋಷಿಗಳ ವಿಚಾರ ಮೂಲಭೂತವಾದ ಆಧ್ಯಾತ್ಮ ವಸ್ತುವಿನ ಶೋಧನೆಯ ಕಡೆಗೇ ಇದ್ದದ್ದು ಸ್ಪಷ್ಟವಾಗಿ ಕಂಡುಬರುತ್ತದೆ. ಆಧುನಿಕ ಪಾಶ್ಚತ್ಯ ತಾತ್ತ್ವಿಕನಾದ ಪಾಲ್ ಟಲ್ಲಿಚ್ ಧರ್ಮಜೀವನದ ನಿರೂಪಣೆಯನ್ನು ಕೊಡುತ್ತಾ ಅದು ಅತ್ಯಂತ ಮೂಲಭೂತವಾದ ವಸ್ತುವಿನ ಬಗ್ಗೆ ಆಕಾಂಕ್ಷೆ ಹೊಂದಿರುವ ಮತ್ತು ಅದರ ಅನುಭವದ ನಿರೀಕ್ಷೆಯಲ್ಲಿಯೇ ಮಗ್ನವಾಗಿರುವ ಒಬ್ಬನ ಸ್ಥಿತಿ ಎನ್ನುತ್ತಾನೆ. ಉಪನಿಷತ್ಕಾರನ ಪರಿಸ್ಥಿತಿ ಇದು. ಜ್ಞಾನಿಯಾಗಿ ಯಾವುದನ್ನು ಅಂತಿಮ ಸತ್ಯವೆಂದು ಸಾಧಿಸಲು ತೊಡಗುತ್ತಾನೋ ಆಗ ಧಾರ್ಮಿಕನಾಗಿ ಕಾಣುತ್ತಾನೆ. ಯಾವುದು ಸತ್ಯವೋ ಅದೇ ಧರ್ಮ, ಯಾವುದು ಧರ್ಮವೋ ಅದೇ ಸತ್ಯ (ಬೃ. ಉ. 1. 4,14) ಎನ್ನುವ ವಿಶಿಷ್ಟ ಪ್ರಜ್ಞೆ ಆತನದು. ಆ ಸತ್ಯವೆನ್ನುವುದು ಕೇವಲ ಮೂಲಭೂತವೇ ಅಲ್ಲ, ಸರ್ವಸೃಷ್ಟಿಯ ಜೀವಾಧಾರವೂ ಹೌದು. ಅದರ ಲಯಸ್ಥಾನವೂ ಹೌದು. ತಾತ್ತ್ವಿಕನ ಮೂಲಭೂತಪ್ರಶ್ನೆ ಅಂಥ ಮೂಲಭೂತ ಸತ್ಯವನ್ನು ಹುಡುಕುವುದು. ಯಾವುದನ್ನು ಅರಿಯುವುದರಿಂದ ಎಲ್ಲವನ್ನೂ ಅರಿಯಬಹುದೋ ಅದನ್ನು ತಿಳಿಯಪಡಿಸಿ ಎನ್ನುವ ಕೌತುಕ ಶಿಷ್ಯನದು. ಅಷ್ಟೇ ಅಲ್ಲ ಯಾವುದನ್ನು ಅಥವಾ ಯಾವುದರ ಅಸ್ತಿತ್ವವನ್ನು ನಿರಾಕರಿಸಿದರೆ ತನ್ನನ್ನೇ ನಿರಾಕರಿಸಿಕೊಂಡಂತೆ ಎನ್ನುವ ವಿಚಾರ ಬೋಧಕನದು. ಈ ರೀತಿಯ ವಿಚಾರ ಎಲ್ಲದರ ಅಸ್ತಿತ್ವವನ್ನು ಹುಡುಕುವಂಥ ತತ್ತ್ವಶಾಸ್ತ್ರದ ನಡೆಯನ್ನು ತೋರಿಸುತ್ತದೆ. ಯಾವುದನ್ನು ಪಡೆದರೆ ಎಲ್ಲ ಸುಖ ಶಾಂತಿಗಳನ್ನು ಪಡೆದಂತೆಯೇ ಎನ್ನುವ ಮಾತು ಶಾಂತಿಯೇ ಜೀವನ ಸಾಫಲ್ಯ ಎನ್ನುವ ಗುರಿಯನ್ನು ತತ್ತ್ವದ ಮತ್ತು ಧರ್ಮದ ಮುಂದೆ ಇಟ್ಟಿರುವಂತೆ ಕಂಡುಬರುತ್ತದೆ. ಇಂಥ ಸ್ಥಿತಿಯನ್ನು, ಹಲವು ತತ್ತ್ವ ವಿಭಾಗಗಳು ಆತ್ಮವೆಂದೋ ಬ್ರಹ್ಮವೆಂದೋ ಗುರುತಿಸಿದ್ದರೆ, ಬೌದ್ಧದರ್ಶನ `ನಿರ್ವಾಣ' ಎಂದು ಕರೆದಿದೆ. ಆದರೆ ಎಲ್ಲದರ ಸೂಚನೆಯೂ ಶಾಂತಿಯೇ ಪರಮಸ್ಥಿತಿ ಎನ್ನುವಂತಿದೆ.

ತತ್ತಶಾಸ್ತ್ರದ ಉದ್ದೇಶ ಅನುಭವದ ವಿಶ್ಲೇಷಣಾತ್ಮಕ ವಿಮರ್ಶಾತ್ಮಕ ಸಮೀಕ್ಷೆ ಎಂದು ಇಟ್ಟುಕೊಂಡಲ್ಲಿ ಭಾರತದ ದೃಷ್ಟಿ ಈ ಅನುಭವವೆಂಬುದನ್ನು ಎಷ್ಟು ವಿಸ್ತಾರಗೊಳಿಸಿದೆ ಎಂಬುದನ್ನು ಇಲ್ಲಿ ಕಾಣಬಹುದು. ಪ್ರತ್ಯಕ್ಷಕ್ಕೆ, ಅನುಮಾನಕ್ಕೆ ಮತ್ತು ಇತರ ಲೌಕಿಕ ಯುಕ್ತಿಗಳಿಗೆ ಸಿಗದ ವಸ್ತುತತ್ತ್ವದ ದೃಷ್ಟಿಯಿಂದ ದೂರ ಎನ್ನುವ ಆಧುನಿಕ ಪಾಶ್ಚಾತ್ಯ ಅಭಿಪ್ರಾಯವನ್ನು ಭಾರತದ ತಾತ್ತ್ವಿಕ ಒಪ್ಪುವುದಿಲ್ಲ. ಹಾಗೆಯೇ ತಾತ್ತ್ವಿಕ ಅಭಿವ್ಯಕ್ತಿಗೊಳಿಸುವ ವಾಕ್ಯಗಳಿಗೆ ವ್ಯಾವಹಾರಿಕ ಅರ್ಥವಿದ್ದರೇನೇ ಅದು ತಾತ್ತ್ವಿಕ ಇಲ್ಲದಿದ್ದರೆ ಇಲ್ಲ ಎನ್ನುವ ಪಾಶ್ಚಾತ್ಯ ಅಭಿಪ್ರಾಯವೂ ಭಾರತೀಯ ತತ್ತ್ವದೃಷ್ಟಿಯಿಂದ ಸಲ್ಲದು. ಇಲ್ಲಿನ ದೃಷ್ಟಿಯ ಪ್ರಕಾರ ಎಲ್ಲ ಲೋಕ ವ್ಯವಹಾರದ ಅರ್ಥಗಳೂ ಮೌಲ್ಯಗಳೂ ಮೂಲ ಸತ್ಯದ ಅರ್ಥದ ಮೇಲೆಯೇ ನಿಂತಿರುತ್ತವೆ. ಒಂದು ನಿರಪೇಕ್ಷ ಮಾನದಂಡವಿಲ್ಲದೆ ಯಾವ ಲೌಕಿಕ ಅರ್ಥವೂ ಮೌಲ್ಯವೂ ತನ್ನನ್ನು ತಾನು ಅಳೆದುಕೊಳ್ಳಲಾರದು. ತನ್ನ ವಿಶಿಷ್ಟಗುಣವನ್ನು ತೋರಿಸಲಾರದು, ಎನ್ನುವ ದೃಷ್ಟಿ ಲೌಕಿಕ ಅನುಭವದ ಆಚೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಅಷ್ಟೇ ಅಲ್ಲ. ಅದನ್ನು ನಾವು ನೇರವಾಗಿಯೇ ಕಂಡುಕೊಳ್ಳಬಹುದು ಎನ್ನುವ ಭರವಸೆ ತತ್ತ್ವದ ಕ್ಷೇತ್ರವನ್ನೂ ವಿಸ್ತರಿಸುತ್ತದೆ. ಅಲ್ಲದೆ ಅಭಿವ್ಯಕ್ತ ವಾಕ್ಯರೂಪದ ಮೂಲಕವೇ ತತ್ತ್ವದ ಅರ್ಥ ಮತ್ತು ಅದರ ಮೌಲ್ಯಗಳು ನಿಂತಿರಬೇಕೆನ್ನುವುದು ಎಷ್ಟು ಸಂಕುಚಿತ ಎಂದು ಭಾರತೀಯ ತಾತ್ತ್ವಿಕ ಅವಸಾತ್ರಯದ ವಿಶ್ಲೇಷಣೆಯಿಂದ ತೋರಿಸಿದ್ದಾನೆ. ತನ್ನತನದ ಸ್ಥಿತಿಯಲ್ಲಿ ಮಾತಿನ ಅಭಿವ್ಯಕ್ತಿ ಇರುವುದಿಲ್ಲ. ತನ್ನತನ ಎನ್ನುವುದೂ ಕೇವಲ ಸಂಜ್ಞೆ. ಈ ಸಂಜ್ಞೆ ಭಾಷೆಯ ಸಾಮಾನ್ಯ ಲಕ್ಷಣವನ್ನು ಹೊಂದಿರದ ಭಾಷೆ. ಇತರ ಎಲ್ಲವನ್ನೂ ಭಾಷೆಯಿಂದ ರೂಪಿಸಬಲ್ಲ ಮಾನದಂಡ ಇದು. ಈ ಅತೀತವಾದ ಮಾನದಂಡವನ್ನು ನಿರ್ಧರಿಸುವುದಾದರೂ ಹೇಗೆ ಸಾಧ್ಯ ಎನ್ನುವುದು ಸಹಜವಾದ ಪ್ರಶ್ನೆ. ಇದು ತತ್ತ್ವಶಾಸ್ತ್ರಕ್ಕೆ ಸ್ವಾಭಾವಿಕ. ಇದನ್ನೇ ಪಾಶ್ಚಾತ್ಯ ತಾತ್ತ್ವಿಕನಾದ ಕಾಂಟ್ ಎತ್ತಿದ್ದ ಸಂಗತಿ ಗಮನಾರ್ಹ. ಆತನಿಗೆ ತತ್ತ್ವಶಾಸ್ತ್ರ (ಮೆಟಫಿಸಿಕ್ಸ್) ಮತ್ತು ನೀತಿಶಾಸ್ತ್ರಗಳು (ಮಾರಲ್ಸ್) ಪ್ರತ್ಯೇಕ. ಒಂದು ಬುದ್ಧಿಯ ವಿಶ್ಲೇಷಣೆಯ ಕ್ಷೇತ್ರಕ್ಕೆ ಸೀಮಿತವಾದದ್ದು ಮತ್ತೊಂದು ಬುದ್ಧಿಯ ಪರಿಸರದಿಂದ ದೂರವಾದ ನೀತಿ ಅಥವಾ ಧರ್ಮಪ್ರಜ್ಞೆಗೆ - ನಂಬಿಕೆಗೆ - ಸಂಬಂಧಿಸಿದ್ದು. ಈ ಭೇದ ಕಲ್ಪಸಿಕೊಂಡದ್ದರಿಂದಲೇ ಕಾಂಟನಿಗೆ ತತ್ತ್ವದ ಮೂಲಕ ನಾವು ಅರಿಯಲಾಗದೆನ್ನುವ ಸತ್ಯವೊಂದು ಉಳಿದೇಹೋಯಿತು. ಆದರೂ ಆತನ ವಿಚಾರ ಎಷ್ಟು ಪ್ರಾಮಾಣಿಕವೆಂದರೆ, `ಅಂಥ ಸತ್ಯ ಇಲ್ಲ ಎನ್ನಲು ಬುದ್ಧಿಯ ವಿಶ್ಲೇಷಣೆಗೆ ಸಾಧ್ಯವಿಲ್ಲ ಎನ್ನುತ್ತಾನೆ ಆತ. ಅಷ್ಟೇ ಅಲ್ಲ. `ಅಂಥ ಸತ್ಯ ಇಲ್ಲದಿದ್ದಲ್ಲಿ ಇಲ್ಲಿನ ವ್ಯವಹಾರಕ್ಕೆ ಸಾಧ್ಯತೆಯೇ ಇರುವುದಿಲ್ಲ ಎನ್ನುತ್ತಾನೆ. ವ್ಯವಹಾರದ ಅನುಭವವನ್ನು ಸಾಧ್ಯಗೊಳಿಸುವ ಅಂಶಗಳು ಇರಲೇಬೇಕು ಎನ್ನುವ ಆತನ ದೃಷ್ಟಿ ಸೀಮಿತ ವ್ಯಾವಹಾರಿಕ ಅನುಭವದ ಆಚೆಗೂ ನಾವು ನೋಡಬೇಕು ಎನ್ನುವುದಕ್ಕೆ ತೋರುಬೆರಳು. ಇದರ ಬೆಳಕಿನಿಂದ ನೋಡಿದಲ್ಲಿ ಭಾರತೀಯ ದ್ರಷ್ಟಾರರು ತತ್ತ್ವವನ್ನು ಅರ್ಥಮಾಡಿಕೊಂಡ ರೀತಿ ಅದನ್ನು ಅನುಭವಿಸುವ ಸಾಧ್ಯತೆ - ಇವುಗಳನ್ನು ಎಷ್ಟು ವಿಚಕ್ಷಣ ರೀತಿಯಲ್ಲಿ ಕಂಡುಕೊಂಡಿದ್ದರು ಎನ್ನುವುದಕ್ಕೆ ಕೇನ ಉಪನಿಷತ್ತಿಗಿಂತ ಹೆಚ್ಚಿನ ನಿದರ್ಶನ ಬೇಕಿಲ್ಲ. ಯಾವುದನ್ನು ನಾವು ಮಾತಿನಿಂದ ವಿವರಿಸಲಾರೆವೋ ಆದರೆ ಯಾವುದರಿಂದ ನಾವು ಮಾತನ್ನು ಬಳಸಬಲ್ಲೆವೋ ಯಾವುದನ್ನು ಮನಸ್ಸಿನಿಂದ ಯೋಚಿಸಲು ಅಸಾಧ್ಯವೋ ಆದರೆ ಯಾವುದರಿಂದ ಮನಸ್ಸು ಯೋಚಿಸಬಲ್ಲದೋ ಯಾವುದನ್ನು ನಮ್ಮ ಕಣ್ಣು ನೋಡಲಾರದೋ ಆದರೆ ಯಾವುದರಿಂದ ಕಣ್ಣು ನೋಡಲು ಶಕ್ತವಾಗುವುದೋ ಯಾವುದನ್ನು ನಮ್ಮ ಕಿವಿ ಆಲಿಸಲಾಗದೋ ಆದರೆ ಯಾವುದರಿಂದ ಅದು ಆಲಿಸಲು ಶಕ್ತಿಹೊಂದುವುದೋ ............'(ಕೇನ ಉ. 1,4-6) ಅದು ಬ್ರಹ್ಮ. ಅದೇ ತತ್ - ತ್ವ. ಭಾರತದ ಅತಿ ಮೇಧಾವಿ ಮತ್ತು ತಾತ್ತ್ವಿಕ ಆದ ಯಾಜ್ಞವಲ್ಕ್ಯನ ಮಾತುಗಳಲ್ಲಿ `ಯೇನೇದಂ ಸರ್ವಂ ವಿಜಾನಾತಿ, ತಂ ಕೇನ ವಿಜಾನೀಯಾತ್ ?'-ಯಾವುದರಿಂದ ಇವೆಲ್ಲವೂ ತಿಳಿಯಲ್ಪಡುವುದೋ ಅದನ್ನು ಹೇಗೆ ತಾನೇ ತಿಳಿಯಲಾಗುತ್ತದೆ ? `ವಿಜ್ಞಾತಾರಂ ಕೇನ ವಿಜಾನೀಯಾತ್ ?' - ಅರಿಯುವುವನ್ನೇ ಹೇಗೆ ಅರಿಯಲು ಸಾಧ್ಯ (ಬೃ. ಉ. 4.5.15) ಈ ಅರಿಯುವವ ಎಂದರೆ ಒಬ್ಬನ ಆತ್ಮ. ಅದು ಸ್ವತಃಸಿದ್ಧಾವಾದದ್ದರಿಂದ ಅದನ್ನು ಸಿದ್ಧಪಡಿಸುವ ಅಗತ್ಯವಿಲ್ಲ, ಎನ್ನುವುದೇ ಇಲ್ಲಿನ ಅರ್ಥ. ಈ ಸ್ವತಃ ಸಿದ್ಧವಾದ ಆತ್ಮಕ್ಕೆ ಹೆಸರಿಲ್ಲ ಅದು ಸಂಜ್ಞಾಮಾತ್ರ. ಅದು ಎಲ್ಲ ವಸ್ತುಗಳಂತೆ ಒಂದು ವಸ್ತುವೂ ಅಲ್ಲ. ಅದು ಸತ್ಯವೇನೆಂಬುದನ್ನು ಸೂಚಿಸುವ ವಿಧಾನ. ಇದನ್ನು ನಕಾರದಲ್ಲಿ ಗುರುತಿಸುವುದೂ ತತ್ತ್ವದ ಮಾರ್ಗವೇ : ನೇತಿ, ನೇತಿ ಎಂದು, ಮೊದಲಿನ ನೇತಿ ಇದಲ್ಲ ಎಂದು ಸೂಚಿಸಿದರೆ, ಎರಡನೇ ನೇತಿ ಇದಲ್ಲ ಎನ್ನುವುದನ್ನು ಅಲ್ಲಗಳೆಯುತ್ತದೆ. ತತ್ತ್ವದ ಸತ್ಯದ ಸ್ವರೂಪಲಕ್ಷಣ ಭಾವಾತ್ಮಕ ಅಭಾವಾತ್ಮಕ ನಿಲವುಗಳಿಗೆ ಅತೀತವದ ನಿಷ್ಪ್ರಪಂಚ. ಇದರ ಕಡೆ ಗಮನಸೆಳೆಯುವುದೇ ತತ್ತ್ವಶಾಸ್ತ್ರದ ಗುರಿ. ಅದರ ವಿಶ್ಲೇಷಣೆ ಪ್ರಾಪಂಚಿಕ. ಅದರ ಅನುಭವ ಪರಮಾರ್ಥಿಕ. ಇವೆರಡನ್ನೂ ನೀಡುವ ದೃಷ್ಟಿ ತತ್ತ್ವದ ದೃಷ್ಟಿಯಾಗಿರಬೇಕು ಎನ್ನುವುದು ಭಾರತೀಯರ ಮತ.

ಈ ದೃಷ್ಟಿಯಿಂದ ನೋಡಿದರೆ ತತ್ತ್ವಶಾಸ್ತ್ರದ ಗುರಿ ಇರವು-ಅರಿವು, ಸತ್ಯ-ಧರ್ಮಗಳನ್ನು ಸಮನ್ವಯಗೊಳಿಸುವ ಜೀವನಮಾರ್ಗವೆಂದು ತಿಳಿಯುತ್ತದೆ. ಉಪಯೋಗಿಸುವ ಸಾಧನ ವಿಧಾನಗಳು ಎಲ್ಲ ದೃಷ್ಟಿಭೇದಗಳಿಗೂ ಅವಕಾಶ ಮಾಡಿಕೊಡಬೇಕು (ಭಾರತದ ತಾತ್ತ್ವಿಕರು ಆರು ಪ್ರಮಾಣಗಳನ್ನು ಉಪಯೋಗಿಸಿರುವ ಉದ್ದೇಶವೂ ಅದೇ ಎಂದು ತೋರುತ್ತದೆ). ಆದರೂ ಎಲ್ಲ ತರಹೆಯ ಅನುಭವವನ್ನೂ ಗಮನಿಸಬೇಕಾದುದು ತತ್ತ್ವಶಾಸ್ತ್ರಕ್ಕೆ ವಿಹಿತವೆಂದು ತೋರಿದರೂ ಯಾವುದಕ್ಕೆ ಎಷ್ಟೆಷ್ಟು ಪ್ರಾತಿನಿಧ್ಯ ನೀಡಬಹುದೆಂದು ನಿರ್ಧರಿಸಬೇಕಾದುದು ಅಗತ್ಯವೇ. ಮೂಲಭೂತವಾದ ಸತ್ಯದ ದರ್ಶನ ಪಡೆಯುವುದರ ಮೂಲಕ ಸಮಗ್ರ ದೃಷ್ಟಿಯನ್ನು ಬೆಳೆಸಿಕೊಳ್ಳುವ ತಂತ್ರ ತತ್ತ್ವಶಾಸ್ತ್ರದ್ದಾಗಿರಬೇಕು. ಇದರಲ್ಲಿ ಮತ್ತೊಂದು ಅಂಶವೂ ಅಡಗಿದೆ. ಕೇವಲ ಜ್ಞಾನರ್ಜನೆ ಅಥವಾ ತತ್ತ್ವಗಳನ್ನೂ ವಿಶ್ಲೇಷಿಸಿ ವಿಮರ್ಶಿಸುವ ಮೂಲಕ ಅವುಗಳ ಕ್ಲಿಷ್ಟ ಅರ್ಥಗಳನ್ನು ಸ್ಪಷ್ಟಪಡಿಸುವುದೊಂದೇ ಕರ್ತವ್ಯವೆನ್ನದೆ, ವ್ಯಾವಹಾರಿಕ ಜೀವನದಲ್ಲಿನ ಗೊಂದಲಗಳೂ ಅಶಾಂತಿಗಳೂ ನಿರ್ಮೂಲಗೊಳ್ಳಬೇಕಾದದೂ ತತ್ತ್ವಶಾಸ್ತ್ರದ ಕರ್ತವ್ಯ. ಇದರ ಸಾಧ್ಯತೆ ಪರಿಮಿತ ಮತ್ತು ಸಾಪೇಕ್ಷ ದೃಷ್ಟಿಯಿಂದ ಆಗದೆಂದು ಅರಿತಮೇಲೂ ತಾತ್ತ್ವಿಕನಾದವ ಅವುಗಳ ಮಟ್ಟದಲ್ಲೇ ನಿಂತರೆ ಸಾಲದು. ಅವನ್ನು ಮೀರಿದ ಎತ್ತರದ ಮಟ್ಟಕ್ಕೆ ಎದ್ದು ಬರಬೇಕು. ಆದ್ದರಿಂದ ತತ್ತ್ವಶಾಸ್ತ್ರದ ಕ್ಷೇತ್ರ ಸೃಷ್ಟಿಯ ಎಲ್ಲ ಅಂಶಗಳನ್ನೂ ಒಳಗೊಂಡು ವಿಚಾರಮಾಡಿ ವಿಶಾಲ ಮತ್ತು ಉನ್ನತ ಭೂಮಿಕೆಯಲ್ಲಿದ್ದು ಎಲ್ಲದರ ಅಂತರಂಗದ ಸ್ಥಿತಿಯಾದ ಸ್ವಾಭಾವಿಕ ಸಾಮ್ಯಾವಸ್ಥೆ ಅಥವಾ ಸಮರಸ ಶಾಂತಿಯಲ್ಲಿ ನೆಲಗೊಳ್ಳುವುದು ಹೇಗೆ ಎಂದು ನೋಡಬೇಕು. ತತ್ತ್ವಶಾಸ್ತ್ರ ಅಂಥ ಯೋಗ ಆಗಬೇಕು. ಇದು ತತ್ತ್ವಶಾಸ್ತ್ರದ ಕ್ರಮ, ಗುರಿ ಮತ್ತು ಸಾಫಲ್ಯ.

ಎರಡು ತತ್ತ್ವಸಂಪ್ರದಾಯಗಳ - ಪಾಶ್ಚಾತ್ಯ ಮತ್ತು ಭಾರತೀಯ - ಸ್ಥೂಲ ಚಿತ್ರ ಇದು. ಅನೇಕ ಅಂಶಗಳಲ್ಲಿ ಈ ಸಂಪ್ರದಾಯಗಳ ನಡುವೆ ಸಾಮ್ಯವನ್ನು ಗುರುತಿಸಿದರೂ ಸ್ಪಷ್ಟವಾದ ವ್ಯತ್ಯಾಸವನ್ನು ಗಮನಿಸಬಹುದು. ಮೊದಲನೆಯದು ವಿಚಾರ, ಎರಡನೆಯದು ದರ್ಶನ. ಮೊದಲನೆಯದರಲ್ಲಿ ತತ್ತ್ವವನ್ನು ಸ್ಥೂಲವಾಗಿ ರಚಿಸಿ ನಡೆಸುವ ಪ್ರಮಾಣಗಳು ಯಾವುವೆಂದರೆ ವ್ಯವಹಾರ ಅನುಭವ ಮತ್ತು ತರ್ಕ ಅಥವಾ ಬುದ್ಧಿಮಾರ್ಗ. ಇಲ್ಲಿ ಪೂರ್ವಸಂಪ್ರದಾಯವೆನ್ನುವ ಯಾವ ಜ್ಞಾನಭಂಡಾರವೂ ಪ್ರಮಾಣವಾಗಲಾರದು. ಅತಿಮಾನವನಾದ ಶ್ರುತಿರೂಪದ ಯಾವ ಪ್ರಮಾಣವೂ ಇಲ್ಲ. ಆದ್ದರಿಂದ ವಿಚಾರಸ್ವಾತಂತ್ರ್ಯ ಇಲ್ಲಿ ಹೆಚ್ಚಾಗಿ ಇರುವಂತೆ ತೊರುತ್ತದೆ. ನಡೆದಿರುವ ಬಹುತೇಕ ಚಿಂತನ ಈ ಲೋಕದ ಮನುಷ್ಯನದು. ಅತೀತವಾದದ್ದೆಲ್ಲಾ ಆತನ ಜೀವನದಲ್ಲಿ ಆಕಸ್ಮಿಕವಾಗಿ ಬಂದವು. ಅದರ ನೆಂಟು ಅಷ್ಟು ಅಗತ್ಯವಲ್ಲ. ಈಶ್ವರ ಅಸ್ತಿತ್ವದ ಬಗ್ಗೆ ಆಧಾರಗಳೇನು, ಸಾಕ್ಷ್ಯವೇನು ಎನ್ನುವ ಪ್ರಶ್ನೆ ಇಂಥ ಸಂಸ್ಕøತಿಯಲ್ಲಿಯೇ ಬರುವುದು ಸಹಜ. ಈ ಸಂಸ್ಕøತಿಯ ದೃಷ್ಟಿಯಲ್ಲಿ ಜೀವನ ಲೋಕರಚನೆಯಲ್ಲೆ ನಡೆಯುವಂಥದು. ಇಲ್ಲಿಯ ನೀತಿ, ಧರ್ಮ ಎಲ್ಲವೂ ಲೋಕವ್ಯವಹಾರ ಪದ್ಧತಿಗಳು. ಇಲ್ಲಿನ ಸತ್ಯ ಲೋಕದ ದೃಷ್ಟಿಯಿಂದ ಉಪಯುಕ್ತವಾದುದು. ಕೆಲಸ ಸಾಗಿಸುವಂಥದು. ಮಾನವ ತನ್ನ ಹಿಂದಿನ ಸ್ಥಿತಿಯ ಬಗ್ಗೆ ಅರಿಯಲಾರ. ಮುಂದಿನ ಭವಿಷ್ಯ ತಿಳಿಯದು. ಆದ್ದರಿಂದ ವರ್ತಮಾನದಲ್ಲಿಯೇ ಇದ್ದು ಎಲ್ಲ ಅರ್ಥ ಮೌಲ್ಯಗಳನ್ನು ಹುಡುಕುವ ಪರಿಸ್ಥಿತಿ ಇದು. ಇಲ್ಲಿನ ಸ್ಥಿತಿಯೇ ಸತ್ಯ. ಎಲ್ಲ ತತ್ತ್ವವೂ ತತ್ತ್ವನಿರೂಪಣೆಯೂ ಇಲ್ಲಿಂದಲೇ ಪ್ರಾರಂಭವಾಗಬೇಕು. ತಾತ್ತ್ವಿಕನ ಮಾತು ಎಲರಿಗೂ ಅರ್ಥವಾಗಬೇಕು. ಈ ರೀತಿಯ ಧೋರಣೆ ಆಧುನಿಕ ಪಾಶ್ಚಾತ್ಯ ವಿಚಾರದ ಲಕ್ಷಣವಾಗಿದೆ. ಪ್ಲೇಟೋ ಅರಿಸ್ಟಾಟಲ್ ಮತ್ತು ಸ್ಪಿನೋಜó ಇವರನ್ನು ಬಿಟ್ಟರೆ ಹೆಚ್ಚಿನವರ ಚಿಂತನಕ್ರಮ ಹೀಗಿದೆ. ಕಾಂಟ್, ಹೇಗಲ್, ಎಫ್. ಎಚ್.ಬ್ರಾಡ್ಲೆ, ಹ್ವೈಟ್‍ಹೆಡ್ ಮುಂತಾದವರು ಲೋಕಾನುಭವದ ಆಚೆಗೆ ಹೋಗಿ ಅದರ ಬೇರುಗಳನ್ನು ಹುಡುಕಿದರೂ ಅವರ ಸಾಧ್ಯ ಸಾಧನಗಲೆಲ್ಲಾ ಹೆಚ್ಚಿನ ಮಟ್ಟಿಗೆ ಲೋಕ - ಪರ. ಆಧುನಿಕರಾದ ರಸೆಲ್, ಮೂರ್, ವಿಟ್‍ಗೆನ್‍ಷ್ಟೈನ್, ಐರ್, ಕಿರ್ಕೆಗಾರ್, ಹುಸೆರ್ಲ್, ಸಾರ್ತ್, ಯಾಸ್ಪರ್ಸ್ ಮುಂತಾದವರ ವಿಚಾರ ಕ್ರಮವಂತೂ ಪೂರ್ಣವಾಗಿ ಲೋಕಾನುಭವದ ನಕ್ಷೆಯಲ್ಲೇ ನಡೆಯುವಂಥದು, ನಿಲ್ಲುವಂಥದು.
ಮತ್ತೊಂದು ರೀತಿಯ ಚಿತ್ರ ಭಾರತೀಯ ತಾತ್ತ್ವಿಕನದು. ಇಲ್ಲಿ ತತ್ತ್ವ ಚಿಂತನೆ ನಡೆದ ದಾರಿ ಆಧ್ಯಾತ್ಮಕ. ಭೌತದ ಆಚೆಗೆ ಅದರ ಬೇರುಗಳನ್ನು ನೋಡುವ ಕ್ರಮ ಇವರದು. ಲೋಕಾನುಭವದ ನೆಂಟನ್ನು ಲೋಕಾತೀತ ಸತ್ಯವೊಂದರಲ್ಲಿ ಕಾಣುವ ಕ್ರಮ ಇಲ್ಲ. ಜೀವನದ ಎಲ್ಲ ಕ್ಷೇತ್ರಗಳೂ ಏಕಮುಖವಾಗಿ ಸಂಸ್ಕಾರಗೊಳ್ಳಬೇಕೆಂಬ ನಿಯಮ ಇಲ್ಲ. ಆದ್ದರಿಂದಲೇ ಇದು ಅಂರ್ತದೃಷ್ಟಿಯ ಮಾರ್ಗ-ದರ್ಶನ ಮಾರ್ಗ. ಇಲ್ಲಿ ವಿಚಾರಕ್ಕೆ ಎಡೆ ಇಲ್ಲ ಎಂದಲ್ಲ. ಎಲ್ಲ ವಿಚಾರ ಮಾರ್ಗ ಮತ್ತು ತರ್ಕವಿಧಾನಗಳೂ ಆ ಅಂತಿಮ ಸತ್ಯದ ಅನುಸಂಧಾನ ಮಾರ್ಗಗಳಾಗಬೇಕೆಂಬ ದೃಷ್ಟಿ ಇದು. ಆದ್ದರಿಂದಲೇ ಶ್ರುತಿ ಪ್ರಮಾಣಕ್ಕೆ ಇಲ್ಲಿ ಪ್ರಾಧಾನ್ಯ. ಅಷ್ಟೇ ಅಲ್ಲ, ಶ್ರುತಿ ನೀಡುವ ದರ್ಶನ ವ್ಯಕ್ತಿಯ ಪೂರ್ಣ ಸಂಸ್ಕಾರವನ್ನು ಹೊಂದಿಕೊಂಡು ಲಭ್ಯ. ಆದ್ದರಿಂದಲೇ ಇಲ್ಲಿ ವ್ಯಕ್ತಿತ್ವದ ಪೂರ್ಣಬೆಳವಣಿಗೆ - ಆಧ್ಯಾತ್ಮಿಕ, ನೈತಿಕ, ಧಾರ್ಮಿಕ, ಸಾಮಾಜಿಕ ಇತ್ಯಾದಿ-ಎಲ್ಲ ರಂಗಗಳಲ್ಲಿ ಔನ್ನತ್ಯವನ್ನು ಪಡೆಯುವಂತಿರಬೇಕು. ಆದ್ದರಿಂದಲೇ ಇವುಗಳೆಲ್ಲದರ ಸಮನ್ವಯ ಬಾಳಿನಲ್ಲಿ ತಾನೇ ತಾನಾಗಿ ಬರಬೇಕಾಗುತ್ತದೆ. ಜೀವನ ಸಾಫಲ್ಯಕ್ಕೆ ವಿಧಿಸಿರುವ ಶಿಕ್ಷಣ ಒಬ್ಬನ ಜೀವನ ಪರ್ಯಂತ ಆಗುವಂಥದು. ಆಶ್ರಮ ಧರ್ಮಗಳ ಏಕೈಕ ಗುರಿ ಇದು. ಇಲ್ಲಿನ ತತ್ತ್ವ ಉಪದೇಶಿಸುವುದಲ್ಲ ಜೀವಿಸುವುದು. ಆದ್ದರಿಂದಲೇ ಇಲ್ಲಿನ ತತ್ತ್ವದ ಕ್ಲಿಷ್ಟತೆ, ವ್ಯಾಪಕತೆ ಪಾಶ್ಚಾತ್ಯದಲ್ಲಿ ಕಂಡುಬರುವುದಿಲ್ಲ. ಈ ದರ್ಶನ ಮಾರ್ಗದ ಸಂಪೂರ್ಣದೃಷ್ಟಿ ಲೋಕಾತೀತವದರೂ ಈ ಲೋಕದಲ್ಲೇ ಅನುಭವಿಸಿ ತೋರಿಸುವಂಥ ಆದರ್ಶವಾಗುತ್ತದೆ. ಈ ಕಾರಣದಿಂದ ಭಾರತೀಯ ದರ್ಶನ ಮಾರ್ಗ ಚಿಂತನ-ಜೀವನಗಳ ಸಂಗಮ. ತತ್ತ್ವಶಾಸ್ತ್ರಕ್ಕೆ ಮತ್ತು ಅದರ ಅರ್ಥಕ್ಕೆ ವ್ಯಾಪಕವಾದ ವ್ಯಾಖ್ಯೆ ಭಾರತದಲ್ಲಿಯೇ ಸಿಗಬೇಕು. ಇದನ್ನು ನೀಡುವುದೆಂದೇ ಭಾರತೀಯ ತತ್ತ್ವದೃಷ್ಟಿಯ ಅಧ್ಯಯನ ಅಗತ್ಯ.			(ಕೆ.ಬಿ.ಆರ್.)

ತತ್ತ್ವಶಾಸ್ತ್ರದ ಇತಿಹಾಸ : ಈ ಲೇಖನದಲ್ಲಿ ಪೌರಸ್ತ್ಯ ಹಾಗೂ ಪಾಶ್ಚಾತ್ಯ ಎಂಬ ಎರಡು ಭಾಗಗಳಲ್ಲಿ ತತ್ತ್ವಶಾಸ್ತ್ರದ ಇತಿಹಾಸವನ್ನು ತಿಳಿಸಲಾಗಿದೆ.
ಪೌರಸ್ತ್ಯ ತತ್ತ್ವಶಾಸ್ತ್ರ : ಪೌರಸ್ತ್ಯ ತತ್ತ್ವಶಾಸ್ತ್ರದಲ್ಲಿ ಭಾರತೀಯ ಆಸ್ತಿಕ ದರ್ಶನಗಳ ಹಾಗೂ ನಾಸ್ತಿಕ ದರ್ಶನಗಳ ವಿಚಾರಧಾರೆ ಸಮ್ಮಿಳಿತವಾಗುವಂತೆ ಚೀನ, ಅರೇಬಿಯ ಮುಂತಾದ ಇತರ ದೇಶಗಳ ತತ್ತ್ವಶಾಸ್ತ್ರವೂ ಸೇರ್ಪಡೆಯಾಗಬಹುದು. ಆದರೆ ಮಿಕ್ಕ ದೇಶಗಳ ತತ್ತ್ವವಿಚಾರವನ್ನು ಕನ್‍ಫ್ಯೂಷಿಯಸ್ ಇತ್ಯಾದಿ ಪ್ರತ್ಯೇಕ ಲೇಖನಗಳಲ್ಲಿ ವಿವರಿಸಿರುವುದರಿಂದ ಈ ಲೇಖನವನ್ನು ಭಾರತದಲ್ಲಿ ಪ್ರಸಿದ್ಧವಾದ ತತ್ತ್ವಶಾಸ್ತ್ರಗಳಿಗೆ ಸೀಮಿತಗೊಳಿಸಿಕೊಂಡಿದೆ. ಋಗ್ವೇದಾದಿ ವೈದಿಕ ತತ್ತ್ವಶಾಸ್ತ್ರ, ಮಹಾಭಾರತ, ಭಗವದ್ಗೀತೆ ಪುರಾಣಾದಿಗಳಿಗೂ ಪ್ರತ್ಯೇಕ ಲೇಖನಗಳಿರುವುದರಿಂದ ಅವನ್ನು ಕೂಡ ಇಲ್ಲಿ ಕೈಬಿಡಲಾಗಿದೆ.
1 ನ್ಯಾಯ, 2 ವೈಶೇಷಿಕ, 3 ಸಾಂಖ್ಯ, 4 ಯೋಗ, 5 ಪೂರ್ವ ಮೀಮಾಂಸಾ ಮತ್ತು 6 ಉತ್ತರ ಮೀಮಾಂಸಾ ಅಥವಾ ವೇದಾಂತ ಎಂಬವೇ ಪ್ರಸಿದ್ಧ ಭಾರತೀಯ ಷಡ್ದರ್ಶನಗಳು. ಇವುಗಳ ವಿವರಗಳು ಆಯಾ ಶೀರ್ಷಿಕೆಗಳಲ್ಲಿವೆ. ಇವುಗಳಲ್ಲಿ ಒಂದೊಂದು ದರ್ಶನಕ್ಕೂ ಸೂತ್ರ, ಭಾಷ್ಯ, ವೃತ್ತಿ, ವ್ಯಾಖ್ಯಾನಾದಿ ಗಳಿವೆ. ಅಲ್ಲದೆ ಇವುಗಳಲ್ಲಿ ಕಾಲಕಾಲಕ್ಕೆ ಹೊಸ ಹೊಸ ವಿಚಾರಗಳ ಉದಯವನ್ನೂ ಹೊಸ ಹೊಸ ಸಮನ್ವಯಗಳನ್ನೂ ಕಾಣುತ್ತೇವೆ. ಅತ್ಯಂತ ಪ್ರಸಿದ್ಧವೂ ಪ್ರತಿಷ್ಠಿತವೂ ಆದ ವೇದಾಂತ ದರ್ಶನವೊಂದರಲ್ಲಿಯೇ ಅದ್ವೈತ, ವಿಶಿಷ್ಟಾದ್ವೈತ, ದ್ವೈತ ಇತ್ಯಾದಿ ಭಿನ್ನ ಭಿನ್ನ ಸಂಪ್ರದಾಯಗಳೂ ಬೆಳೆದು ವಿಕಸಿತವಾದುದನ್ನು ನೋಡಬಹುದು. ಈ ಷಡ್ದರ್ಶನಗಳ ಉದಯಕಾಲ ಸುಮಾರು ಕ್ರಿ. ಪೂ. 500 ರಿಂದ ಕ್ರಿ. ಶ. 500 ಎಂದು ಸ್ಥೂಲವಾಗಿ ಭಾವಿಸಬಹುದು. ಆ ಅವಧಿಯಲ್ಲಿ ಎಲ್ಲ ಸೂತ್ರಗಳೂ ರಚಿತವಾದವು. ಅದಕ್ಕೂ ಪೂರ್ವದಲ್ಲಿಯೇ ಜೈನ, ಬೌದ್ಧ ದರ್ಶನಗಳ ಪ್ರಭಾವದಿಂದ ವೈದಿಕ ತತ್ತ್ವಶಾಸ್ತ್ರ ಪರಂಪರೆಗೆ ಆಘಾತ ಒದಗಿತು. ಹೀಗೆ ನಾನಾ ದಿಕ್ಕುಗಳಿಂದ ಸಾಂಪ್ರದಾಯಿಕ ಚಿಂತನೆಯ ಪರಿಷ್ಕರಣಕ್ಕೆ ಪ್ರಚೋದನೆಯೊದಗಿತು. ಬ್ರಾಹ್ಮಣ ಧರ್ಮದ ತಾತ್ತ್ವಿಕ ಅಸ್ತಿಭಾರವನ್ನು ಈ ದರ್ಶನಗಳೇ ಒದಗಿಸುತ್ತವೆ. ಈ ಬೇರೆ ಬೇರೆ ದರ್ಶನಗಳು ಪರಸ್ಪರ ವಿರುದ್ಧ ವಾದವೇನೂ ಅಲ್ಲ; ಅವು ಪರಸ್ಪರ ಪೂರಕಗಳೆಂದೇ ತಿಳಿಯುವುದು ಯೋಗ್ಯ. ಅವುಗಳಲ್ಲಿ ಒಂದೊಂದೂ ತನ್ನದೇ ಆದ ತತ್ತ್ವಜ್ಞಾನ, ಧರ್ಮಾಚರಣೆ, ಜಗತ್ತಿನ ವಿವರಣೆ ಮತ್ತು ಮೋಕ್ಷಮಾರ್ಗದ ಪ್ರತಿಪಾದನೆಯನ್ನು ಒಳಗೊಂಡಿರುತ್ತದೆ. 
ನ್ಯಾಯ ವೈಶೇಷಿಕ : ಇವು ಮೊದಲು ಪ್ರತ್ಯೇಕ ದರ್ಶನಗಳಾಗಿದ್ದರೂ ಕಡೆಗೆ ಒಂದೇ ದರ್ಶನವಾಗಿ ಮಾರ್ಪಟ್ಟವು. ವೈಶೇಷಿಕ ಚಿಂತನೆಯಿಂದ ಜಗತ್ತು ಪರಮಾಣುಗಳಿಂದ ನಿಷ್ಪನ್ನವಾದುದೆಂದು ಎರಡೂ ಒಪ್ಪುತ್ತವೆ ಮತ್ತು ನ್ಯಾಯ ಚಿಂತನೆಯಂತೆ ಪ್ರಮಾಣಾದಿ ತರ್ಕವಿಚಾರವನ್ನು ಎರಡೂ ಅನುಸರಿಸುತ್ತವೆ. ಒಂದೊಂದು ಪದಾರ್ಥದಲ್ಲೂ ವಿಶೇಷ ಕಾಣುವುದಕ್ಕೆ ಅವುಗಳ ಮೂಲಭೂತ ಪರಮಾಣುಗಳಲ್ಲಿರುವ ವಿಶೇಷವೇ ಕಾರಣವೆಂದು ವಿಶೇಷವೆಂಬ ಒಂದು ತತ್ತ್ವವನ್ನು ಒಪ್ಪುವ ಕಾರಣ ವೈಶೇಷಿಕವೆಂಬ ಹೆಸರು ಈ ದರ್ಶನಕ್ಕೆ ಅನ್ವರ್ಥವಾಗಿ ಬಂದಿದೆ. ಪ್ರಮಾಣಾನುಸಾರಿಯಾದ ಚಿಂತನೆಯ ನಿಯಮಗಳನ್ನು ಸೂತ್ರಿಸುವ ಶಾಸ್ತ್ರವೇ ನ್ಯಾಯ.

1 ನ್ಯಾಯ : ಜಗತ್ತಿನಿಂದ ನಮಗೆ ಬರುವ ಜ್ಞಾನ ಯಥಾರ್ಥವೆನಿಸಬೇಕಾದರೆ ಅದು ಪ್ರಮಾಣಾನುಸಾರಿಯೇ ಇರಬೇಕು. ನ್ಯಾಯದರ್ಶನ ಒಪ್ಪುವ ಪ್ರಮಾಣಗಳು ನಾಲ್ಕು : ಪ್ರತ್ಯಕ್ಷ. ಅನುಮಾನ (ತರ್ಕಶುದ್ಧ ಊಹೆ), ಉಪಮಾನ ಮತ್ತು ಶಬ್ದ.

ಮೊದಲು ಪ್ರತ್ಯಕ್ಷವೆಂದರೆ ಕೇವಲ ಇಂದ್ರಿಯಗೋಚರ ಜ್ಞಾನವೆಂಬ ಅರ್ಥವಿದ್ದರೂ ಕಡೆಕಡೆಗೆ ಎಲ್ಲ ಅಪರೋಕ್ಷ ಜ್ಞಾನಕ್ಕೂ ಆ ಹೆಸರು ಅನ್ವಯಿಸುವಂತಾಯಿತು. ಒಂದು ಜ್ಞಾನದಿಂದ ಉಂಟಾಗದಿರುವ ಜ್ಞಾನ (ಜ್ಞಾನಾಕರಣಕಂ ಜ್ಞಾನಮ್)-ಎಂದು ಅದರ ಲಕ್ಷಣ. ಮಿಕ್ಕ ಅನುಮಾನಾದಿಗಳಲ್ಲಿ ಜ್ಞಾನವಾಗಲು ಮತ್ತೊಂದು ಜ್ಞಾನ ಕಾರಣವಾಗುತ್ತದೆ; ಇಲ್ಲಿ ಹಾಗಲ್ಲ. ಆತ್ಮ ಮನಸ್ಸಿನೊಡನೆ ಸಂಯೋಗ ಹೊಂದಿ, ಮನಸ್ಸು ಇಂದ್ರಿಯನೊಡನೆ ಸಂಯೋಗ ಹೊಂದಿ, ಇಂದ್ರಿಯ ಪದಾರ್ಥದೊಂದಿಗೆ ಸಂಯೋಗಗೊಂಡಾಗ ಪ್ರತ್ಯಕ್ಷ ಜ್ಞಾನವಾಗುತ್ತದೆ. ಇದರಲ್ಲಿ ಸವಿಕಲ್ಪಕ ಮತ್ತು ನಿರ್ವಿಕಲ್ಪಕ ಎಂಬ ಎರಡು ಪ್ರಕಾರಗಳಿರುತ್ತವೆ. ಮೊದಲನೆಯದರಲ್ಲಿ ಪದಾರ್ಥದ ಪ್ರಕಾರಗಳ ಪರಿಜ್ಞಾನವಿದ್ದರೆ ಎರಡನೆಯದರಲ್ಲಿ ಅದಿಲ್ಲದೆ ಕೇವಲ ಪದಾರ್ಥದ ಪ್ರತೀತಿ ಮಾತ್ರವಿರುತ್ತದೆ.

ಸಂಪೂರ್ಣವಾಗಿ ಅಜ್ಞಾತವಿರುವ ಇಲ್ಲವೇ ಸ್ಪಷ್ಟವಾಗಿ ಜ್ಞಾತವಿರುವ ವಸ್ತುಗಳ ವಿಷಯದಲ್ಲಿ ಅನುಮಾನ ಪ್ರವರ್ತಿಸಲಾರದು. ಸಂಶಯಾತ್ಮಕವಾದ ವಸ್ತುಗಳ ವಿಷಯದಲ್ಲಿ ಮಾತ್ರ ಇದಕ್ಕೆ ಪ್ರವೃತ್ತಿ. ವ್ಯಾಪ್ತಿ ವಿಶಿಷ್ಟವಾದ ಪಕ್ಷಧರ್ಮತಾ ಜ್ಞಾನದಿಂದ ಅನುಮಾನ ಸಿದ್ಧವಾಗುತ್ತದೆ. ಉದಾಹರಣೆಗೆ, ಒಂದು ಗುಡ್ಡದ ಮೇಲೆ ಹೊಗೆ ಕಂಡರೆ (ಇದೇ ಪಕ್ಷ ಧರ್ಮತೆ) ಹೊಗೆ ಯಾವಾಗಲೂ ಬೆಂಕಿಯಿಂದ ಕೂಡಿರುವುದೆಂದು ಬಲ್ಲ (ಇದೇ ವ್ಯಾಪ್ತಿ) ನಾವು ಗುಡ್ಡದ ಮೇಲೆ ಬೆಂಕಿಯಿದೆಯೆಂದು ಅನುಮಾನಿಸುತ್ತೇವೆ. ಈ ಅನುಮಾನ ಸರಣಿಯಲ್ಲಿ ಐದು ಅವಯವಗಳಿರುತ್ತವೆ - 1 ಪ್ರತಿಜ್ಞೆ - ಗುಡ್ಡದ ಮೇಲೆ ಬೆಂಕಿಯಿದೆ. 2 ಹೇತು - ಹೊಗೆಯಿರುವುದರಿಂದ, 3 ಉದಾಹರಣೆ - ಅಡುಗೆಯ ಮನೆಯಲ್ಲಿರುವಂತೆ ಹೊಗೆಯಿದ್ದಲ್ಲಿ ಬೆಂಕಿಯಿದ್ದೇ ಇರುತ್ತದೆ. 4 ಉಪನಯ - ಈ ಗುಡ್ಡವೂ ಹಾಗೆಯೇ ಇದೆ. 5 ನಿಗಮನ (ನಿರ್ಣಯ) - ಆದ್ದರಿಂದ ಈ ಗುಡ್ಡದ ಮೇಲೆ ಬೆಂಕಿಯಿದೆ. ಗುಡ್ಡವನ್ನು ಪಕ್ಷವೆಂದೂ ಅಡುಗೆಯ ಮನೆಯನ್ನು ಸಪಕ್ಷವೆಂದೂ ಬೆಂಕಿಯನ್ನು ಸಾಧ್ಯವೆಂದೂ ಹೊಗೆಯನ್ನು ಹೇತುವೆಂದೂ ವ್ಯವಹರಿಸುತ್ತಾರೆ. ಇದರಲ್ಲಿ ಕಡೆಯ ಎರಡು ಅವಯವಗಳು ಅನಗತ್ಯವೆಂದು ಕೈಬಿಟ್ಟ ಯಶಸ್ಸು ಬೌದ್ಧ ತಾರ್ಕಿಕ ನಾಗಾರ್ಜುನನದೆನ್ನುತ್ತಾರೆ.

ಸಾಮಾನ್ಯ ತತ್ತ್ವಗಳನ್ನು ಸಾಕ್ಷಾತ್ಕರಿಸಲು ಪ್ರತ್ಯಕ್ಷ ಅಥವಾ ಪ್ರಕಾರಾಂತರದ ತರ್ಕಯುಕ್ತಿಗಳು ಸಾಧಕವಾಗಬಹುದು. ಉಕ್ತವಾದ ವಾಕ್ಯವನ್ನೊಪ್ಪದಿದ್ದರೆ ಇಂತಿಂಥ ದೋಷಪ್ರಸಂಗಗಳು ಬರುವವೆಂದು ತೋರಿಸುವ ಮೂಲಕ ಅದರ ಪ್ರಾಮಾಣ್ಯವನ್ನು ಸಾಧಿಸಬಹುದು. ಇದೇ ತರ್ಕಯುಕ್ತಿ. ಎಷ್ಟೋ ಕಡೆಗಳಲ್ಲಿ ಅನುಮಾನಕ್ಕೆ ಅಗತ್ಯವಾದ ಸಪಕ್ಷ ವಿಪಕ್ಷ ದೃಷ್ಟಾಂತಗಲೆರಡೂ ಸಿಕ್ಕುತ್ತಿರುವುದಿಲ್ಲ; ಅಂಥ ಸಂದರ್ಭಗಳಲ್ಲಿ ತರ್ಕಯುಕ್ತಿಯನ್ನಾಶ್ರಯಿಸಬೇಕಾಗುತ್ತದೆ. ಸಾಮಾನ್ಯ ಸಂಬಂಧಗಳ ತಿಳಿವಳಿಕೆಯೆಲ್ಲ ಅಲೌಕಿಕವಾದ ಸಾಮಾನ್ಯ ಲಕ್ಷಣಪ್ರತ್ಯಾಸಕ್ತಿಯೆಂದು ನವ್ಯನ್ಯಾಯದ ಜನಕನಾದ ಗಂಗೇಶ ಭಾವಿಸುತ್ತಾನೆ.
ಈಗ ಕಾರ್ಯಕಾರಣವಿಚಾರ. ಕಾರ್ಯಕ್ಕೆ ನಿಯತವಾಗಿ ಪೂರ್ವವರ್ತಿಯಾದುದೇ ಕಾರಣ. ಅದು ಸುಮ್ಮನೆ ಪೂರ್ವವರ್ತಿಯಾಗಿದ್ದರೆ ಸಾಲದು; ಕಾರ್ಯೋತ್ಪತ್ತಿಗೆ ನೇರವಾಗಿ ಪ್ರಯೋಜನವೂ ಆಗಿರಬೇಕು. ಅನ್ವಯ-ವ್ಯತಿರೇಕ ಸಾಹಚರ್ಯವಿಲ್ಲದೆ ಯಾವ ಎರಡನ್ನೂ ಕಾರ್ಯ-ಕಾರಣಗಳೆನ್ನ ಬರುವುದಿಲ್ಲ. ಕಾರಣವಿದ್ದಲೆಲ್ಲ ಕಾರ್ಯವಿರುತ್ತಿರಬೇಕು (ಇದೇ ಅನ್ವಯ). ಕಾರಣವಿಲ್ಲದಾಗ ಕಾರ್ಯವೂ ಇರಬಾರದು (ಇದೇ ವ್ಯತಿರೇಕ). ಕಾರಣಗಳು ಮೂರು ಬಗೆ : ಉಪಾದಾನ ಕಾರಣ, ಅಸಮವಾಯಿಕಾರಣ ಮತ್ತು ನಿಮಿತ್ತ ಕಾರಣ. ಉದಾಹರಣೆಗೆ ಹತ್ತಿಯಿಂದಾದ ಬಟ್ಟೆಗೆ ಹತ್ತಿಯೇ ಉಪಾದಾನಕಾರಣ; ದಾರದ ಬಣ್ಣ ಬಟ್ಟೆಯ ಬಣ್ಣಕ್ಕೆ ಅಸಮವಾಯಿ ಕಾರಣ, ನೇಕಾರ ನಿಮಿತ್ತ ಕಾರಣ. ಒಂದು ಕಾರ್ಯವಿಶೇಷಕ್ಕೆ ಒಂದಕ್ಕಿಂತ ಹೆಚ್ಚು ಮೂಲ ಕಾರಣಗಳಿರಲಾರವು.

ಹಿಂದೆ ಗೊತ್ತಿರುವ ವಸ್ತುವಿನೊಡನೆ ಇರುವ ಸಾಮ್ಯದ ಮೂಲಕ ಮತ್ತೊಂದರ ಜ್ಞಾನವಾಗುವುದೇ ಉಪಮಾನವೆಂಬ ಪ್ರಮಾಣ. ಕಾಡಿನಲ್ಲಿ ಒಂದು ವಿಚಿತ್ರ ಪ್ರಾಣಿಯನ್ನು ನಾವು ನೋಡುವಾಗ ಅದು ನಮಗೆ ಪೂರ್ವಪರಿಚಿತವಿರುವ ಗೋವಿನ ಸಾದೃಶ್ಯದಿಂದ ಗವಯವೆಂದು ನಾವು ತೀರ್ಮಾನಿಸಲು ಶಕ್ಯವಾಗುತ್ತದೆ. ಹೀಗೆ ಉಪಮಾನ ಜ್ಞಾನಕ್ಕೆ ಸಾದೃಶ್ಯ ಪ್ರತೀತಿಯೂ ಪ್ರಯೋಜಕವಾಗುತ್ತದೆ.
ಶಬ್ದಪ್ರಮಾಣ ಮುಖ್ಯವಾಗಿ ಧಾರ್ಮಿಕ ವಿಷಯಗಳಲ್ಲಿ ಪ್ರಾಧಾನ್ಯವನ್ನು ಪಡೆಯುತ್ತದೆ. ಆಪ್ತವಾಕ್ಯವೇ ಪ್ರಮಾಣವೆಂಬುದು ಇದರ ಸ್ವರೂಪ. ಶಾಬ್ದ ಬೋಧದ ವಿಷಯದಲ್ಲಿ ಹೇಳುವುದಾದರೆ ವ್ಯಕ್ತಿ, ಆಕೃತಿ, ಜಾತಿ - ಮೂರೂ ಪದದ ಅರ್ಥಬೋಧೆಯಲ್ಲಿ ಬರುತ್ತವೆಂಬುದು ನ್ಯಾಯದರ್ಶನದ ಸಿದ್ಧಾಂತ. ಜ್ಞಾನ, ನೈಯಾಯಿಕರ ಪ್ರಕಾರ ಪರತಃಪ್ರಮಾಣವೇ ಹೊರತು ಸ್ವತಃ ಪ್ರಮಾಣವಲ್ಲ.
ಆತ್ಮತತ್ತ್ವ : ಜೀವಾತ್ಮ ಎಂಬುದು ಜ್ಞಾನ, ಸುಖದುಃಖ, ಇಚ್ಛಾ, ಪ್ರಯತ್ನ, ದ್ವೇಷ ಮುಂತಾದ ಗುಣಗಳುಳ್ಳ ವಾಸ್ತವಿಕ ದ್ರವ್ಯ, ಆತ್ಮದ್ರವ್ಯವಾದರೋ ದೇಹಭಿನ್ನ, ಇಂದ್ರಿಯಭಿನ್ನ ಮತ್ತು ಬುದ್ಧಿಭಿನ್ನ. ಅಂತಃಕರಣವದ ಮನಸ್ಸು ಅಣುವಾದುದರಿಂದ ಅವನಿಗೆ ಸರ್ವಜ್ಞತ್ವವಿಲ್ಲವಾದರೂ ಅವನು ವಸ್ತುತಃ ವಿಭುವೇ. ಮನಸ್ಸು ಪ್ರತಿವ್ಯಕ್ತಿಗೂ ಬೇರೆ ಬೇರೆ ಇರುತ್ತದೆಯಲ್ಲದೆ ಜೀವರ ಸಂಖ್ಯೆ ಅನೇಕ. ಆತ್ಮತತ್ತ್ವ ಮೂಲತಃ ಜಡವಾದರೂ ಚೈತನ್ಯ ವಿಶಿಷ್ಟವಾಗುವ ಶಕ್ತಿ ಅದಕ್ಕುಂಟು.

2 ವೈಶೇಷಿಕ : ಭೂತಾಣುಗಳಲ್ಲಿಯೂ ಜೀವಾತ್ಮಗಳಲ್ಲಿಯೂ ಇರುವ ಪ್ರತ್ಯೇಕತೆಯ ಕಾರಣವೇ ವಿಶೇಷ ತತ್ತ್ವವೆನ್ನುವ ಈ ದರ್ಶನ ವೈಶೇಷಿಕವೆಂದೇ ಪ್ರಸಿದ್ಧವಾಗಿದೆ. ಇದರ ಪ್ರಕಾರ ಪದಾರ್ಥಗಳು ಮುಖ್ಯವಾಗಿ ಆರು : ದ್ರವ್ಯ, ಗುಣ, ಕರ್ಮ, ಸಾಮಾನ್ಯ, ವಿಶೇಷ ಮತ್ತು ಸಮವಾಯ : ಇವಕ್ಕೆ ಮುಂದಿನವರು ಏಳನೆಯದಾಗಿ ಅಭಾವವನ್ನು ಸೇರಿಸುತ್ತಾರೆ. ಅಸ್ತಿತ್ವವಿರುವುದೇ ಮೊದಲನೆಯ ಪದಾರ್ಥ; ಆದರೆ ನಿರ್ಗುಣವಾದ ವಸ್ತುವಿರಲಾರದು; ಕೆಲವು ಅಂಶಗಳು ಅನೇಕ ವಸ್ತುಗಳಲ್ಲಿರಬಹುದು; ಕೆಲವು ಒಂದೊಂದರಲ್ಲೇ ಇರಬಹುದು; ಮೊದಲನೆಯದು ಸಾಮಾನ್ಯ; ಎರಡನೆಯದು ನಿತ್ಯವಾದರೆ ಗುಣ, ಅನಿತ್ಯವಾದರೆ ಕರ್ಮ, ಬಿಡಿಸಲಾರದ ಅವಿನಾಭಾವ ಸಂಬಂಧವೇ ಸಮವಾಯ - ಹಾಲು ಮತ್ತು ಅದರ ಬಿಳಿಯ ಬಣ್ಣಗಳಂತೆ. ಮೊದಲ ಮೂರಕ್ಕೆ ವಾಸ್ತವಿಕ ಸತ್ತೆಯಿದ್ದರೆ ಕಡೆಯ ಮೂರಕ್ಕೆ ಕಲ್ಪಿತಸತ್ತೆಯಿದೆ.

ಪರಮಾಣುವಾದ : ಪೃಥ್ವಿ, ಅಪ್, ತೇಜಸ್, ವಾಯು ಎಂಬ ದ್ರವ್ಯಗಳ ವಿಷಯದಲ್ಲಿ ಪರಮಾಣುವಾದವನ್ನು ಪ್ರತಿಪದಿಸಲಾಗಿದೆ. ನಮ್ಮ ಜ್ಞಾನ ಗೋಚರವಾದ ದ್ರವ್ಯಗಳು ಅಂಶಗಳನ್ನುಳ್ಳವು. ಆದ್ದರಿಂದ ಅವು ಅನಿತ್ಯ; ನಿತ್ಯ ಸಂಬಂಧವಿಲ್ಲದೆ ಅನಿತ್ಯ ಶಬ್ದ ಅರ್ಥಪೂರ್ಣವಾಗದು. ಆದ್ದರಿಂದ ಅನಿತ್ಯ ದ್ರವ್ಯಗಳು ನಿತ್ಯವಾದ ಪರಮಾಣುಗಳನ್ನೊಲಗೊಂಡಿರಬೇಕೆಂದಾಯಿತು. ನಾವು ವಸ್ತುವನ್ನು ವಿಭಾಗ ಮಾಡುತ್ತ ಹೊರಟಾಗ ಮುಂದೆ ವಿಭಾಗ ಮಡಲಾರದಂತೆ ಉಳಿಯುವ ಕಣವೇ ಪರಮಾಣು. ಅದಕ್ಕೆ ರೂಪಾದಿಗಳಿಲ್ಲದಿದ್ದರೂ ಪರಮಾಣುಗಳ ಸಂಯುಕ್ತ ಸ್ಥಿತಿಯಲ್ಲಿ ರೂಪದಿಗಳು ತೋರುತ್ತವೆ. ಮೂರು ಪರಮಾಣುಗಳಿಂದಾದ ತ್ರ್ಯಣುಕ ದೃಷ್ಟಿ ವಿಷಯವಾಗುತ್ತದೆಂದು ಮುಂದಿನ ಕೆಲವರು ವೈಶೇಷಿಕರು ಹೇಳುತ್ತಾರೆ; ಮತ್ತೆ ಕೆಲವರು ಮೂರು ದ್ವ್ಯಣುಕಗಳಿಗೆ ದೃಷ್ಟಿಗೋಚರವನ್ನು ಹೇಳುತ್ತಾರೆ; ಅದಕ್ಕೆ ಉದಾಹರಣೆಯಾಗಿ ಬಿಸಿಲು ಕೋಲಿನಲ್ಲಿ ಕಾಣುವ ಒಂದು ಕಣ ಅಥವಾ ತ್ರಸರೇಣುವನ್ನು ಕೊಡುತ್ತಾರೆ. ಈ ಪೃಥ್ವ್ಯಾದಿ ಪರಮಾಣುಗಳಿಂದಲೇ ರೂಪ ರಸ ಗಂಧ ಸ್ಪರ್ಶಗಳ ಅನುಭವ ನಮಗೆ ಉಂಟಾಗುತ್ತದೆ. ವಸ್ತು ನಷ್ಟವಾದರೂ ಅದರ ಪರಮಾಣುಗಳ ರೂಪಾದಿಗಳು ನಷ್ಟವಾಗವು. ಉಷ್ಣತೆ ಅಥವಾ ಪಾಕದಿಂದ ಕೆಲವೊಮ್ಮೆ ಹೊಸ ರೂಪಾದಿಗಳೂ ಪೃಥ್ವೀ ಪರಮಾಣುಗಳಲ್ಲಿ ಉಂಟಾಗಬಹುದು. ಆಪ್ತೇಜೋವಾಯು ಪರಮಾಣುಗಳಲ್ಲಿ ಹಾಗಾಗದು. ಎಂದೆಂದೂ ಸರ್ವನಾಶವೆಂಬುದು ಸಾಧ್ಯವಿಲ್ಲ. ಪ್ರಳಯದಲ್ಲಿಯೂ ಪರಮಾಣುಗಳು ಉಳಿದೇ ಇರುತ್ತದೆ.

3 ಸಾಂಖ್ಯ : ಉಪನಿಷತ್ತುಗಳ ಪಾರಮಾರ್ಥಿಕ ಅದ್ವೈತವಾದಕ್ಕೆ ಪ್ರತಿ ಪಕ್ಷವೇ ಸಾಂಖ್ಯದರ್ಶನ. ಅದು ಸತ್ಯವಾದ ಪ್ರಕೃತಿಯನ್ನೂ ಅನೇಕ ಪುರುಷರನ್ನೂ ಒಪ್ಪುತ್ತದೆ. ಈ ಅನೇಕ ಪುರುಷರು ಏಕಪುರುಷನ ಪ್ರಕಾರಗಳೆಂದೇನೂ ತಿಳಿಯುವುದಿಲ್ಲ. ಕಾರ್ಯಕರಣಗಳೆಂದರೆ ಒಂದೇ ವಸ್ತುವಿನ ವಿಕಸಿತ ಇಲ್ಲವೆ ಸೂಕ್ಷ್ಮರೂಪಗಳೆಂದು ಇದು ಭಾವಿಸುತ್ತದೆ. ಈ ವಾದಕ್ಕೆ ಸತ್ಕಾರ್ಯವಾದವೆಂದೂ ಹೆಸರು. ಗುಪ್ತವಿದ್ದುದು ಪ್ರಕಾಶಕ್ಕೆ ಬರುವುದೇ ವಿಕಾಸ; ಮೂಲಪ್ರಕೃತಿಯಲ್ಲಿ ಲೀನವಾಗುವುದೇ ನಾಶ. ಈ ವಾದದ ಪ್ರಕಾರ ಜಗತ್ತಿನ ಮೂಲವೆಂದರೆ ಪ್ರಕೃತಿಯೇ; ಪ್ರಕೃತಿಯ ವಿಕಾಸ ಅಥವಾ ವಿಪರಿಣಾಮವೇ ಜಗತ್ತು. ವಿಪರಿಣಾಮದ ಯಾವ ಒಂದು ಹಂತವೂ ಮೂಲ ಪ್ರಕೃತಿಯೆನಿಸದು.

ಸತ್ವ, ರಜಸ್, ತಮಸ್ ಎಂಬವು ಪ್ರಕೃತಿಯ ತ್ರಿಗುಣಗಳು. ಗುಣಗಳು ಯಾವಾಗಲೂ ಪರಿಣಾಮಶೀಲವೇ ಇರುತ್ತವೆ; ಆದರೆ ಅವು ಸಾಮ್ಯಾವಸ್ಥೆಯಲ್ಲಿದ್ದಾಗ ಕ್ರಿಯೆಯಿರುವುದಿಲ್ಲ. ಆದರೆ ಈ ಸಾಮ್ಯ ತಪ್ಪಿದಾಗ ವಿಪರಿಣಾಮ ಆರಂಭವಾಗುತ್ತದೆ. ಪ್ರಕೃತಿಯ ವಿಪರಿಣಾಮಕ್ಕೆಲ್ಲ ಪುರುಷನ ಪ್ರಭಾವವೇ ಪ್ರಯೋಜಕ. ಇತ್ತ ಮನೋ ಬುದ್ಧ್ಯಹಂಕಾರಾದಿಗಳೂ ಅತ್ತ ಬುದ್ಧೀಂದ್ರಿಯ ವಿಷಯಗಳಾದ ಅರ್ಥಗಳೂ ಪ್ರಕೃತಿಯ ವಿಕಾರಗಳೇ. ಇವುಗಳ ಅಥವಾ ತತ್ತ್ವಗಳ ಸಂಖ್ಯೆ 24 ಎಂದು ಲೆಕ್ಕ ಮಾಡಲಾಗಿದೆ.

ಪರಿಣಾಮವಾದ : ಪ್ರಕೃತಿಯ ಪರಿಣಾಮದ ಹಂತಗಳಲ್ಲಿ ಮೊದಲನೆಯ ವಿಕೃತಿಯೆಂದರೆ ಮಹತ್ ಅಥವಾ ಬುದ್ಧಿ. ಅನಂತರ ಅಹಂಕಾರ. ಇದರ ಸತ್ತ್ವದ ಪರಿಣಾಮವೇ ಮನಸ್ಸು; ಪಂಚ ಬುದ್ಧೀಂದ್ರಿಯಗಳು ಮತ್ತು ಪಂಚ ಕರ್ಮೇಂದ್ರಿಯಗಳು; ಇದರ ತವೋಗುಣದ ಪರಿಣಾಮವೇ ಪಂಚಭೂತತನ್ಮಾತಗಳು. ಇವೆರಡಕ್ಕೂ ರಜಸ್ಸಿನ ನೆರವುಂಟು. ತನ್ಮಾತ್ರಗಳಿಂದ ಸ್ಥೂಲವಾದ ಪಂಚಭೂತಗಳು ಜನಿಸುತ್ತವೆ. ಹೀಗೆ ಅಂತರನುಭವವನ್ನೇ ವಿಶ್ವಕ್ಕೆ ಅನ್ವಯಿಸುವಂತೆ ವಿಸ್ತರಿಸಿದಂತೆ ಇಲ್ಲಿ ಕಾಣುತ್ತದೆ. ಸುಷುಪ್ತಿಯಲ್ಲಿ ಬಾಹ್ಯಜ್ಞಾನವಿರದಿದ್ದರೂ ಪುರುಷನಿರುತ್ತಾನೆ. ಹಾಗೆಯೇ ಪ್ರಳಯದಲ್ಲಿಯೂ ಪ್ರಕೃತಿಯ ಜ್ಞಾನವಿಲ್ಲದೆ ಪುರುಷರಿರುತ್ತಾರೆ.

ಪುರುಷಬಹುತ್ವ : ಯಾರ ಸಲುವಾಗಿ ಪ್ರಕೃತಿ ಪರಿಣಾಮಶೀಲವಿರುವುದೊ ಆ ಚೈತನ್ಯ ಸ್ವರೂಪವೇ ಪುರುಷ. ಅವನು ಉದಾಸೀನನಾದ ಕೇವಲ ಸಾಕ್ಷಿ ಮಾತ್ರ, ಚೈತನ್ಯ ಮಾತ್ರ. ಪ್ರಕೃತಿಯಷ್ಟೇ ಅಚೇತನ. ಅವನು ನಿಷ್ಕ್ರಿಯ, ನಿತ್ಯ, ಕೂಟಸ್ಥ, ನಿರ್ಗುಣ. ಆದರೆ ಪ್ರಕೃತಿ ಸಕ್ರಿಯೆ ಅನಿತ್ಯ ಮತ್ತು ಗುಣಾತ್ಮಕ. ಪ್ರಕೃತಿಯೂ ವಿಕೃತಿಗಳೂ ತಮ್ಮ ಪ್ರಕಾಶನಕ್ಕೆ ಪುರುಷಾಧೀನವಾಗಿರುತ್ತವೆ. ಆದರೆ ಪುರುಷ ಸ್ವಯಂ ಪ್ರಕಾಶಕ. ಒಬ್ಬನಿಗೆ ಮೋಕ್ಷವಾದೊಡನೆ ಸರ್ವರಿಗೂ ಮೋಕ್ಷವಾಗದಿರುವುದರಿಂದ ಪುರುಷ ಬಹುತ್ವವನ್ನು ಸಾಂಖ್ಯರು ಒಪ್ಪುತ್ತಾರೆ. ಮೋಕ್ಷವೆಂದರೆ ಪರಮಾತ್ಮನಲ್ಲಿ ಲಯವಲ್ಲ; ಪ್ರಕೃತಿಯಿಂದ ಬೇರೆಯಾಗಿ ನಿಲ್ಲುವ ಕೈವಲ್ಯ.

ಜೀವನೆಂದರೆ ಶುದ್ಧಪುರುಷನಲ್ಲ; ಇಂದ್ರಿಯಾದಿ ಉಪಾಧಿಗಳಿಂದಲೂ ಶರೀರದಿಂದಲೂ ಸಮನ್ವಿತನಾದ ಪುರುಷನಷ್ಟೇ. ಶುದ್ಧಚೈತನ್ಯ ಬುದ್ಧಿಗಿಂತ ಪರನಾದರೂ ಬುದ್ಧಿಯಲ್ಲಿ ಪ್ರತಿಫಲಿಸುವ ಚೈತನ್ಯ ಪ್ರಕಾಶವೇ ಅಹಂ ಎಂದು ಗೋಚರಿಸುತ್ತದೆ. ಕ್ರಿಯೆಯಲ್ಲ ಬುದ್ಧಿಯದು; ಅದಕ್ಕೂ ಪುರುಷನಿಗೂ ನಂಟಿರುವುದರಿಂದ ಉದಾಸೀನವಾದ ಪುರುಷನೂ ಕ್ರಿಯಾಶೀಲನಂತೆ ತೋರುತ್ತಾನೆ; ಕರ್ತೃವಲ್ಲದಿದ್ದರೂ ಪ್ರಕೃತಿಯೊಡನೆ ತನ್ನ ಆರೋಪ ಮಾಡಿಕೊಂಡು ಕರ್ತೃವೆಂದುಕೊಳ್ಳುತ್ತಾನೆ; ಪುರುಷನ ಬಳಿಯಲ್ಲಿ ಬುದ್ಧಿ ಚೈತನ್ಯಪೂಣ್ವಾಗಿ ತೋರುತ್ತದೆ. ಪ್ರತಿಯೊಬ್ಬನಿಗೂ ಸ್ಥೂಲದೇಹದಂತೆ ಸೂಕ್ಷ್ಮದೇಹವೂ ಇರುತ್ತದೆ; ಪುನರ್ಜನ್ಮಕ್ಕೆ ಈ ಸೂಕ್ಷ್ಮದೇಹವೇ ಆಶ್ರಯವಾಗುತ್ತದೆ.

ಪ್ರಕೃತಿಯ ಪರಿಣಾಮಕ್ಕೆಲ್ಲ ಪುರುಷನ ಕೈವಲ್ಯವೇ ಗುರಿ. ಪ್ರಕೃತಿ ಪುರುಷರ ಸಂಬಂಧವನ್ನು ಕುರುಡನ ಹೆಗಲೇರಿ ಹೊರಟ ಕುಂಟನ ವರ್ತನೆಗೆ ಹೋಲಿಸಲಾಗಿದೆ. ಜಗತ್ತಿನೊಡನೆ ಪುರುಷನಿಗೆ ಅಜ್ಞಾತದ ಮೂಲಕ ಸಂಬಂಧವುಂಟಾಗಿ ಸಂಸಾರದ ಅನುಭವ ಬರುತ್ತದೆ. ಜಗತ್ತು ವಸ್ತುತಃ ತನಗಿಂತ ಸ್ವರೂಪಭಿನ್ನವೆಂಬ ವಿವೇಕೋದಯವೇ ಸಾಂಖ್ಯದರ್ಶನದಲ್ಲಿ ಮೋಕ್ಷ.

4 ಯೋಗ : ಸಾಂಖ್ಯದ 24 ತತ್ತ್ವಗಳನ್ನೇ ಒಪ್ಪಿ ಜೊತೆಗೆ ಈಶ್ವರನೆಂಬ 25 ನೆಯ ತತ್ತ್ವವನ್ನೂ ಯೋಗದರ್ಶನ ಒಪ್ಪುತ್ತದೆ. ಇಲ್ಲಿಯ ಈಶ್ವರನಾದರೂ ಸೃಷ್ಟಿ ಸ್ಥಿತಿಪ್ರಳಯಾದಿಗಳ ಕತೃವಲ್ಲ. ಮೋಕ್ಷವೆಂದರೂ ಈಶ್ವರಸಾಯುಜ್ಯವಲ್ಲ. ಮಿಕ್ಕ ನಿತ್ಯಪುರುಷರಂತೆ ಅವನೂ ಒಬ್ಬ, ಅಷ್ಟೆ. ಅವನು ಸರ್ವಶಕ್ತಿ, ಸರ್ವಜ್ಞತ್ವ, ಸದ್ಗುಣಗಳಿಂದ ಸಮನ್ವಿತನಾದವ.

ಬಂಧನಕ್ಕೆ ಅವಿವೇಕವೇ ಕಾರಣ. ಅಜ್ಞಾನ ಕಾರಣವಾಗಿರುವ ಚಿತ್ತವೃತ್ತಿಗಳನ್ನೆಲ್ಲ ನಿರೋಧಿಸುವುದರಿಂದ ಆತ್ಮನ ಸ್ವಯಂಪ್ರಕಾಶ ಅನುಭವದಲ್ಲಿ ಬರುವದು. ಬುದ್ಧಿಪೂರ್ವಕವಾದ ಮತ್ತು ಬುದ್ಧಿ ಪೂರ್ವಕವಲ್ಲದ ಸಕಲ ಚಿತ್ತ ವಿಕ್ರಿಯೆಗಳ ನಿರೋಧವೇ ಯೋಗ ಹೇಳುವ ಮೋಕ್ಷಮಾರ್ಗ. ಅಷ್ಟಾಂಗ ಯೋಗ ಅದಕ್ಕೆ ಸಾಧಕ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂದು ಯೋಗದ ಎಂಟು ಅಂಗಗಳನ್ನು ಹೇಳಲಾಗಿದೆ. ಕಡೆಯದಾದ ನಿರ್ವಿಕಲ್ಪ ಸಮಾಧಿಯಲ್ಲಿ ಆತ್ಮ ಸಾಕ್ಷಾತ್ಕಾರವಾಗುತ್ತದೆ.

5 ಪೂರ್ವ ಮೀಮಾಂಸಾ : ಧರ್ಮದ ಸ್ವರೂಪ ವಿವೇಚನೆಯೇ ಈ ದರ್ಶನದ ಮುಖ್ಯ ಗುರಿ. ಅನುಷಂಗಿಕವಾಗಿ ಮಾತ್ರ ಈ ದರ್ಶನದಲ್ಲಿ ತತ್ತ್ವಶಾಸ್ತ್ರೀಯ ವಿಷಯಗಳು ಬರುತ್ತವೆ. ಜಗತ್ತು ಹಾಗೂ ಜೀವರು ಸತ್ಯವೆಂದು ಈ ದರ್ಶನ ಭಾವಿಸುತ್ತದೆ. ವಿಶೇಷವಾಗಿ ಇದು ಯಜ್ಞಾದಿಕರ್ಮಗಳನ್ನು ವಿವೇಚಿಸುವುದರಿಂದ, ಕರ್ಮಕ್ಕೂ ಕರ್ಮದಿಂದಾಗಿಯೇ ತೀರುವ ಫಲಕ್ಕೂ ಸಂಬಂಧ ಕಲ್ಪಿಸಲು ಅಪೂರ್ವವೆಂಬ ಪ್ರಕ್ರಿಯೆಯನ್ನು ಆಶ್ರಯಿಸುತ್ತದೆ. ಈ ದರ್ಶನದ ಮೊದಲ ಗ್ರಂಥಗಳಲ್ಲಿ ಈಶ್ವರನನ್ನು ಒಪ್ಪದಿದ್ದರೂ ಕಡೆಯ ಗ್ರಂಥಗಳಲ್ಲಿ ಒಪ್ಪಲಾಗಿದೆ.

ಈ ದರ್ಶನದ ಶಾಸ್ತ್ರಕಾರರಲ್ಲಿ ಪ್ರಸಿದ್ಧನಾದ ಕುಮಾರಿಲಭಟ್ಟ ಸ್ವತಃ ಪ್ರಮಾಣವಾದದ ಪುರಸ್ಕರ್ತ. ಜ್ಞಾನವೆಲ್ಲ ಸ್ವತಃ ಪ್ರಮಾಣವೇ ಎಂದು ಅವನ ಸಿದ್ಧಾಂತ. ಯಥಾರ್ಥತೆ ಅರ್ಥಕ್ರಿಯಾಕಾರಿತ್ವ ಇತ್ಯಾದಿಗಳೆಲ್ಲ ಜ್ಞಾನಸಹಜ ಪ್ರಾಮಾಣ್ಯದ ಒರೆಗಲ್ಲುಗಳೇ ಹೊರತು ಪ್ರಾಮಾಣ್ಯ ಜನಕಗಳಲ್ಲವೆಂದು ಈ ದರ್ಶನದ ಅಭಿಪ್ರಾಯ.
6 ಉತ್ತರ ಮೀಮಾಂಸಾ (ವೇದಾಂತ) : ಉಪನಿಷತ್ತುಗಳ ತತ್ತ್ವವನ್ನು ಕ್ರೋಢೀಕರಿಸಿ ಶಾಸ್ತ್ರೀಯವಾಗಿ ವಿವರಿಸುವ ಗುರಿ ಬ್ರಹ್ಮಸೂತ್ರದ್ದು. ಆದರೆ ಅದರ ಸೂತ್ರ ಶೈಲಿ ಸುಲಭವಾಗಿ ಅರ್ಥವಾಗುವ ಹಾಗಿಲ್ಲ. ಆದ್ದರಿಂದ ವಿಭಿನ್ನ ಭಾಷ್ಯಕಾರರು ಅದನ್ನು ಅರ್ಥಯಿಸಲು ಯತ್ನಿಸಿದ್ದಾರೆ.-ಅದ್ವೈತ, ವಿಶಿಷ್ಟಾದ್ವೈತ, ದ್ವೈತ, ಇತ್ಯಾದಿ ದೃಷ್ಟಿಗಳಿಂದ. ಇವರಲ್ಲಿ ಅತ್ಯಂತ ಮುಖ್ಯರೆಂದರೆ ಶಂಕರಾಚಾರ್ಯ, ರಾಮಾನುಜಾಚಾರ್ಯ ಮತ್ತು ಮಧ್ವಾಚಾರ್ಯರುಗಳು.
ಶಂಕರಾಚಾರ್ಯರ (ಸುಮಾರು ಕ್ರಿ. ಶ. 800 ) ಅದ್ವೈತ : ಅನುಭವದಲ್ಲಿ ಯಾವುದೇ ಒಂದಾಗಲಿ ಮೂಲಭೂತ ಸತ್ಯ ಅಥವಾ ಪರಮಾರ್ಥವೆಂಬ ತೀರ್ಮಾನಕ್ಕೆ ಯೋಗ್ಯವಿದೆಯೇ ಹೇಗೆ ಎಂಬ ಪ್ರಶ್ನೆ ಶಾಂಕರಪ್ರಸ್ಥನದ ಆದಿಪ್ರಶ್ನೆ. ನಮ್ಮ ಇಂದ್ರಿಯ ಜ್ಞಾನವೆಲ್ಲ ಭ್ರಮೆಯಾಗಬಹುದು; ನಮ್ಮ ಸ್ಮøತಿಯೂ ಭ್ರಾಂತಿಯಾಗಬಹುದು; ಜಾಗ್ರದವಸ್ಥೆಯ ಅನುಭವಗಳು ಸ್ವಾಪ್ನ ಅನುಭವಗಳಂತೆಯೇ ತೋರಿಕೆಯವಾಗಬಹುದು. ಇಷ್ಟಾದರೂ ಸಂಶಯಾತೀತವಾಗಿ ಸತ್ ಎಂಬ ಒಂದು ಅನುಭವ ನಮ್ಮಲ್ಲಿ ಬೇರೂರಿಯೇ ಇದೆ. ತಾನು ಸತ್ ಎಂಬ ಅನುಭವವೇ ಅದು. ತಾನೇ ಅಸತ್ತೆಂದು ಯಾರೂ ಭಾವಿಸುವುದಿಲ್ಲ. ಇದೇ ಆತ್ಮ, ಆತ್ಮನಿರಾಕರಣೆ ಮಾಡುವವನಲ್ಲಿಯೂ ತಾನೆಂಬ ಸತ್ ಅಂಶ ಇದ್ದೇ ಇರುತ್ತದೆ. ಬುದ್ಧಿಗೆ ಈ ತತ್ತ್ವ ನಿಲುಕದಿದ್ದರೂ ಅದನ್ನು ನಿರಾಕರಿಸಲುಬಾರದು; ಅದು ಅನುಭವಕ್ಕೆ ಸರ್ವಥಾ ಅವಿಷಯವಲ್ಲ. ಅದನ್ನೇ ಅಸ್ಮತ್ಪ್ರತ್ಯಯ ವಿಷಯವೆನ್ನಬಹುದು; ಅದು ಅಪರೋಕ್ಷಾನುಭವ. ಆತ್ಮ ದೇಹವಲ್ಲ. ಇಂದ್ರಿಯಗಳಲ್ಲ. ಬುದ್ಧಿಯೂ ಅಲ್ಲ. ಅದೇ ಶುದ್ಧ ಚೈತನ್ಯ; ದೇಹ ಸುಟ್ಟು ಬೂದಿಯಾದರೂ ಅದಕ್ಕೆ ಲೋಪವಿಲ್ಲ. ಅದು ಏಕ ವಿಶ್ವವಾಪ್ತಿ ಮತ್ತು ಅನಂತ.

ಜ್ಞಾತೃ-ಜ್ಞೇಯಗಳ ಪ್ರತ್ಯೇಕತೆಯಿಂದಾರಂಭವಾಗುವ ತರ್ಕಕ್ಕೆ ಆತ್ಮ ಅಗೋಚರ. ಪರಮಾರ್ಥ ಸಂಬಂಧ ದೂರವಾದರೆ ತರ್ಕಜ್ಞಾನವೆಲ್ಲ ಸಂಬಂಧ ಮೂಲವಿರುತ್ತದೆ. ಪರಮಾರ್ಥ ಕೇವಲ ಸತ್; ಅದಕ್ಕೆ ಮತ್ತೊಂದು ಪ್ರಕಾರ ಹೇಳುವಂತಿಲ್ಲ. ಆದರೆ ನಮ್ಮ ದಿನಂಪ್ರತಿ ವ್ಯವಹಾರದಲ್ಲಿ ಸತ್ ಅಸತ್‍ಗಳನ್ನೂ ವಿಷಯ ವಿಷಯಿಗಳನ್ನೂ ಒಂದನ್ನೊಂದಾಗಿ ಕಲ್ಪಿಸಿಕೊಂಡು ಆತ್ಮನಿಗೆ ಕ್ರಿಯೆ, ಕರ್ತೃತ್ವ, ಭೋಕ್ತøತ್ವಾದಿಗಳುಂಟೆಂದು ವ್ಯವಹರಿಸುತ್ತಾವೆ. ಆದ್ದರಿಂದ ನಾವು ತಿಳಿದುಕೊಂಡಿರುವ ಜ್ಞಾನವೆಲ್ಲ ನಿಜವಾಗಿ ನೋಡಿದರೆ ಅಜ್ಞಾನ ಅಥವಾ ಅವಿದ್ಯೆಯೇ ಸರಿ. ಆದ್ದರಿಂದ ಹೀಗೆ ಅಧ್ಯಸ್ತವಾದ ಸಕಲ ಅವಿದ್ಯೆಗಳನ್ನೂ ದೂರೀಕರಿಸಿಕೊಂಡಾಗ ಬರುವ ಪರಮಾರ್ಥಜ್ಞಾನ ಮಾತ್ರವೇ ವಿದ್ಯೆ. ನಮ್ಮ ಸೀಮಿತ ಬುದ್ಧಿಯೇ ಅವಿದ್ಯೆ. ಅದರ ಬೇರನ್ನು ಕಿತ್ತೊಗೆದರೆ ಬಂಧನವಿಲ್ಲವಾಗುತ್ತದೆ. ಹೀಗೆ ವಿಷಯ ವಿಷಯಿಗಳ ದ್ವೈತವನ್ನು ಮೀರಿದ ಅದ್ವೈತ ಸಾಕ್ಷಾತ್ಕಾರ ಅನುಭವಗೋಚರವೆಂಬುದು ಶಂಕರಾಚಾರ್ಯರ ಸಿದ್ಧಾಂತ. ಪರಮಾರ್ಥ ಸತ್ಯವೊಂದೇ ಪರಾವಿದ್ಯೆ; ಮಿಕ್ಕುದೆಲ್ಲ ಅಪರಾವಿದ್ಯೆ. ಅಪರಾ ವಿದ್ಯೆಯೆಂದರೆ ಮಿಥ್ಯೆ ಅಥವಾ ಸುಳ್ಳೆಂದು ಅಭಿಪ್ರಾಯವಲ್ಲ. ಆದರೆ ಪರಮಾರ್ಥದೊಡನೆ ಹೋಲಿಸಿದಾಗ ಕಡಿಮೆ ಸತ್ಯತ್ವವನ್ನುಳ್ಳುದೆಂದಷ್ಟೇ ತಾತ್ಪರ್ಯ. ವ್ಯಾವಹಾರಿಕ ಜಗತ್ತು ಸ್ವಯಂಸಿದ್ಧವೂ ಅಲ್ಲ, ಪರಮಾರ್ಥ ಸತ್ಯವೂ ಅಲ್ಲ. ಆದರೆ ಅದರ ಮೂಲದಲ್ಲಿ ಕೂಡ ಪರಮಾರ್ಥದ ಆಧಾರವಿರಲೇಬೇಕಾಗುತ್ತದೆ. ಜಗತ್ತು ಕಾಲ್ಪನಿಕ ಅಥವಾ ಮಿಥ್ಯೆಯೆಂದರೂ ಅದರ ಅಧಿಷ್ಠಾನವಾದ ಬ್ರಹ್ಮ ಸತ್ಯವಿರಲೇಬೇಕಾಗುತ್ತದೆ. ಬ್ರಹ್ಮವಸ್ತು ಸಕಲ ವ್ಯವಹಾರಿಕ ಪ್ರಪಂಚಕ್ಕೂ ವಿರುದ್ಧವಿರುವುದರಿಂದ ಅದನ್ನು ನೇತಿ ನೇತಿ ಎಂದೇ ನಿರ್ದೇಶಿಸಬಹುದಾಗುತ್ತದೆ. ನಮಗೆ ತಿಳಿದ ಪ್ರತಿಯೊಂದರಿಂದಲೂ ಭಿನ್ನವಾದುದೇ ಅದು. ಅದನ್ನು ಏಕವೆನ್ನುವಂತೆಯೂ ಇಲ್ಲ; ಎರಡಲ್ಲದ್ದು ಅದ್ವೈತವೆಂದು ಮಾತ್ರ ಹೇಳಬಹುದಷ್ಟೆ. ಆದರೆ ಈ ರೀತಿಯ ನೇತಿ ನೇತಿ ವಾದದಿಂದ ಮನಸ್ಸಿಗೆ ತೃಪ್ತಿ ಬಾರದಿದ್ದಾಗ ಅದನ್ನೇ ಈಶ್ವರನೆಂದು ವ್ಯವಹರಿಸುತ್ತೇವೆ. ಹೀಗೆ ತರ್ಕವಾದದಲ್ಲಿ ಮಾರ್ಪೊಳೆಯುವ ಬ್ರಹ್ಮವಸ್ತು ಈಶ್ವರನಾಗುತ್ತಾನೆ.

ಮಾಯಾವಾದ : ಜಗತ್ತಿನಲ್ಲಿ ಪ್ರತಿಯೊಂದು ಮತ್ತೊಂದರಲ್ಲಿ ಮಾರ್ಪಡುತ್ತಿರುತ್ತದೆ. ಕಾಲ, ದಿಕ್, ಕಾರಣ-ಇವೆಲ್ಲ ಪರಸ್ಪರ ವಿರುದ್ಧಾಂಶಗಳನ್ನು ಹೊಂದಿರುತ್ತವೆ. ಆದರೆ ಇವುಗಳಿಂದಲೇ ನಮ್ಮ ವ್ಯಾವಹಾರಿಕ ಜೀವನ ಸಾಗಿದೆ. ಒಮ್ಮೆ ಆತ್ಮ ಸಾಕ್ಷಾತ್ಕಾರವಾದರೆ ಈ ಬಹುಪ್ರಪಂಚ ಅಡಗಿಹೋಗುತ್ತದೆ. ಜಗತ್ತು ಅಪೂರ್ಣ ಮತ್ತು ಸಾಪೇಕ್ಷವಿರುವುದನ್ನು ಮಾಯಾವಾದ ಒತ್ತಿಹೇಳುವುದೇ ಹೊರತು ಜಗತ್ತೆಲ್ಲ ಬರಿಯ ಭ್ರಾಂತಿಯೆಂದು ಹೇಳುವುದಿಲ್ಲ. ಜಗತ್ತಿಗೆ ಅವಿದ್ಯೆಯೇ ಮೂಲ; ಅದರೆ ಈ ಅವಿದ್ಯೆ ವಿಶ್ವವ್ಯಾಪಿಯಾದುದು. ಆದ್ದರಿಂದಲೇ ಶಂಕರಾಚಾರ್ಯರು ಬೌದ್ಧರ ವಿಜ್ಞಾನವಾದವನ್ನು ನಿರ್ಣಾಯಕವಾಗಿ ಖಂಡಿಸಿರುವರು. ಜೀವಾತ್ಮ-ಜಗತ್ತು ಪರಸ್ಪರ ಸಾಪೇಕ್ಷಗಳು; ಒಂದಲ್ಲದೆ ಒಂದಿರಲಾರದು.

ಆದರೆ ಜಗತ್ತು ಮತ್ತು ಪರಮಾರ್ಥದ ಸಂಬಂಧ ಅನಿರ್ವಚನಿಯವಾದಂಥದು. ಎರಡು ಭಿನ್ನ ವಸ್ತುಗಳಿದ್ದಾಗ ಸಂಬಂಧವಿರಬಹುದು; ಆದರೆ ಪರಮಾರ್ಥತಃ ಇರುವುದೆಲ್ಲ ಒಂದೇ ಎನ್ನುವ ದರ್ಶನದಲ್ಲಿ ಸಂಬಂಧಕ್ಕೆ ಅವಕಾಶವೆಲ್ಲಿ ? ಪರಮಾರ್ಥ ದರ್ಶನದ ಕಾಲದಲ್ಲಿ ವ್ಯವಹಾರ ಕಾಣಿಸದು; ವ್ಯವಹಾರದದರ್ಶನಾವಸರದಲ್ಲಿ ಪರಮಾರ್ಥ ಗೋಚರಿಸದು. ಆದ್ದರಿಂದ ಈ ಪ್ರಶ್ನೆಯೇ ಭ್ರಾಂತಿ ಜನ್ಯವಾದದ್ದು. ಬ್ರಹ್ಮನನ್ನು ಜಗತ್ಕಾರಣವೆಂದರೆ ಬ್ರಹ್ಮನಿಗಿಂತ ಅನ್ಯವಾದುದರಿಂದ ಜಗತ್ತನ್ನು ವಿವರಿಸುವಂತಿಲ್ಲವೆಂದು ಮಾತ್ರ ತಾತ್ಪರ್ಯ. ಬ್ರಹ್ಮನಿಗೆ ಜಗತ್ತಿನ ದೋಷಗಳ ಲೇಪವುಂಟೆಂದಲ್ಲ. ಹೀಗೆ ಬ್ರಹ್ಮ ಜಗತ್ತಿಗೆ ಕೇವಲ ವಿವರ್ತೋಪಾದಾನ (ಕಾರಣ) ಮಾತ್ರವಾಗಿರುತ್ತಾನೆ.

ಜೀವಾತ್ಮ ಅವಿದ್ಯೋಪಹಿತನಿರುವುದರಿಂದ ತಾನು ಆತ್ಮಭಿನ್ನನೆಂದೇ ತಿಳಿದುಕೊಳ್ಳುತ್ತಾನೆ. ಉಪಾಧಿಗಳಿಂದ ಅವನ ಮೂಲಸ್ವರೂಪ ಮುಚ್ಚಿಹೋಗಿರುತ್ತದೆ. ಸೂಕ್ಷ್ಮಶರೀರದ ಕರ್ಮೇಂದ್ರಿಯ ಪ್ರಾಣೇಂದ್ರಿಯಗಳೇ ಉಪಾಧಿಗಳು. ಇವು ಕರ್ಮವೂ ಜೀವನನ್ನು ಜನ್ಮದಿಂದ ಜನ್ಮಾಂತರಕ್ಕೆ ಅನುಸರಿಸುತ್ತವೆ. ಆದರೆ ಈ ಅಜ್ಞಾನದ ಆವರಣವನ್ನು ಹರಿದು ತಾನು ಯಾವಾಗಲೂ ಬ್ರಹ್ಮಾ ಭಿನ್ನನೇ ಎಂಬ ಸಾಕ್ಷಾತ್ಕಾರವನ್ನು ಪಡೆಯುವುದೇ ಮೋಕ್ಷ. ಮೋಕ್ಷಕ್ಕೆ ಕರ್ಮ ನೇರವಾದ ಸಾಧಕವಾಗಲಾರದು; ಜ್ಞಾನವೊಂದೇ ಸಾಧಕ. ಆದರೆ ಈ ಜ್ಞಾನಕ್ಕೆ ನೀತಿಸಮ್ಮತ ಸದಾಚಾರವೂ ಅತ್ಯಗತ್ಯವೆಂದು ಶಂಕರಾಚಾರ್ಯರು ಹೇಳುತ್ತಾರೆ.
ರಾಮಾನುಜಾಚಾರ್ಯರ ವಿಶಿಷ್ಟಾದ್ವೈತ : ಧರ್ಮಶ್ರದ್ಧೆಯಿಂದಲೂ ಭಕ್ತಿಯಿಂದಲೂ ಭಜಿಸಬೇಕಾಗಿರುವ ಭಗವಂತನೆಂದಿಗೂ ಶಂಕರಾಚಾರ್ಯರ ನಿರ್ಗುಣ ಬ್ರಹ್ಮನಾಗಲಾರನೆಂದು ರಾಮಾನುಜರು ( ಕ್ರಿ. ಶ. 12 ನೆಯ ಶತಮಾನ ) ತೋರಿಸಲು ಯತ್ನಿಸುತ್ತಾರೆ. ಅವನು ಅನಂತ ಕಲ್ಯಾಣಗುಣ ಪರಿಪೂರ್ಣನಾದ ಬ್ರಹ್ಮನಾಗಿರಬೇಕಾಗುತ್ತದೆ. ನಮಗೆ ಅವನ ಜ್ಞಾನ ಅಪೂರ್ಣವೆಂದ ಮಾತ್ರಕ್ಕೆ ಅವನ ಅಸ್ತಿತ್ವವನ್ನು ಕುರಿತ ಸಂದೇಹ ಪಡುವಂತಿಲ್ಲ. ಜೀವ ಭಗವಂತನಲ್ಲಿ ಸಾಯುಜ್ಯ ಪಡೆಯುವ ಅನುಭವವನ್ನು ಅಲ್ಲಗೆಳೆಯುವಂತಿಲ್ಲ. ಪರಬ್ರಹ್ಮನಲ್ಲಿ ಸ್ವಗತಭೇದಗಳಿಗವಕಾಶವುಂಟು. ಸಕಲ ಚೇತನಾ ಚೇತನರೂ ಆ ಪರಬ್ರಹ್ಮನಲ್ಲಿ ಗುಣ ಗುಣಿ ಭಾವದಿಂದ ಅಥವಾ ಅವಯವ ಅವಯವಿ ಭಾವದಿಂದ ಸೇರಿಕೊಂಡಿರುತ್ತಾರೆ. ಭಗವಂತನ, ಜೀವರ ಮತ್ತು ಪ್ರಕೃತಿಯ ವಿಶೇಷಣ ಅಥವಾ ಪ್ರಕಾರಗಳಿಗೂ ತಮ್ಮ ತಮ್ಮ ವಿಶಿಷ್ಟ ಲಕ್ಷಣ, ಶಕ್ತಿ ಹಾಗೂ ಕ್ರಿಯೆಗಳಿಗಿರುತ್ತವೆ. ಆದರೆ ಭಗವಂತ, ಜೀವ ಮತ್ತು ಪ್ರಕೃತಿಗಳಿಗೆ ಸ್ವರೂಪ ಭೇದವಿದ್ದರೂ ಅವುಗಳಲ್ಲಿ ಶೇಷ ಶೇಷಿ ಭಾವದ ಮೂಲಕ ಐಕ್ಯವೂ ಇದೆ. ಈ ಐಕ್ಯವೆಂದರೆ ಅಪೃಥಕ್ ಸಿದ್ಧಿಯೆಂದು ತಾತ್ಪರ್ಯ.

ರಾಮಾನುಜರ ಸಿದ್ಧಾಂತದಲ್ಲಿ ಕಾರಣವೆಂದರೆ ಅವಸ್ಥಾಂತರವಷ್ಟೆ. ಬ್ರಹ್ಮನಿಂದ ಜಗತ್ತಿನ ಸೃಷ್ಟಿಯೆಂದರೆ ಹೊಸ ವಸ್ತುವೊಂದರ ಉದಯವೆಂದರ್ಥವಲ್ಲ. ಒಂದೇ ವಸ್ತುವಿನ ಸ್ಥಿತ್ಯಂತರವೆಂದು ಮಾತ್ರ ಅಭಿಪ್ರಾಯ. ಸೂಕ್ಷ್ಮವಿದ್ದುದು ಸ್ಥೂಲವಾಗಿ ಪರಿಣಮಿಸುವುದು ಮಾತ್ರ ವಿವಕ್ಷಿತ. ಕಾರಣಾವಸ್ಥೆಯಲ್ಲಿ ಬ್ರಹ್ಮ ಚಿದಚಿದಂಶಗಳೆರಡನ್ನೂ ತನ್ನ ಶರೀರವಾಗಿಸಿಕೊಂಡು ಸೂಕ್ಷ್ಮ ರೂಪದಲ್ಲಿರುತ್ತಿದ್ದರೆ, ಅವುಗಳ ಸ್ಥೂಲ ರೂಪವಾದ ಸ್ಥಿತ್ಯಂತರವೇ ಕಾರ್ಯಾವಸ್ಥೆ.
ಬ್ರಹ್ಮಸ್ವರೂಪವನ್ನಾವರಿಸುವ ಅಜ್ಞಾನ ಕಾರ್ಯಗಳೇ ಜಗತ್ತು ಮತ್ತು ಜೀವರೆಂಬ ವಾದವನ್ನು ರಾಮಾನುಜರು ಸ್ವೀಕರಿಸುವುದಿಲ್ಲ. ಮಾನವ ಅಜ್ಞಾನದಿಂದ ಜಗತ್ತಿನ ಬಹುತ್ವವುಂಟಾಗಿದ್ದರೆ ಭಗವಂತನಿಗೆ ಆ ಜಗತ್ತು ಇರುವಂತೆಯೇ ಇಲ್ಲ. ಆದರೆ ಭಗವಂತ ಜಗತ್ತನ್ನು ಸೃಷ್ಟಿಸಿದನೆಂದು ಶ್ರುತಿಗಳು ಹೇಳುತ್ತವೆ. ಅಲ್ಲದೆ ಜಗತ್ತನ್ನು ಮರೀಚಿಕಾಪ್ರಾಯವೆಂದು ಅಲ್ಲಗೆಳೆಯುವಂತೆಯೂ ಇಲ್ಲ; ಮರೀಚಿಕಾದಿ ವಿಷಯಕ ಪ್ರವೃತ್ತಿಗಳು ನಿಷ್ಫಲವಾದರೆ ಜಗದ್ವಿಷಯಕ ಜ್ಞಾನಕ್ರಿಯೆಗಳು ಸಫಲವಾಗಿರುತ್ತವೆ. ಜಗತ್ತು ಸತ್ಯವೆಂದು ಪ್ರತ್ಯಕ್ಷ ತೋರಿಸುತ್ತಿರುವಾಗ ಅದು ಅಸತ್ಯವೆಂದು ಶ್ರುತಿಪ್ರಮಾಣ ಹೇಳಲೇ ಆಗದು. ಸತ್ಯತ್ವ ನಿರ್ಣಯಕ್ಕೆ ಪ್ರತ್ಯಕ್ಷವೇ ಪ್ರಬಲತರ ಪ್ರಮಾಣ.

ಭಕ್ತಿಶ್ರದ್ಧೆಗಳಿಂದ ಭಗವತ್ಸಾಯುಜ್ಯ ಪಡೆಯುವುದೇ ರಾಮಾನುಜರ ಪ್ರಕಾರ ಮೋಕ್ಷ. ಗುರಿ ಮುಟ್ಟಿದಾಗ ಜೀವನ ಜೀವತ್ವ ಮಾಯವಾಗುವುದಿಲ್ಲ. ಅನಂತಾನಂದವನ್ನು ಅನುಭವಿಸುವ ಮಟ್ಟಿಗೆ ಪ್ರತ್ಯೇಕತೆ ಉಳಿದೇ ಇರುತ್ತದೆ.

ಮಧ್ವಾಚಾರ್ಯರ ದ್ವೈತ : ಪ್ರಬಲವಾದ ದ್ವೈತವಾದ ಪುರಸ್ಕರ್ತರೇ ಮಧ್ವಾಚಾರ್ಯರು (ಸುಮಾರು 1197 - 1276) . ಭಗವಂತನಿಗೂ ಜೀವಾತ್ಮನಿಗೂ ಇರುವ ಪಂಚಭೇದಗಳನ್ನು ಅವರು ಒಪ್ಪುತ್ತಾರೆ. ಈಶ - ಜೀವ, ಈಶ - ಜಗತ್ತು, ಜೀವ ಜಗತ್ತು, ಒಂದು ಜೀವ ಇನ್ನೊಂದು ಜೀವ, ಜಗತ್ತಿನ ಒಂದು ವಸ್ತು ಇನ್ನೊಂದು ವಸ್ತು - ಇವುಗಳ ನಡುವೆ ನಿಸ್ಸಂಶಯವಾಗಿ ಭೇದವುಂಟೆಂದು ಅವರ ಸಿದ್ಧಾಂತ. ತತ್ತ್ವದಲ್ಲಿ ಸ್ವತಂತ್ರ ಹಾಗೂ ಪರತಂತ್ರ ಎಂದು ಎರಡು ಬಗೆ. ಭಗವಂತನೊಬ್ಬನೇ ಸ್ವತಂತ್ರ ತತ್ತ್ವ, ಜೀವಜಗತ್ತುಗಳೆಲ್ಲ ಪರತಂತ್ರ. ಜೀವಗಳನ್ನೆಲ್ಲ ಹಾಗೂ ಜಗತ್ತನ್ನೆಲ್ಲ ನಿಯಂತ್ರಿಸುವವ ಭಗವಂತನೇ; ಸೃಷ್ಟಿಸುವುದೂ ಲಯ ಮಾಡುವುದೂ ಅವನದೆಂದು ಹೇಳಬೇಕಾಗಿಲ್ಲ. ಅವನು ಜಗತ್ತಿಗೆ ನಿಮಿತ್ತ ಕಾರಣನೇ ಹೊರತು ಉಪಾದಾನ ಕಾರಣವಲ್ಲ. ಬ್ರಹ್ಮನಿಗೆ ಸಂಪೂರ್ಣವಾಗಿ ಅಧೀನರಾಗಿದ್ದರು ಜೀವಾತ್ಮರುಗಳಿಗೆ ಸ್ವರೂಪತಃ ಪ್ರಿಯಾತ್ಮಕ ಕರ್ತೃತ್ವವುಂಟು. ತಮ್ಮ ಕರ್ಮ ಫಲಗಳನ್ನವರು ಅನುಭವಿಸಲೇಬೇಕಾಗುತ್ತದೆ. ಈಶ ವಿಶ್ವವ್ಯಾಪಿ, ಜೀವರು ಮಾತ್ರ ಅನುಸ್ವರೂಪರು. ಆದರೂ ಅವರು ದೇಹವನ್ನೆಲ್ಲ ವ್ಯಾಪಿಸಲು ಚೈತನ್ಯಾಂಶವೇ ಕಾರಣ. ಯಾವ ಎರಡು ಜೀವಗಳು ಗುಣಗಳಲ್ಲಿ ಸಮಾನವಿರುವುದಿಲ್ಲ.	
								(ಕೆ.ಕೆ.)
ಪಾಶ್ಚಾತ್ಯ ತತ್ತ್ವಶಾಸ್ತ್ರ : ತತ್ತ್ವನ್ವೇಷಕ ದೃಷ್ಟಿ ಪಾಶ್ಚಾತ್ಯರಲ್ಲಿ ಸ್ವಲ್ಪ ತಡವಾಗಿ ಮೂಡಿಬಂದರೂ ಅದು ತನ್ನದೇ ಆದ ಸ್ವತಂತ್ರ ಗತಿಯಲ್ಲಿ ಬೆಳೆದು ಶಾಖೋಪಶಾಖೆಯಾಗಿ ಕವಲೊಡೆದು ಪ್ರಬುದ್ಧಗೊಂಡು ಮುನ್ನಡೆಯುತ್ತಿರುವುದನ್ನು ನಾವೀಗ ಕಾಣುತ್ತೇವೆ.

ಯೂರೋಪಿನಲ್ಲಿ ಆರಂಭವಾಗಿ ಬೆಳೆದುಬಂದ ತತ್ತ್ವಶಾಸ್ತ್ರದ ಜೊತೆಗೆ ಅದರ ಪ್ರಭಾವಕ್ಕೊಳಪಟ್ಟು ಬೆಳೆದುಬಂದ ಅಮೆರಿಕದ ತಾತ್ತ್ವಿಕ ಚಿಂತನೆಯನ್ನು ಸೇರುವುದುಂಟು. ಆದರೆ ಇತ್ತೀಚೆಗೆ ಅಮೆರಿಕಾದ ತನ್ನದೇ ಆದ ಸ್ವತಂತ್ರ ವೈಚಾರಿಕ ನೆಲೆಗಟ್ಟಿನ ಮೇಲೆ ತನ್ನ ತತ್ತ್ವಜಿಜ್ಞಾಸೆಯನ್ನು ಮುಂದುವರಿಸುತ್ತಿರುವುದರಿಂದ ಅದು ಪಾಶ್ಚಾತ್ಯ ತತ್ತ್ವಶಾಸ್ತ್ರದಲ್ಲಿ ಈಗ ಅಂತರ್ಗತವಲ್ಲ. 
ಪಾಶ್ಚಾತ್ಯ ತತ್ತ್ವಶಾಸ್ತ್ರದ ವಿಶಿಷ್ಟ ಗುಣಗಳಿವೆ : ಅದು ಮೂಲತಹ ಬುದ್ಧಿಪ್ರಧಾನವಾದುದು. ಅವರ ದರ್ಶನ, ಅವರ ಧರ್ಮದಿಂದ ಭಿನ್ನವಾಗಿದ್ದು ಒಂದು ಇನ್ನೊಂದನ್ನು ಅವಲಂಬಿಸಿದಂತೆ ಬೆಳೆದುಬಂದಿವೆ. ಈ ವಿಚಾರದಲ್ಲಿ ಪೌರಾಸ್ತ್ಯ ತತ್ತ್ವಶಾಸ್ತ್ರ ಅದರಲ್ಲಿ ಮುಖ್ಯವಾಗಿ ಭಾರತೀಯ ತತ್ತ್ವಶಾಸ್ತ್ರ ಪಾಶ್ಚಾತ್ಯಕ್ಕಿಂತ ಬಹುತೇಕ ಭಿನ್ನ. ಭಾರತೀಯ ತತ್ತ್ವಶಾಸ್ತ್ರದಲ್ಲಿ ಧರ್ಮ ಮತ್ತು ತತ್ತ್ವಶಾಸ್ತ್ರ ಪರಸ್ಪರ ಸಮರಗೊಂಡು ಬೆರೆತುಹೋಗಿವೆ. ಈ ಅಂಶವನ್ನು ಕುರಿತು ಪ್ರೊ|| ಹಿರಿಯಣ್ಣನವರು ದೀರ್ಘವಾಗಿ ತಮ್ಮ ಗ್ರಂಥಗಳಲ್ಲಿ ವಿಶ್ಲೇಷಿಸಿದ್ದಾರೆ. ಆದರೆ ಪಾಶ್ಚಾತ್ಯ ತಾತ್ತ್ವಿಕರ ಪ್ರಕಾರ ಧರ್ಮ ಶ್ರದ್ಧೆಯನ್ನಾಧರಿಸಿ ಬದುಕಿದರೆ, ತತ್ತ್ವಶಾಸ್ತ್ರ ವಿಚಾರವನ್ನೇ ತನ್ನ ಬೆನ್ನೆಲುಬಾಗಿಟ್ಟುಕೊಂಡು ಬದುಕುವಂಥದ್ದು. 

ಪಾಶ್ಚಾತ್ಯರು ಕಂಡುಕೊಂಡಿರುವಂತೆ ತತ್ತ್ವ ಮಾನವನ ಎಲ್ಲ ಅನುಭವಗಳನ್ನು ಸಮನ್ವಯಗೊಳಿಸುವ ಬೌದ್ಧಿಕ ಸಾಧನ. ಭಗವಂತ ಇಲ್ಲವೆ ಅತ್ಮವನ್ನು ಕುರಿತಾದ ಶ್ರದ್ದೆ ತಾತ್ತ್ವಿಕನ ಕಕ್ಷೆಗೆ ಸೇರಿದಲ್ಲ. ಅದು ಮಾನವನ ನಂಬಿಕೆಗೆ ಸೇರಿದ ಅಂಶವಷ್ಟೆ. ತತ್ತ್ವದಲ್ಲಿ ಅಲೌಕಿಕತೆಯ ಅಂಶವನ್ನು ಅವರು ಅಷ್ಟಾಗಿ ಸಹಿಸುವುದಿಲ್ಲ. ಅವರ ತಾತ್ತ್ವಿವಿಕ ತೃಷೆ ವಿಚಾರವಂತಿಕೆಯೊಂದರಿಂದಲೇ ಪರಿಹಾರವಾಗುವಂಥದು. ಈ ಕಾರಣದಿಂದಲೇ ಅವರು ಆತ್ಮಸಾಕ್ಷಾತ್ಕಾರ ದೈವದ ಅಸ್ತಿತ್ವ ಮುಂತಾದ ಧಾರ್ಮಿಕ ಸಿದ್ಧಾಂತಗಳನ್ನು ಸಹ ವಿಚಾರದ ಓರೆಗಲ್ಲಿಗೆ ಹಚ್ಚಿ ಪರೀಕ್ಷಿಸಲು ಹಿಂದೆಗೆದಿಲ್ಲ. 

ಪಾಶ್ಚಾತ್ಯ ತತ್ತ್ವಶಾಸ್ತ್ರ ಅವರ ಕ್ರೈಸ್ತ ಧರ್ಮದಿಂದ ಆದಷ್ಟೂ ದೂರವಿದ್ದು ಸ್ವತಂತ್ರವಾಗಿ ಬೆಳೆದಿದೆ. ಕ್ರೈಸ್ತ ಧರ್ಮದ ಪ್ರಭಾವ ಅವರ ದರ್ಶನದ ಮೇಲೆನಾದರು ಇರುವುದಾದರೆ ಅದು ಅತ್ಯಲ್ಪವೆಂದೇ ಹೇಳಬೇಕು. ಅವರ ದರ್ಶನ ಅವರ ವಿಜ್ಞಾನದ ಹಾದಿಯನ್ನು ತುಳಿದು ಮುಂದೆ ಸಾಗಿದೆ. ಪ್ರತ್ಯಕ್ಷಾನುಭವವನ್ನು ಮಾತ್ರ ನಂಬಿ ನಡೆಯುವ ವಿಜ್ಞಾನಿಗೂ ಅನುಮಾನ ಪ್ರಮಾಣವನ್ನು ಒಪ್ಪುವ ಪಾಶ್ಚಾತ್ಯ ತಾತ್ವ್ತಿಕನಿಗೂ ಅಷ್ಟೇನು ವಿಚಾರಭೇದ ಕಾಣುವುದಿಲ್ಲ. ವಿಜ್ಞಾನಿಯ ಸಿದ್ಧಾಂತಗಳನ್ನು ವಿಚಾರದ ತಂತುವಿನಲ್ಲಿ ಸಮನ್ವಯಗೊಳಿಸಿ ಪೋಣಿಸಿ ಮಾನವನ ಅನುಭಾವಕ್ಕೊಂದು ವ್ಯಾಪ್ತಿಯನ್ನು ತಂದುಕೊಡಬಲ್ಲವನೇ ತಾತ್ವಿಕ. ವಿಜ್ಞಾನಿಯ ಭೌತಿಕ ಸತ್ಯಗಳಿಗೆ ಅಧಾರವಾದ ಗೃಹಿತ ತತ್ತ್ವಗಳನ್ನು ಕುರಿತಾದ ಚಿಂತನೆ ಮತ್ತು ವಿವರಣೆಯೇ ಭೌತಾತೀತ ವಿದ್ಯೆಯ (ಮೆಟಫಿಸಿಕ್ಸ್) ಉದ್ದೇಶ. ವಸ್ತು ನಿಷ್ಠವಾದ ವಿಜ್ಞಾನಿ ಪ್ರಯೋಗಾತ್ಮಕವಾಗಿ ಅನ್ವೇಷಿಸಿ ಕಂಡ ಭೌತಿಕ ಸತ್ಯಗಳನ್ನು ವ್ಯಾಪಕವಾಗಿ ಸಮನ್ವಯಗೊಳಿಸಬಲ್ಲನೇ ತಾತ್ತ್ವಿಕ. ಅ ಕಾರಣದಿಂದಲೇ ಪಾಶ್ಚಾತ್ಯ ದರ್ಶನ ಪಾಶ್ಚಾತ್ಯ ವಿಜ್ಞಾನಕ್ಕೆ ಪೂರಕವಾಗಿ ಬೆಳೆದು ಬಂದಿದೆ. 

 ಪಾಶ್ಚಾತ್ಯ ತತ್ತ್ವಶಾಸ್ತ್ರ ಅವರ ಧರ್ಮ ಹಾಗೂ ವಿಜ್ಞಾನಗಳಿಂದ ಭಿನ್ನವಾಗಿರುವುದರ ಜೊತೆಗೆ ಅವರ ತರ್ಕ ನೀತಿ ಕಲೆ ಮುಂತಾದ ಉಳಿದ ಜ್ಞಾನ ಪ್ರಕಾರಗಳಿಂದಲೂ ಭಿನ್ನವಾಗಿದ್ದು ಅವುಗಳಿಗೆಲ್ಲ ಪೂರಕವೆನಿಸುವಂತಿದೆ. ಈ ವಿಚಾರದಲ್ಲಿಯೂ ಅದು ಭಾರತೀಯ ದರ್ಶನದಿಂದ ಭಿನ್ನವೆನಿಸಿದೆ. ಭಾರತೀಯ ದರ್ಶನವಾರೂ ತರ್ಕ, ನೀತಿ, ಧರ್ಮ, ವಿಜ್ಞಾನ ಈ ಎಲ್ಲ ಶಾಖೆಗಳನ್ನು ಮೂಲತಃ ತನ್ನಲ್ಲಿ ಒಳಗೊಂಡಿದ್ದು ತನ್ನ ಮೂಲ ಸಿದ್ಧಾಂತಕ್ಕನುಗುಣವಾಗಿ ಅವು ಮುಂದೆ ವಿಕಾಸಗೊಳ್ಳತಕ್ಕದ್ದೆಂದು ನಿಯಂತ್ರಿಸಿತು.

 ಪಾಶ್ಚಾತ್ಯ ಜಗತ್ತಿನಲ್ಲಿ ವಿಶ್ವದ ಮೂಲ ಸತ್ಯವನ್ನು ಕುರಿತು ಚಿಂತಿಸಿದ ಮೊದಲಿಗರೆಂದರೆ ಗ್ರೀಸಿನ ವಿಚಾರವಂತ ಜನ. ಕ್ರಿ.ಪೂ. 6ನೆಯ ಶತಮಾನದ ಸರಿಸುಮಾರಿಗೆ ಬಾಳಿದ ಸಾಕ್ರಟೀಸನಿಗಿಂತಲೂ ಮೊದಲು ಗ್ರೀಸಿನಲ್ಲಿ ಅಗಿ ಹೋದ ಪ್ರಾಜ್ಞರಲ್ಲಿ ಹೆಸರಿಸಬಹುದಾದಂತಹ ತೇಲಿಸ್ó, ಹೆರಕ್ಲೈಟಸ್, ಪಿತ್ಯಾಗರಸ್, ಮುಂತಾದವರು ವಿಶ್ವಕ್ಕೆ ಆಧಾರವಾದ ಮೂಲವಸ್ತು ಯಾವುದಿರಬಹುದು ಎಂದು ಆಲೋಚಿಸಿದ್ದುಂಟು. ಅವರಿಗಿದ್ದ ಅರಿವಿನ ಸೌಲಭ್ಯಗಳ ಮಿತಿಯಲ್ಲಿ ಅವರು ಅ ಮೂಲವಸ್ತು ದ್ರವರೂಪದ್ದಾಗಿರಬಹುದು. ಅನಿಲರೂಪದ್ದಾಗಿರಬಹುದೆಂದೂ ತಮಗೆ ಸರಿ ಕಂಡ ರೀತಿಯಲ್ಲಿ ವಿವರಿಸಿದರು. ಇಂಥ ಅನಿರ್ದಿಷ್ಟವಾದ ಇವರ ಈ ಚಿಂತನೆ ಮುಂದೆ ಪ್ರಬುದ್ಧಗೊಂಡು ಸಾಕ್ರಟೀಸ್ ಪ್ಲೇಟೊ ಮತ್ತು ಅರಿಸ್ಟಾಟಲನ ಕಾಲಕ್ಕೆ ಸುವ್ಯವಸ್ಥಿತವಾದ ಒಂದು ರೂಪ ತಳೆಯಿತು.

	ಕ್ರಿ.ಶ. 5 ಮತ್ತು 6ನೆಯ ಶತಮಾನದ ವೇಳೆಗೆ ಪಾಶ್ಚಾತ್ಯ ತತ್ತ್ವಶಾಸ್ತ್ರದೊಂದಿಗೆ ಸಮಾನಾಂತರದಲ್ಲಿ ಬೆಳೆದು ಬರುತ್ತಿದ್ದ ಕ್ರೈಸ್ತಧರ್ಮ ಅನಂತರದ ಮಧ್ಯಕಾಲೀನಯುಗದಲ್ಲಿ ತತ್ತ್ವಶಾಸ್ತ್ರಗಳ ಬಹು ಸಮೀಪವಾಯಿತು. ಆ ತರುಣದಲ್ಲಿ ಬಂದ ಕ್ರೈಸ್ತಸಂತರಾದ ಸೇಂಟ್ ಅಗಸ್ಟಿನ್, ಸೇಂಟ್ ತಾಮಸ್ ಆಕ್ವಿನಸ್ ಮೊದಲಾದವರು ಕೇವಲ ಧಾರ್ಮಿಕ ಸಂತರಾಗಿ ಉಳಿಯಲಿಲ್ಲ. ದಾರ್ಶನಿಕ ಚಿಂತನೆಯಲ್ಲಿಯೂ ತೊಡಗಿದ್ದ ಇವರು ಎರಡು ಕಡೆಯೂ ಕೈಚಾಚಿದರು. ವೈಚಾರಿಕತೆಯನ್ನು ಬಳಸಿ ದೇವರು ಆತ್ಮ ಇವುಗಳನ್ನು ಸ್ಥಾಪಿಸ ಹೊರಟಿವರ ಪ್ರಯತ್ನದಿಂದ ಪಾಶ್ಚಾತ್ಯ ತತ್ತ್ವಚಿಂತನೆಗೆ ಹೆಚ್ಚಿನ ಲಾಭವೇನೂ ಆಗಲಿಲ್ಲ. ಎಲ್ಲಿಯವರೆಗೆ ಪಾಶ್ಚಾತ್ಯ ತತ್ತ್ವಶಾಸ್ತ್ರ ಕ್ರೈಸ್ತ ಸಂತರ ಕೈಯಲ್ಲುಳಿಯಿತೋ ಅಲ್ಲಿಯವರೆಗೆ ದರ್ಶನದಲ್ಲಿ ಹೇಳಿಕೊಳ್ಳುವಂಥ ಯಾವ ಮುನ್ನಡೆಯೂ ಆಗಲಿಲ್ಲ. ಈ ಕಾರಣದಿಂದಲೇ ಈ ಮಧ್ಯಕಾಲೀನ ಯುಗವನ್ನು ಒಂದು ರೀತಿಯಲ್ಲಿ ಶೂನ್ಯತೆಯಿಂದ ತುಂಬಿದ ಅಂಧಕಾರ ಯುಗವೆಂದು ಕರೆಯಲಾಗಿದೆ.

	ಅರಿಸ್ಟಾಟಲನ ಕಾಲವಾದ ಮೇಲೆ ಬತ್ತಿಹೋದ ಪಾಶ್ಚಾತ್ಯದಾರ್ಶನಿಕ ವಿಚಾರ ಪರತೆ ಮತ್ತೆ ಪುಃಶ್ಚೇತನಗೊಂಡಿದ್ದು ಡೇಕಾರ್ಟನ ಕಾಲದಲ್ಲಿಯೇ. ಆಧುನಿಕ, ಪಾಶ್ಚಾತ್ಯ ತತ್ವದ ಪಿತಾಮಹನೆನಿಸಿದ ಡೇಕಾರ್ಟ ತತ್ತ್ವವನ್ನು ಈ ಸಂತರ ಧಾರ್ಮಿಕ ಶ್ರದ್ಧೆಯಿಂದ ಬಿಡಿಸಿ ವಿಚಾರದ ನೆಲೆಗಟ್ಟಿನ ಮೇಲೆ ಪುನಃ ಸ್ಥಾಪಿಸಲು ನೆರವಾದ. 

	ಡೇಕಾರ್ಟನಿಂದ ಮೊದಲುಗೊಂಡು ಇಮಾನ್ಯುಅಲ್ ಕಾಂಟನ್‍ವರಿಗೆ ಆಗಿ ಹೋದ ದಾರ್ಶನಿಕ ಚಿಂತನೆಯನ್ನು ವ್ಯಾಪಕವಾಗಿ ಮೂರು ಭಾಗಗಳಾಗಿ ವಿಭಜಿಸಬಹುದು. ಡೇಕಾರ್ಟ, ಸ್ಪಿನೋಜó, ಲೈಬ್ನಿಟ್ಸ್ ಮುಂತಾದವರು ಬೆಳೆಸಿಕೊಂಡು ಬಂದ ಬುದ್ಧಿಪ್ರಮಾಣವಾದ ಒಂದಾದರೆ, ಬ್ರಿಟಿಷ್ ದಾರ್ಶನಿಕನಾದ ಲಾಕ್, ಬಾರ್ಕ್‍ಲಿ ಮೊದಲಾದವರು ಪುಷ್ಟಿಗೊಳಿಸಿದ ವಾಸ್ತವವಾದ ಹಾಗೂ ಹ್ಯೂಮ್‍ನಿಂದ ಮೊದಲಾದ ಸಂದೇಹವಾದ ಇವು ಇನ್ನೆರಡು. ಬುದ್ಧಿಪ್ರಮಾಣವಾದದ ಪ್ರಕಾರ ವಿಶ್ವದ ಅಸ್ತಿತ್ವವನ್ನು ನಾವು ನಮ್ಮ ಬುದ್ಧಿ ಮತ್ತು ಇಂದ್ರಿಯಗಳ ಮೂಲಕ ತಿಳಿದುಕೊಳ್ಳುತ್ತೇವೆ. ಆದ್ದರಿಂದ ನಮ್ಮ ವಿವೇಕದ ನಿರ್ದೇಶನಕ್ಕೊಳಗೊಂಡಂತೆ ಬಾಹ್ಯವಾಗಿ ವಿಶ್ವವಿದೆ ಎಂದಂತಾಯಿತು. ನಮ್ಮ ಬುದ್ಧಿಯಲ್ಲಿ ಪ್ರತಿಬಿಂಬಿತವಾಗದ ವಿಶ್ವ ಹೇಗಿದೆಯೆಂಬುದು ನಮಗೆ ತಿಳಿಯದು. ವಿಶ್ವದ ನೈಜಸ್ವರೂಪ ಮೂಲತಃ ಮಾನವನ ಬುದ್ಧಿಯಿಂದ ನಿರ್ದಿಷ್ಟಗೊಳ್ಳುತ್ತದಾದ್ದರಿಂದ ಬುದ್ಧಿಪ್ರಮಾಣವಾದಿಗಳು ವಾಸ್ತವಿಕ ಜಗತ್ತಿನ ಅಸ್ತಿತ್ವವನ್ನು ನಿರಾಕರಿಸಿ ಬುದ್ಧಿಯ ಹಿರಿಮೆಯನ್ನು ಸ್ಥಾಪಿಸಿದರು.

	ವಾಸ್ತವವಾದಿಗಳ ಪ್ರಕಾರ ವಾಸ್ತವಿಕ ಜಗತ್ತು ಅತ್ಯಂತ ಸತ್ಯವೆನಿಸಿದ್ದು ಮಾನವನ ಅರಿವಿಗೆ ವಸ್ತುವಾಗುತ್ತದೆ. ಮಾನವನ ಬುದ್ಧಿ ತಾನು ಕಂಡದ್ದನ್ನು ಕಂಡಂತೆ ಪ್ರತಿಬಿಂಬಿಸುವ ಸೂಕ್ಷ್ಮಗ್ರಾಹಿಯಾದ ಒಂದು ಮಾಧ್ಯಮವಷ್ಟೆ. ತಾನು ಸ್ವೀಕರಿಸಿದ ಅನುಭವಗಳನ್ನು ಬೇಕೆಂದಾಗ ಸ್ಮರಿಸುವ ಶಕ್ತಿಯೂ ಇವನ ಬುದ್ಧಿಗಿದೆ. ಆದರೆ, ಬಾಹ್ಯದಲ್ಲೇ ಇಲ್ಲದ ವಾಸ್ತವಿಕ ಜಗತ್ತನ್ನು ಸೃಷ್ಟಿಸುವ ಶಕ್ತಿ ಮಾನವನ ಬುದ್ಧಿಗೆ ಎಂದಿಗೂ ಇಲ್ಲ. ಆದ್ದರಿಂದಲೇ ವಾಸ್ತವಿಕ ಜಗತ್ತಿಗೆ ಸೀಮಿತಗೊಂಡು ಕೇವಲ ವಸ್ತುನಿಷ್ಠವಾಗಿರುತ್ತದೆ ಎಂಬುದು ಇವರ ಮತ.

	ಈ ರೀತಿ ಜ್ಞಾತೃ ಜ್ಞೇಯಗಳ ನಡುವೆ ಯಾವುದು ಸತ್ಯ ಯಾವುದು; ಮಿಥ್ಯ ಯಾವುದು ಮೊದಲು ಯಾವುದು ಅನಂತರ ಎಂಬ ಈ ಜಿಜ್ಞಾಸೆಯಲ್ಲಿ ಯಾವ ಒಂದು ನಿಲುವನ್ನೂ ಒಪ್ಪದೆ ಕೆಲವರು ಸಂದೇಹವಾದಿಗಳೆನಿದರೂ ಮಾನವನ ಮೂಲಸ್ವರೂಪದಲ್ಲದಡಗಿರುವ ಜ್ಞಾತೃರೂಪದ ಬುದ್ಧಿ ಮತ್ತು ಜ್ಞೇಯ ವಸ್ತುಗಳ ಮೂಲ ಸ್ವರೂಪವೇನಿರಬಹುದೆಂಬುದು ಬಿಡಿಸಲಾರದ ಸಮಸ್ಯೆಯಾಗಿ ಇವರಿಗೆ ಕಂಡಿತು. ಈ ರೀತಿಯ ಸಂದೇಹದ ಫಲವಾಗಿಯೇ ಕಾಂಟ್ ವಿಮರ್ಶಾತ್ಮಕ ದರ್ಶನ ಎಂಬ ನೂತನ ದಾರ್ಶನಿಕ ಸಿದ್ಧಾಂತ ಒಂದನ್ನು ರೂಪಿಸಿ ಇವುಗಳ ಸಮನ್ವಯದ ಮಾರ್ಗವನ್ನು ತೋರಿಸಿದ. ಈ ಕಾರ್ಯವನ್ನು ವೈಜ್ಞಾನಿಕವಾಗಿ ನಿರೂಪಿಸಿದ ಈತನ ಗ್ರಂಥ `ಶುದ್ಧವಿಚಾರದ ಮೀಮಾಂಸೆ ಕ್ರೀಟೀಕ್ ಆಫ್ ಪ್ಯೂರ್‍ರೀಸನ್) ಅತ್ಯಂತ ಕ್ರಾಂತಿಕಾರಕ ಗ್ರಂಥವೆನಿಸಿತು.

	ಪಾಶ್ಚಾತ್ಯರು ವಿಜ್ಞಾನದಲ್ಲಿ ಮುನ್ನಡೆದಂತೆಲ್ಲ ಅಲ್ಲಿನ ತಾತ್ತ್ವಿಕರ ಹೊಣೆಗಾರಿಕೆ ಹೆಚ್ಚುತ್ತ ಬಂತು. ವಿಶ್ವದ ಉಗಮ, ಜೀವಜಂತುಗಳ ವಿಕಾಸಗಳನ್ನು ಕುರಿತು ವಿಜ್ಞಾನಿಗಳು ಪ್ರಯೋಗಾತ್ಮಕವಾಗಿ ಹೊಸ ಸಿದ್ಧಾಂತಗಳನ್ನು ರೂಪಿಸಿದಂತೆಲ್ಲ ತಾತ್ತ್ವಿಕ ದಾರ್ಶನಿಕ ಕುತೂಹಲದಿಂದ ಅವನ್ನು ಅಳವಡಿಸಿಕೊಳ್ಳಲು ಮರೆಯಲಿಲ್ಲ. ಜೀವ ಮತ್ತು ಜಗತ್ತಿನ ಉತ್ಪತ್ತಿಯನ್ನು ಕುರಿತು ಬೈಬಲ್ಲಿನ ಹಳೆಯ ಒಡಂಬಡಿಕೆಯಲ್ಲಿ ಪೃತಿಪಾದಿತವಾದ ಕ್ರೈಸ್ತಧರ್ಮದ ವಿವರಣೆಗೆ ಪಾಶ್ಚಾತ್ಯ ತಾತ್ತ್ವಿಕನ ದೃಷ್ಟಿಯಲ್ಲಿ ಒಂದು ಕವಡೆಯಷ್ಟೂ ಬೆಲೆಯಿಲ್ಲ. ಪಾಶ್ಚಾತ್ಯರ ಸನಾತನತೆ ಅಲ್ಲಿನ ವಿನೂತನೆಯ ಮುಂದೋಟವನ್ನು ಬಹುಕಾಲ ತೆರೆದಿಟ್ಟಿರಲು ಶಕ್ತವಾಗಲಿಲ್ಲ. ವಿಜ್ಞಾನದ ಹೊಸ ಆವಿಷ್ಕಾರವಾದಂತೆಲ್ಲ ಪಾಶ್ಚಾತ್ಯ ತತ್ತ್ವಶಾಸ್ತ್ರ ತನ್ನ ಮೂಲ ನಿಲುವನ್ನೇ ಮಾರ್ಪಡಿಸಿಕೊಂಡಿತು. ಮಾನವನ ಅನುಭವದ ಆಳ ಅಗಲಗಳು ಹೆಚ್ಚಿದಂತೆಲ್ಲ ತಾತ್ತ್ವಿಕ ಅವುಗಳ ಸಮನ್ವಯದ ಹೊಣೆಗಾರಿಕೆಯನ್ನು ಸಮರ್ಥ ರೀತಿಯಲ್ಲಿ ನಿರ್ವಹಿಸುತ್ತ ಬಂದಿದ್ದಾನೆ.

	ಕಾಂಟನಾದ ಮೇಲೆ ಬಂದ ಮತ್ತೊಬ್ಬ ಪ್ರಖ್ಯಾತ ತಾತ್ತ್ವಿಕ ಹೇಗಲ್ ಇತಿಹಾಸದ ಪ್ರಗತಿಯ ಗತಿಯನ್ನು ನಿರೂಪಿಸುವ ನೂತನ ಸಿದ್ಧಾಂತ ಒಂದನ್ನು ಪ್ರತಿಪಾದಿಸಿದ. ವಾದಾತ್ಮಭೌತವಾದ (ಡೈಯಲೆಕ್ಟಿಕಲ್ ಮೆಟೇರಿಯಲಿಸಂ) ಎಂದು ಕರೆಯಲಾದ ಈ ಸಿದ್ಧಾಂತ ಕಾರ್ಲ್ ಮಾಕ್ರ್ಸ್ ಮತ್ತು ಎಂಗೆಲ್ಸರ ಮೇಲೆ ತುಂಬ ಪ್ರಭಾವ ಬೀರಿ ಸಮತಾವಾದದಂಥ ಒಂದು ನೂತನ ಜೀವನಕ್ಕೆ ನಾಂದಿಯಾಯಿತು. ಅಷ್ಟೇ ಅಲ್ಲದೆ, ಸಮಕಾಲೀನ ತಾತ್ತ್ವಿಕರಲ್ಲಿ ಪ್ರಚಲಿತವಿರುವ ತಾರ್ಕಿಕ ದೃಷ್ಟಪ್ರಮಾಣವಾದ (ಲಾಜಿಕಲ್ ಪಾಸಿಟಿವಿಸಂ) ಅಸ್ತಿತ್ವ ನಿಷ್ಠವಾದ (ಎಕ್ಸಿಸ್ಟೆಂಷಿಯಲಿಸಂ) ಮುಂತಾದ ಹೊಸ ತಾತ್ತ್ವಿಕ ಸಿದ್ಧಾಂತಗಳು ಅವರ ಸಾಹಿತ್ಯ ಸಂಗೀತ, ಕಲೆ ಮತ್ತು ಇತರ ಜೀವನರಂಗವನ್ನೆಲ್ಲ ವ್ಯಾಪಿಸಿ ಪರಿಣಾಮ ಬೀರುವುದನ್ನು ಕಾಣುತ್ತೇವೆ. 		(ಎ.ಎಲ್.ಎಸ್.)

ತತ್ತ್ವಶಾಸ್ತ್ರ; ತತ್ತ್ವಶಾಸ್ತ್ರೀಯ ಅಧ್ಯಯನಗಳು: ತತ್ತ್ವಶಾಸ್ತ್ರ ಎಂಬುದು ಒಂದು ಸಾಮಾನ್ಯವಾದ ಶಬ್ದ; ಬೇರೆಬೇರೆ ಕಾಲದ ಬೇರೆಬೇರೆ ಗ್ರಂಥಕಾರರು ಬೇರೆಬೇರೆ ರೀತಿಯಿಂದ ಅದರ ಅರ್ಥ ಮತ್ತು ವ್ಯಾಪ್ತಿಯನ್ನು ಗ್ರಹಿಸಿದ್ದಾರೆ. ಅದನ್ನು ಅರಿಯಲು ಉತ್ತಮ ಮಾರ್ಗವೆಂದರೆ ಪ್ರಾಚೀನ ಗ್ರೀಕರ ಚಿಂತನೆ ಸಾಮಾನ್ಯವಾದ ಜ್ಞಾನ ಹಾಗೂ ಸಂಸ್ಕøತಿಗಳಿಂದ ವಿಲಕ್ಷಣ ಸ್ವತಂತ್ರವಾಗಿ ಬೇರ್ಪಟ್ಟುದು ಹೇಗೆಂಬುದರ ವಿವೇಚನೆ_ಎನ್ನಬಹುದು. ಜ್ಞಾನದ ಅನ್ವೇಷಣೆಯೆಂಬರ್ಥದಲ್ಲಿ ಅದನ್ನು ಪ್ರಾಚೀನರು ಪ್ರಯೋಗಿಸುತ್ತಿದ್ದರು; ಜ್ಞಾನಪ್ರೇಮಿಯೆಂಬರ್ಥದಲ್ಲಿ ಫಿಲಾಸಫರ್ ಪದವನ್ನು ಸಾಕ್ರಟೀಸ್, ಪ್ಲೇಟೋ ಮುಂತಾದವರು ಬಳಸಿದ್ದಾರೆ. ಆದರೆ ಒಂದು ವಿಶಿಷ್ಟ ಕ್ಷೇತ್ರದ ಜ್ಞಾನ ತತ್ತ್ವಶಾಸ್ತ್ರದ ಕಕ್ಷೆಯಲ್ಲಿ ಬರುವುದೆಂಬ ಅಭಿಪ್ರಾಯದಿಂದ ಹಿಡಿದು ಸಕಲ ಕ್ಷೇತ್ರಗಳಿಗೂ ಅನ್ವಯಿಸುವ ಮೂಲಭೂತ ಜ್ಞಾನವೆಂಬ ಅರ್ಥದವರೆಗೂ ನಾವು ಈ ಶಬ್ದದ ಅರ್ಥವಿಕಾಸದ ಹೆಜ್ಜೆಗಳನ್ನು ಗುರುತಿಸಬಹುದು. ತೋರಿಕೆಗಳನ್ನೇ ಅಭಾಸಗಳನ್ನೇ ನಿಜವೆಂದು ಭ್ರಮಿಸದೆ ಅಂತರಾಳದ ನಿತ್ಯತತ್ತ್ವವನ್ನು ಅರಿವಾತನೇ ತತ್ತ್ವಜ್ಞಾನಿಯೆಂದು ಪ್ಲೇಟೋ ಭಾವಿಸುತ್ತಾನೆ. ಇದು ನೈತಿಕ, ಧಾರ್ಮಿಕ ವಿಷಯಗಳಿಗೆ ಸೀಮಿತವಿರುವುದರಿಂದ ಮಿಕ್ಕ ವಿಷಯಗಳ ಅರಿವು ಇದರಿಂದಾಗದು. ತೋರಿಕೆಯಲ್ಲದ ಮೂಲಭೂತ ತತ್ತ್ವವನ್ನು ಸಾಕ್ಷಾತ್ಕರಿಸಲು ಅಗತ್ಯವಾದ ಅಧ್ಯಯನ ಕ್ಷೇತ್ರಗಳ ವ್ಯಾಪ್ತಿಯೆಷ್ಟೆಂದು ಇದರಿಂದಲೇ ಹೇಳಲಾಗುವಂತಿಲ್ಲ. ತರ್ಕ, ನೀತಿಶಾಸ್ತ್ರ, ಭೌತಿಕಶಾಸ್ತ್ರ, ಮನಶ್ಶಾಸ್ತ್ರ, ಪ್ರಮಾಣವಾದ ಮತ್ತು ಆಧ್ಯಾತ್ಮಶಾಸ್ತ್ರಗಳನ್ನೆಲ್ಲ ಒಂದು ರೀತಿಯ ಧಾರ್ಮಿಕ ಸಮನ್ವಯದಲ್ಲಿ ಆತ ಕೂಡಿಸಿಬಿಟ್ಟಿದ್ದಾರೆ. ಆದರೆ ಅರಿಸ್ಟಾಟಲನ ವೇಳೆಗೆ ಈ ವಿವಿಧ ಕ್ಷೇತ್ರಗಳ ವೈಲಕ್ಷಣೈಗಳು ಇಂದಿನಂತೆಯೇ ವ್ಯಕ್ತವಾಗತೊಡಗುತ್ತದೆ. ಸೃಷ್ಟಿವಿಚಾರ, ನೀತಿ ವಿಚಾರಗಳು ತತ್ತ್ವಶಾಸ್ತ್ರದ ಮೊದಲ ಲೇಖಕರ ಸರಣಿಯಾದರೆ, ಅರಿಸ್ಟಾಟಲನದು ವೈಚಾರಿಕ ವಿಶ್ಲೇಷಣೆಯ ಮಾರ್ಗ ಅರಿಸ್ಟಾಟಲನೇ ಸ್ವತಂತ್ರವಾದ ತರ್ಕ, ಮನಶ್ಶಾಸ್ತ್ರ, ನೀತಿಶಾಸ್ತ್ರ ಮತ್ತು ಸೌಂದರ್ಯಶಾಸ್ತ್ರಗಳ ಜನಕ; ಈ ಎಲ್ಲ ಶಾಸ್ತ್ರಗಳ ಚಿಂತನೆಯ ಪ್ರಮೇಯಗಳ ವಿವೇಚನೆಯನ್ನು ಅವನು ಒದಗಿಸಿದ್ದಾನೆ. ಇದಕ್ಕೆ ಅವನು ಕೊಡುವ ಹೆಸರು ಆದಿ ತತ್ತ್ವಗಳು ಎಂದು. ಆದರೆ ಅದಕ್ಕೆ ಈಚೆಗೆ ಭೌತಾತೀತ ಚಿಂತನೆ (ಮೆಟಫಿಸಿಕ್ಸ್) ಎಂಬ ಹೆಸರು ರೂಢವಾಗಿದೆ. ಅರಿಸ್ಟಾಟಲ್ ಮುಂತಾದವರು ತತ್ತ್ವಜ್ಞಾನದಲ್ಲಿ ಈಗ ಹೇಳಿದಷ್ಟೆ ಶಾಸ್ತ್ರಗಳಿಂದೇನೂ ನಿರ್ದಿಷ್ಟಪಡಿಸಿಲ್ಲ. ಅದಕ್ಕೆ ಬದಲಾಗಿ ಗಣಿತಶಾಸ್ತ್ರವೇ ಮುಂತಾದ ಭËತಶಾಸ್ತ್ರಗಳನ್ನು ಅವರು ಅದರಲ್ಲೇ ಅಂತರ್ಗತ ಮಾಡುತ್ತಿದ್ದರು. ಇತ್ತೀಚಿನ ಕಾಲದವರೆಗೆ ಈ ವಿಶಾಲಾರ್ಥದಲ್ಲಿಯೇ ತತ್ತ್ವಶಾಸ್ತ್ರವೇ (ಫಿಲಾಸೊಫಿ) ಎಂಬ ಪದ ಪ್ರಯುಕ್ತವಾಗುತ್ತಿತ್ತು. ಪ್ರಾಕೃತಿಕ, ನೈತಿಕ ಮಾನಸಿಕ ತತ್ತ್ವಶಾಸ್ತ್ರಗಳೆಂದು ಇದರ ಮೂರು ಬಗೆಗಳನ್ನು ಕೂಡ ಹೇಳಲಾಗುತ್ತಿತ್ತು. ಎಷ್ಟೋ ಶಾಸ್ತ್ರಗಳು ಸ್ವತಂತ್ರ ವಿಕಾಸವನ್ನು ಅರಿಸ್ಟಾಟಲನ ಕಾಲದಿಂದಲೇ ಪಡೆಯತೊಡಗಿದ್ದರು. ಆದರೆ ಕ್ರಮಕ್ರಮವಾಗಿ ವಿವರಗಳ ವಿವೇಚನೆಗೆ ಶಾಸ್ತ್ರವೆನ್ನುವುದೂ ಸಾಮಾನ್ಯ ಚಿಂತನೆಯನ್ನು ತತ್ತ್ವಶಾಸ್ತ್ರವೆನ್ನುವುದೂ ಬಳಕೆಗೆ ಬಂತು. ಭೌತಿಕ ವಿಶ್ವದ ಮೂಲಕಾರಣ ಅಥವಾ ಆಶ್ರಯವೇನೆಂಬುದೇ ತತ್ತ್ವಶಾಸ್ತ್ರದ ಮುಖ್ಯವಿಷಯ ಎನಿಸತೊಡಗಿತು. ಆದ್ದರಿಂದ ಮೂಲತತ್ತ್ವಚಿಂತನೆಯೇ ಇದರ ಮುಖ್ಯ ಕಾರ್ಯ. ಪಠ್ಯಗ್ರಂಥಗಳಲ್ಲಿ ವೋಲ್ಫ್‍ನ ಕಾಲದಿಂದ ಮಾನ್ಯವಾಗಿರುವ ಇದರ ವಿಭಾಗಗಳು ಕೆಳಗಿಂತಿವೆ. ಸತ್ತಾ ವಿಚಾರ (ಅಂಟಾಲೊಜಿ) ಇದರ ಮುಖ್ಯ ಶಾಖೆಗಳೆಂದರೆ ಮನಶ್ಶಾಸ್ತ್ರ, ಸೃಷ್ಟಿಪ್ರಕ್ರಿಯೆ ಮತ್ತು ವೈಚಾರಿಕ ದೇವತಾಶಾಸ್ತ್ರ ಅಥವಾ ಜೀವ, ಜಗತ್ತು, ಈಶ್ವರರ ತತ್ತ್ವವಿವೇಚನೆ-ಹೀಗೆ ಮೂಲತತ್ತ್ವಚಿಂತನೆಗೆ ಮೀಸಲಾಗಿರುವ ತತ್ತ್ವಶಾಸ್ತ್ರಕ್ಕೆ ಅಂಗವಾಗಿ ತರ್ಕ ಮತ್ತು ನೀತಿಶಾಸ್ತ್ರ ಹಾಗೂ ಸೌಂದರ್ಯ ಶಾಸ್ತ್ರಗಳು ಬರುತ್ತವೆ; ಇವು ಮೂರು ಧ್ಯೇಯ ಪ್ರತಿಪಾದಕ ಶಾಸ್ತ್ರಗಳೇ ಹೊರತು ವಸ್ತುಸ್ಥಿತಿ ನಿರೂಪಕ ಶಾಸ್ತ್ರಗಳಲ್ಲ. ಆದ್ದರಿಂದ ಇಂದಿನ ತತ್ತ್ವಶಾಸ್ತ್ರದ ಸ್ವರೂಪ ಜ್ಞಾನವಾಗುವಂತೆ ಅದರ ಸಾಮಾನ್ಯವಿವೇಚನೆಗೂ ಮಿಕ್ಕ ಶಾಸ್ತ್ರಗಳಿಗೂ ಇರುವ ವೈಲಕ್ಷಣ್ಯವನ್ನೀಗ ನಿರ್ದೇಶಿಸಲಾಗುತ್ತಿದೆ; ಪ್ರತಿಯೊಂದಕ್ಕೂ ಅಡಿಯಲಿ ತತ್ತ್ವಶಾಸ್ತ್ರೀಯ ಪ್ರಮೇಯವಿದ್ದೇ ಇರುವ ಸಂಗತಿ ಆಗ ಗೋಚರವಾಗುತ್ತದೆ.

	ತತ್ತ್ವಶಾಸ್ತ್ರ ಮತ್ತು ಪ್ರಾಕೃತಿಕ ಶಾಸ್ತ್ರ: ತತ್ತ್ವಶಾಸ್ತ್ರ ನಿಜವಾಗಿ ಭೌತಶಾಸ್ತ್ರಗಳಿಗೆ ಅತೀತವಾದ ಚಿಂತನೆಯಲ್ಲಿ ಅದರ ಹೆಸರು ಸೂಚಿಸುವಂತೆ ವಸ್ತುತಃ ಅದು ಎಲ್ಲ ಭೌತಶಾಸ್ತ್ರಗಳ ಮೂಲಪ್ರಮೇಯಗಳನ್ನೂ ವಿವೇಚಿಸುವ ಶಾಸ್ತ್ರವೇ ಆಗಿದೆ. ಈಗ ಮನಶ್ಶಾಸ್ತ್ರವನ್ನೂ ವಾಸ್ತವಿಕ ಶಾಸ್ತ್ರವರ್ಗದಲ್ಲಿ ಸೇರಿಸುವ ಪರಿಪಾಠ ಬಂದಿರುವುದೇ ಅದಕ್ಕೆ ಸಾಕ್ಷಿಯೆನ್ನಬಹುದು. ಈ ವಾಸ್ತವ ಜಗತ್ತಿನ ಸ್ವರೂಪ. ನಮ್ಮ ಜೀವನದಲ್ಲಿ ತೋರಿಬರುವ ಜಗತ್ತಿನ ವಿವೇಚನೆ. ಇದನ್ನು ಬಿಟ್ಟು ತತ್ತ್ವಶಾಸ್ತ್ರಕ್ಕೆ ಬೇರೆ ಸಾಮಗ್ರಿಯೇ ಇಲ್ಲ. ಇದರ ಒಂದೊಂದು ಪ್ರತ್ಯೇಕ ಅಂಶವನ್ನೂ ಒಂದೊಂದು ಸ್ವತಂತ್ರಶಾಸ್ತ್ರಕ್ಕೆ ವಿಷಯವೆಂದು ಹಂಚಿಕೊಟ್ಟಮೇಲೆ ತತ್ತ್ವಶಾಸ್ತ್ರಕ್ಕೆ ಉಳಿಯುದೇನೆಂದು ಕೇಳಬಹುದು. ತತ್ತ್ವಶಾಸ್ತ್ರ ಸರ್ವಗ್ರಾಹಿಯಾದ ಇಡಿಯ ತತ್ತ್ವವಿವೇಚನೆಯೆಂದು ಹೇಳಿಕೊಳ್ಳುತ್ತಿದ್ದರೂ ಎಲ್ಲ ಬಿಡಿ ವಿಜ್ಞಾನಿಗಳ ಸಮುಚ್ಚಯಕ್ಕಿಂತ ಹೆಚ್ಚಿನದೇನಿದ್ದೀತೆನ್ನಬಹುದು. ಆದರೆ ನಿಜವಾಗಿ ಈ ಆಕ್ಷೇಪಣೆ ಸಲ್ಲದು. ಎಲ್ಲ ಬಿಡಿಗಳಿಗೂ ಯೋಗ್ಯ ಸಮನ್ವಯ ಮಾಡುವ ಒಂದು ಶಾಸ್ತ್ರ ಉಂಟೆಂದು ಒಪ್ಪಲೇಬೇಕಾಗುತ್ತದೆ. ಪ್ರತ್ಯೇಕ ಬಿಡಿ ವಿe್ಞÁನಗಳ ಸಮುಚ್ಚಯವೇ ಇಡಿಯ ಜ್ಞಾನವೆನಿಸಲಾರದು. ಪ್ರತ್ಯೇಕ ಶಾಸ್ತ್ರ್ರಗಳು ವಿವೇಚಿಸುವ ಮೂಲವಸ್ತುಗಳೆಲ್ಲ ನಿಜವಾಗಿ ಒಂದು ಇಡಿಯೇ ಎಂಬುದನ್ನು ಎತ್ತಿ ತೋರಿಸಬೇಕಾಗುತ್ತದೆ. ಹೀಗೆ ಮಿಕ್ಕ ಪ್ರಾಕೃತಿಕ ಶಾಸ್ತ್ರಗಳಿಗೂ ತತ್ತ್ವಶಾಸ್ತ್ರಕ್ಕೂ ಪರಸ್ಪರ ಸಹಕಾರದ ಅಗತ್ಯ ಬೀಳುತ್ತದೆ. ಶಾಸ್ತ್ರಗಳ ತತ್ತ್ವಶಾಸ್ತ್ರಕ್ಕೆ ವಿಷಯ ಸಾಮಗ್ರಿಯನ್ನೊದಗಿಸಿದರೆ, ತತ್ತ್ವಶಾಸ್ತ್ರ ಈ ಸಾಮಗ್ರಿಯನ್ನು ವಿವೇಚಿಸಿ ತನ್ಮೂಲಕ ಅದರ ಪೂರ್ಣe್ಞÁನಕ್ಕೆ ಪೋಷಕವಾಗುತ್ತದೆ. ಬಿಡಿಗಳಿಗೂ ಇಡಿಗೂ ಇರುವ ಸಂಬಂಧe್ಞÁನವೂ ಉಂಟಾದ ಮೇಲೆ ಮಾತ್ರ ಬಿಡಿಗಳ e್ಞÁನಪೂರ್ಣವೆನಿಸೀತು. ಪ್ರತಿಯೊಬ್ಬ ಸ್ವತಂತ್ರ ಶಾಸ್ತ್ರಸಂಶೋಧಕನೂ ತನ್ನ ಸಂಕುಚಿತ ಸೀಮೆಯಲ್ಲಿ ಮಾತ್ರ ವಿಶೇಷಜ್ಞತೆಯನ್ನು ಫಲ ಇತರ ವಿವರಗಳ ವಿಶೇಷಜ್ಞರಿಗೂ ಆಗಬೇಕಾದ ಅವಶ್ಯಕತೆಯಿದೆ. ಹಾಗಾಗಲು ಎಲ್ಲ ವಿಶೇಷ e್ಞÁನಗಳನ್ನೂ ಒಂದು ಸಾಮಾನ್ಯ ತತ್ತ್ವದಲ್ಲಿ ಸಮನ್ವಯಮಾಡುವ ತತ್ತ್ವಶಾಸ್ತ್ರ ಮಾತ್ರ ಸಹಾಯ ಮಾಡೀತು. ಈ ವಿಶ್ವದಲ್ಲಿ ಮೊದಲ ನೋಟಕ್ಕೆ ಸಂಗತವೆನಿಸುವಂಥ ಅನೇಕ ಬಿಡಿ ಸಾಮಗ್ರಿಗಳಿದ್ದರೂ ಮೂಲಭೂತವಾಗಿ ವಿಚಾರ ಮಾಡಿದಾಗ ಇವೆಲ್ಲ ಒಂದೇ ಇಡಿಯಾ ಸುಸಂಗತ ಪೂರ್ಣತತ್ತ್ವದ ಅವಿಷ್ಕಾರ ಪ್ರಕಾರಗಳೆಂದು ಸ್ವಚ್ಛವಾಗಿ ಸಾಧಿಸುವುದೇ ತತ್ತ್ವಶಾಸ್ತ್ರದ ಹೆಗ್ಗುರಿ, ಅದ್ದರಿಂದಲೇ ತತ್ತ್ವಶಾಸ್ತ್ರಕಾರ ಎಂದೂ ಪ್ರತ್ಯೇಕ ಬಿಡಿ e್ಞÁನಗಳನ್ನು ಅವುಗಳ ಮೂಲಭೂತ ತತ್ತ್ವಸಂಬಂಧದಿಂದ ಬೇರ್ಪಡಿಸಿಕೊಂಡು ವಿವೇಚಿಸಲು ಒಪ್ಪುವುದಿಲ್ಲ. ಹೀಗೆ ವಿe್ಞÁನಗಳ ವಿಶೇಷಜ್ಞರು ಅಭಿವ್ಯಕ್ತ ಮಾಡುವ ವೈಚಾರಿಕ ತತ್ತ್ವಗಳನ್ನೆಲ್ಲ ತನ್ನದೇ ಅದ ರೀತಿಯಲ್ಲಿ ತತ್ತ್ವಶಾಸ್ತ್ರ ಸಮನ್ವಯಗೊಳಿಸಿ ಅವಕ್ಕೆಲ್ಲ ಪೂರಕವೆನಿಸುತ್ತದೆ.
ಇಷ್ಟರ ಮೇಲಿಂದಲೇ ನಾವು ಸಾಮಾನ್ಯವಾಗಿ ಸತ್ಯ ಸಂಗತಿಗಳೆನ್ನುವವೆಲ್ಲ ತಾತ್ತ್ವಿಕ ಸತ್ಯವಿಲ್ಲವೆಂಬುದು ವೇದ್ಯವಾಗುತ್ತದೆ. ಈ ಜಗತ್ತು ನಾವು ಸ್ವತಂತ್ರವಾಗಿ ಅರಿಯಲು ಶಕ್ತವಿರುವಂಥ ಅನೇಕ ಸತ್ಯಗಳ ಸಮುಚ್ಚಯವಲ್ಲ. ಒಂದು ಸಂಗತಿ ಸತ್ಯವಾಗಲು ಇನ್ನೊಂದು ಸಂಗತಿಯೊಡನೆ ಅದರ ಸಂಬಂಧವೇನೆಂಬುದೇ ಮುಖ್ಯ ಕಾರಣ. e್ಞÁನವಿಕಾಸದಲ್ಲಿ ಈ ಸಂಬಂಧಗಳು ಅನೇಕವಾಗುವ ಸಾಧ್ಯತೆ ಇರುವುದರಿಂದ ನಮ್ಮ ತಥಾ-ಕಥಿತ ಸತ್ಯಸಂಗತಿ ಅನಿರ್ದಿಷ್ಟವಾಗಿ ಮಾರ್ಪಡುತ್ತದೆ. ಅಲ್ಲದೆ ಒಂದು ಸತ್ಯಸಂಗತಿಯ ನಿರ್ವಚನದಲ್ಲೇ ಕೆಲವೊಂದು ಸಾಮಾನ್ಯ ತತ್ತ್ವಗಳು ಹಾಗೂ ಸಿದ್ಧಾಂತಗಳು ಸೇರಿಸಿಕೊಂಡೇ ಇರುತ್ತವೆ; ಆದ್ದರಿಂದ ಪ್ರತ್ಯೇಕ ಶಾಸ್ತ್ರಗಳ ಸತ್ಯಸಂಗತಿ ಅಥವಾ ಪ್ರಮೇಯಗಳನ್ನು ನಾವೆಂದೂ ಅವುಗಳ ಆಳದಲ್ಲಿರುವ ಕಲ್ಪನೆಗಳ ಅಥವಾ ತಾತ್ತ್ವಿಕ ವಿಚಾರಗಳ ಮೂಲಕವಲ್ಲದೆ ಬೇರೆ ರೀತಿಯಿಂದ ಹೇಳಲಾರೆವು. ಉದಾಹರಣೆಗೆ, ಗಣಿತಶಾಸ್ತ್ರದಲ್ಲಿ ಆಕಾಶ ಒಂದು ನಿತ್ಯಪದಾರ್ಥವೆಂಬ ಪ್ರಮೇಯವಿದೆ. ಈ ಮೂಲತತ್ತ್ವದ (ಕಾಂಟ್ ಹೇಳುವ ಉನ್‍ಡಿಂಗ್) ಅಸ್ತಿತ್ವ ಅಥವಾ ನಿತ್ಯತೆಯ ಅರ್ಥವೇನೆಂದು ಆ ಶಾಸ್ತ್ರ ವಿವೇಚಿಸುವುದಿಲ್ಲ. ಹಾಗೆಯೇ ಭೌತಶಾಸ್ತ್ರ ಭೂತಪರಮಾಣುಗಳನ್ನೂ ಶಕ್ತಿಗಳನ್ನೂ ಗೃಹೀತ ಹಿಡಿಯುತ್ತದೆ; ಅಂಥ ಗೃಹೀತ ಹಿಡಿದ ಪ್ರಮೇಯಗಳನ್ನೆಲ್ಲ ವಿಮರ್ಶಾತ್ಮಕ ವಿಶ್ಲೇಷಣೆಗೆ ಗುರಿಮಾಡಿ, ಅವು ಎಷ್ಟಮಟ್ಟಿಗೆ ಪ್ರಮಾಣವೆಂದೂ ಪರಸ್ಪರ ವಿರೋಧಾದಿ ದೋಷಗಳಿಂದ ವಿಮುಕ್ತವೆಂದೂ ನಿರ್ಣಯಿಸುವುದೇ ಪ್ರಮಾಣಶಾಸ್ತ್ರವಾದ ತತ್ತ್ವಶಾಸ್ತ್ರದ ಕೆಲಸ. ಅಗತ್ಯ ಬಿದ್ದರೆ ಆ ಪ್ರಮೇಯಗಳನ್ನು ಯಾವ ರೀತಿ ಮಾರ್ಪಡಿಸಿದರ ಮೂಲ ತತ್ತ್ವದೊಡನೆ ಸಾಂಗತ್ಯವುಂಟಾಗುವುದೆಂದು ತೋರಿಸಿವುದೂ ಅದರ ಪಾಲಿಗೇ ಬರುತ್ತದೆ. ಮೊದಲು ಹೇಳಿದ ಒಂದು ನಿರ್ವಚನ ಕೇವಲ ತಾತ್ಕಾಲಿಕವಾಗಿ ಸತ್ಯವಿದ್ದು ಇನ್ನೂ ಪರಿಷ್ಕøತವಾದ ನಿರ್ವಚನದಲ್ಲಿ ಪರ್ಯವಸಾನಗೊಳ್ಳಬಹುದು. ಇಂಥ ಸಂದರ್ಭಗಳಲ್ಲಿ ಅವೇ ಸನ್ನಿವೇಶಗಳೇ ಬೇರೆಯಾಗಿ ಕಾಣತೊಡಗುತ್ತವೆ. ವಿe್ಞÁತ ವಿಶ್ವ ಸತ್ಯಾಂತರಗಳನ್ನೂ ಬೇರ್ಪಡಿಸದೆ ಇದರೊಡನೆ ಗಣನೆಗೆ ತೆಗೆದುಕೊಂಡಾಗ, ವಿಶ್ವತತ್ತ್ವಕ್ಕೆ ಸಮರಸವಾಗುವಂತೆ ಪ್ರತ್ಯೇಕ ಸತ್ಯಗಳ ವಿವೇಚನೆ ನಡೆದಲ್ಲದೆ ಯಾವ ಪ್ರಮೇಯವೂ ಸತ್ಯವಲ್ಲವೆಂಬ ಈ ಸಿದ್ಧಾಂತಕ್ಕೆ ಸ್ವಿನೋಜû, ಸಬ್ ಸ್ಪೀಶೀ ಇಟರ್ನಿಟಾಟಿಸ್ ಎನ್ನುತ್ತಾರೆ. ನಿಜವಾಗಿರುವ ಪೂರ್ಣತತ್ತ್ವ ಒಂದೇ, ಪೂರ್ಣದ ವಿವೇಚನಾ ಶಾಸ್ತ್ರವಾದ ತತ್ತ್ವಶಾಸ್ತ್ರ ಅದರ ಬಹು ರೂಪಾಕೃತಿಯ ನಿಮಿತ್ತಗಳಾದ ಮುಖ್ಯ ಸಂಬಂಧಗಳನ್ನೆಲ್ಲ ವಿವರಿಸಬೇಕಾಗುತ್ತದೆ.

ತತ್ತ್ವಶಾಸ್ತ್ರ ಪರಿಹರಿಸಬೇಕಾದ ಮಿಥ್ಯಾಭಾವನೆಗಳಲ್ಲಿ ಇನ್ನೊಂದೆಂದರೆ ಮನಶ್ಶಾಸ್ತ್ರವೂ ಸೇರಿ ಸಕಲ ಶಾಸ್ತ್ರಗಳೂ ಜ್ಞೇಯವಸ್ತುವನ್ನು e್ಞÁನೃವಿನ ಸಂಬಂಧದಿಂದ ಬೇರ್ಪಡಿಸಿ ವಿವರಿಸುವುದೇ ಆಗಿದೆ. ಜ್ಞೇಯಗಳನ್ನು ಮಾತ್ರ ಶಾಸ್ತ್ರಗಳು ವಿವೇಚಿಸುತ್ತವೆ; ಅದರೆ ಜ್ಞೇಯಗಳೆಲ್ಲ e್ಞÁತೃವಿಗೆ ಮಾತ್ರ ಸಂಬಂಧಪಟ್ಟಿವೆಯೆಂಬುದು ಪರಮಾರ್ಥ. e್ಞÁತೃ-ಜ್ಞೇಯ, e್ಞÁನ ಅಥವಾ ಸ್ವe್ಞÁನಭಾವನೆ-ಈ ದ್ವೈತವಲ್ಲವಾಗಿರುವ ಅದ್ವೈತವೇ ತತ್ತ್ವದ ನಿಜರೂಪ. ಆದ್ದರಿಂದ ವಿಶಿಷ್ಟಾರ್ಥದಲ್ಲಿ ಇದನ್ನು ಮಾತ್ರ ತತ್ತ್ವಶಾಸ್ತ್ರದ ಸಮಸ್ಯೆಯೆಂದು ಸಾಮಾನ್ಯವಾಗಿ ಹೇಳುವುದುಂಟು. ಈ ಸಂಬಂಧಗಳ ಕೂಲಂಕಷ ವಿಮರ್ಶೆ ಮತ್ತು ಅವುಗಳ ಸಾಧ್ಯತೆಯ ವಿಚಾರಣೆ ತತ್ತ್ವಶಾಸ್ತ್ರದ ಕೆಲಸವಾಗುತ್ತದೆ ಕಾಂಟನ ವಿಚಾರಸರಣೆಯಲ್ಲಿ. 

ಮನಃಶ್ಶಾಸ್ತ್ರ, ಪ್ರಮಾಣ ಶಾಸ್ತ್ರ ಮತ್ತು ಸತ್ತಾಶಾಸ್ತ್ರ ತತ್ತ್ವಶಾಸ್ತ್ರದ ಶಾಖೆಗಳಲ್ಲಿ ಮೂರು ಮುಖ್ಯವಾದುವು. ಮನಃಶ್ಶಾಸ್ತ್ರಕ್ಕೂ ತತ್ತ್ವಶಾಸ್ತ್ರಕ್ಕೂ ಎಂದಿನಿಂದಲೂ ನಿಕಟವಾದ ಸಂಬಂಧ ಕಾಣುತ್ತದೆ. ವಿಶೇಷತಃ ಅಧುನಿಕ ಚಿಂತನೆಯಲ್ಲಿ. ಈ ಸಂಬಂಧವನ್ನೂ ವಿವರಿಸುವುದು ಸುಲಭ. ಮನಸ್ಸು, ಬುದ್ಧಿ ಮತ್ತು ನೈತಿಕ ಕ್ರಿಯೆಗಳ ಶಾಸ್ತ್ರವೇ ಮನಃಶ್ಶಾಸ್ತ್ರ, ಈ ವಿಚಾರಗಳಿಗೆ ಮಿಕ್ಕೆಲ್ಲ ವಿಚಾರಗಳೊಡನೆ ಸಂಬಂಧಸಾಪೇಕ್ಷವೇ ಇರುವುದು ಸಹಜ. ಪ್ರಕೃತಿ ದೇವರನ್ನು ಮರೆಮಾಡುತ್ತದೆ. ಮನುಷ್ಯ ದೇವರನ್ನು ತೆರೆದು ತೋರುತ್ತಾನೆ ಎಂಬುದು ಯಾಕೊಬಿಯ ವಚನ ಈ ಅರ್ಥದಲ್ಲಿ ಸಮರ್ಥನೀಯ, ಬರಿಯ ಪ್ರಕೃತಿ ಸಾಲದು. e್ಞÁತೃ ಚೈತನ್ಯವನ್ನು ಪೃಥಕ್ಕರಿಸಿದ ಯಾವುದೇ ಪ್ರಾಕೃತಿಕ ವಿವೇಚನೆಯೂ ಸಂಗತಿಗಳ ಪೂರ್ಣ ಸತ್ಯವನ್ನು ಪ್ರಕಟಿಸಲಾರದೆಂದು ತಾತ್ಪರ್ಯ. ಆದರೆ e್ಞÁನ ಅಥವಾ ಚೈತ್ಯವೃತ್ತಿಗಳಿಗಿರುವ ಮನಸ್ಸನ್ನು ಎರಡು ಭಿನ್ನ ದಿಕ್ಕುಗಳಿಂದ ವಿವೇಚಿಸಲು ಸಾಧ್ಯವಿದೆ. ಅದೂ ಒಂದು ವಿಷಯ, ಮಿಕ್ಕ ಪ್ರಾಕೃತಿಕ ವಿಷಯಗಳಂತೆ-ಎಂದು ಹಿಡಿದು ವಿವೇಚನೆ ಮಾಡಲಾವಕಾಶವಿದೆ, ಹಾಗೆ ಮಾಡಿದ್ದಾದರೆ ಅದು ಪ್ರಾಕೃತಿಕ ಅಥವಾ ಭೌತಿಕ ಮನಃಶ್ಶಾಸ್ತ್ರವೆನಿಸುತ್ತದೆ. ತನ್ನ ವಿಷಯ ಪ್ರತಿಪಾದನೆಗೆ ಈ ಶಾಸ್ತ್ರ ಯಾಂತ್ರಿಕ ವಿಧಾನಗಳನ್ನು ಮೀರಿದ ಕೆಲವೊಂದು ವಿಧಾನಗಳನ್ನು ಅನುಸರಿಸಿದರೂ ಜೀವಶಾಸ್ತ್ರದಲ್ಲಿ ವಿಕಾಸವಾದವನ್ನು ಅನುಸರಿಸುವಂತೆ - ಇದರ ಬಾಂಧವ್ಯ ತತ್ತ್ವಶಾಸ್ತ್ರಕ್ಕಿಂತ ಭೌತಶಾಸ್ತ್ರಗಳಿಗೇ ಹೆಚ್ಚಾಗಿರುತ್ತದೆ. ಏಕೆಂದರೆ ಇಲ್ಲಿ ಮನಸ್ಸೂ ಒಂದು ವಿವೇಚನೀಯ ವಸ್ತು; ಅದರ ನಾನಾ ಚೈತನ್ಯವೃತ್ತಿಗಳನ್ನು ವೈe್ಞÁನಿಕ ಪ್ರಯೋಗಗಳಿಂದ ಸಿದ್ಧಾಂತ ಮಾಡುವ ಯತ್ನವಿರುವುದರಿಂದ ಅದು ತತ್ತ್ವóಶಾಸ್ತ್ರ ವಿವೇಚಿಸುವ ಚೈತನ್ಯದ ಮೂಲವಿಚಾರಗಳಿಗಿಂತ ಭಿನ್ನ ವಿಷಯದ್ದೂ ಭಿನ್ನರೂಪದ್ದೂ ಅಗಿರುತ್ತದೆ. ಕ್ರೂಮ್ ರಾಬರ್ಟ್‍ಸನ್ ಹೇಳುವಂತೆ ಮನಶ್ಶಾಸ್ತ್ರ ವಿವಿಧ ಚೈತನ್ಯವೃತ್ತಿಗಳ ಸ್ವರೂಪ ಕ್ರಿಯಾದಿಗಳನ್ನು ಕುರಿತಿದ್ದರೆ, e್ಞÁನದೃಷ್ಟಿಯಿಂದ e್ಞÁನವಿವೇಚನೆ ಮಾತ್ರ ತತ್ತ್ವಶಾಸ್ತ್ರವೆನಿಸುತ್ತದೆ.

ಈ ದೃಷ್ಟಿಬೇಧವನ್ನು ಮರೆಯುವರೇ ಹೆಚ್ಚು. ಹ್ಯೂಮ್‍ನಿಂದ ಹಿಡಿದು ಇಂಗ್ಲೀಷ್ ತತ್ತ್ವಶಾಸ್ತ್ರಕಾರರು ವಾಸ್ತವಿಕವಾಗಿ ತತ್ವಶಾಸ್ತ್ರೀಯ ವಿಚಾರಗಳ ಸ್ಥಾನದಲ್ಲಿ ಮನಶ್ಶಾಸ್ತ್ರವನ್ನೇ ವಿವೇಚಿಸಿರುವುದು ಕಾಣಬರುತ್ತದೆ. ಡಬ್ಲ್ಯು. ಹ್ಯಾಮಿಲ್ಟನ್ನನಂಥ ವಿಶಾಲಮತಿಯೇ ಮನಶ್ಶಾಸ್ತ್ರವೇ ತತ್ತ್ವಶಾಸ್ತ್ರವೆನ್ನುತ್ತಾನೆ. ಈ ವಿಷಯ ವಿವೇಕವನ್ನು ಮೊದಲು ಸ್ಪಷ್ಟವಾಗಿ ಮಾಡಿದವನೆಂದರೆ ಕಾಂಟ್. ಇವನು ಶುದ್ಧ ಪ್ರಮಾಣಶಾಸ್ತ್ರವನ್ನು ಎಂದೂ ಮನಶ್ಶಾಸ್ತ್ರವೆಂದು ಭ್ರಮಿಸಲಾಗದೆಂದು ತನ್ನ ಗ್ರಂಥಗಳಲೆಲ್ಲ ಒತ್ತಿ ಹೇಳಿದ್ದಾನೆ. e್ಞÁನ ಪ್ರಮಾಣವೆನಿಸುವುದು ಹೇಗೆ? ಇದೇ ಅವನ ಮೂಲಭೂತ ತತ್ತ್ವ ಶಾಸ್ತ್ರೀಯ ಸಮಸ್ಯೆ, e್ಞÁನದ ಉತ್ಪತ್ತಿ ಪ್ರಕಾರಗಳಾವುವು ಎನ್ನುವುದಲ್ಲ. ಕಾಂಟ್‍ನಿಂದ ಈಚೆಗೆ ತತ್ತ್ವಶಾಸ್ತ್ರವೆಂದರೆ ಪ್ರಮಾಣಶಾಸ್ತ್ರ ಅಥವಾ ಅನುಭವ ವಿವೇಚನಾಶಾಸ್ತ್ರವೆಂದೇ ತಿಳಿಯುವಂತೆ ಬೆಳೆದಿದೆ. ಸಮಗ್ರ ಹಾಗೂ ಪೂರ್ಣ ದೃಷ್ಟಿಯಿಂದ ನೋಡಿದಾಗ ಅನುಭವವೆಂದರೇನೆಂದು ವಿವೇಚಿಸುವುದೇ ತತ್ತ್ವಶಾಸ್ತ್ರದ ಕೆಲಸವಾಗುತ್ತದೆ. ವಸ್ತು e್ಞÁನದ ವಿಷಯಗಳು, ಅವುಗಳ ಸನ್ನಿವೇಶಗಳು, ನನಗೆ e್ಞÁನವಾಯಿತೆಂಬ ಆತ್ಮಪ್ರತ್ಯಯ-ಈ ಉಪಾಧಿಗಳನ್ನೆಲ್ಲ ಮೀರಿ ನಡೆಯುವ e್ಞÁನ ಅಥವಾ ಅನುಭವ ಸ್ವರೂಪ ವಿವೇಚನೆ ತತ್ತ್ವಶಾಸ್ತ್ರವೆಂದಾಗುತ್ತದೆ. ಈ ಲೋಕಾತೀತ ತತ್ತ್ವಪ್ರತ್ಯಯಗಳು e್ಞÁನದ ಕಾರಣಗಳೂ ಅಲ್ಲ; ಅಂಶಗಳೂ ಅಲ್ಲ; ಆದರೆ ಅವುಗಳ ಅಸ್ತಿತ್ವವನ್ನು ಗೃಹೀತ ಹಿಡಿಯದೆ ಮತ್ಯಾವವೂ ವಿಶ್ವದಲ್ಲಿ ಸಿದ್ಧಿಸಲಾರವು. ಆದ್ದರಿಂದ ಅವನ್ನು ತತ್ತ್ವಶಾಸ್ತ್ರಕಾರನ ಕಲ್ಪನಾಸತ್ಯವೆಂದು ಮಾತ್ರ ಹೇಳಬಹುದು. ಪ್ರಕೃತಿವಿಕಾಸವಾದಿಗೂ ಲೋಕಾತೀತ ಪ್ರತ್ಯಯವಾದಿಗೂ ಇಲ್ಲೆ ವಿರೋಧ ಬರುವುದು. ಒಂದು ತರ್ಕದೋಷದ ನಿಮಿತ್ತದಿಂದಲೇ. ಒಂದು ವಿಚಾರದ ವಿಕಾಸದ ಇತಿಹಾಸ ಅದರ ಪ್ರಾಮಾಣ್ಯವೆಂಬ ತಾತ್ವಿಕ ಸಮಸ್ಯೆಗೆ ಉತ್ತರ ಹೇಳಲಾರದು. ಈ ಲೋಕಾತೀತ ಚೈತನ್ಯದ ವಿಚಾರವಾಗಿ ಹೇಳುತ್ತಾ ಕಾಂಟ್ ಹೀಗೆ ಸ್ಪಷ್ಟಪಡಿಸಿದ್ದಾನೆ: ಅದರ ಕಲ್ಪನೆ ಸಾಮಾನ್ಯ ಬುದ್ಧಿಯಲ್ಲಿ ಸ್ಫುಟವಿರಲಿ, ಅದು ಪರಮಾರ್ಥತಃ ಸತ್ತೆಯನ್ನು ಹೊಂದಿರಲಿ, ಹೊಂದಿಲ್ಲದೇ ಇರಲಿ, ಯಾವುದೂ ಮುಖ್ಯವಲ್ಲ. ಆದರೆ ಸಕಲe್ಞÁನಗಳ ತರ್ಕಬದ್ಧ ಸ್ವರೂಪದ ವಿವರಣೆ ಅದನ್ನು ಒಂದು ಶಕ್ಯತೆಯೆಂದು ನಂಬುವುದರೊಡನೆ ಸಂಬಂಧಿಸಿಯೇ ಇರುತ್ತದೆ.

ಇದೇ ಸಮಸ್ಯೆಯನ್ನು ಲಾಕ್ ಶಬ್ಧಾಂತರಗಳಲ್ಲಿ ಹೇಳಿದ್ದಾನೆ; ಮಾನವ e್ಞÁನದ ಉಗಮ, ನಿಶ್ಚಯ ಸ್ವರೂಪ ಮತ್ತು ವ್ಯಾಪ್ತಿಗಳನ್ನು ನಂಬಿಕೆ ಭಾವನೆ, ಸಮ್ಮತಿಗಳ ಮೂಲ ಆಧಾರಗಳ ಸಮೇತ ಪರೀಕ್ಷಿಸುವುದೇ ತತ್ತ್ವಶಾಸ್ತ್ರ ಎಂದು. ಹೀಗೆ ಅವನ ವಿವಕ್ಷೆ ಪ್ರಮಾಣಶಾಸ್ತ್ರವೇ ಆದರೂ ಅವನು ತನ್ನ ಪ್ರತಿಪಾದನೆಯಲ್ಲಿ ಇದೊಂದನ್ನೇ ಮಾಡಲಾರದೆ ಹೋದ. ಅವನ ದ್ವಿತೀಯ ಗ್ರಂಥಭಾಗವೆಲ್ಲ ನಮ್ಮ ಭಾವನೆಗಳ ಮನಶ್ಶಾಸ್ತ್ರೀಯ ಆಧಾರಗಳ ವಿವೇಚನೆಯಲ್ಲೇ ನಿರತವಾಗುತ್ತದೆ. ಅವನ ಪ್ರಮಾಣ ನಿರೂಪಣೆ ಕೂಡ ಭಾವನೆ (ಐಡಿಯ) ಎಂದರೆ ಸಾರ್ಥಕ ವಿಚಾರವೆಂಬ ಪ್ರಮಾಣಶ್ಶಾಸ್ತ್ರೀಯ ಅರ್ಥಕ್ಕೂ ಒಬ್ಬ ವ್ಯಕ್ತಿಯ ಚಿಂತನವ್ಯಾಪಾರ ಪ್ರಕಾರವೆಂಬ ಮನಶ್ಶಾಸ್ತ್ರೀಯ ಅರ್ಥಕ್ಕೂ ವ್ಯತ್ಯಾಸಮಾಡಲಾರದೆ, ದೋಷಯುಕ್ತವಾಗಿದೆ. ಇದೇ ದೋಷ ಬಾಕ್ರ್ಲೀ ಮತ್ತು ಹ್ಯೂಮರ ಲೇಖನಗಳಲ್ಲಿಯೂ ಬಂದಿದೆ. ಹೀಗೆ ಆರಂಭದಲ್ಲಿ ಪ್ರತ್ಯಕ್ಷ ಪರೀಕ್ಷೆಯ ಸ್ವರೂಪದಲ್ಲೇ ಇದ್ದರೂ ಕ್ರಮಕ್ರಮವಾಗಿ ಕಾಂಟನಲ್ಲಿ ಅನುಭವ ಸಾಮಾನ್ಯದ ಶಕ್ಯತಾಸಮಸ್ಯೆಯಾಗಿ ಪ್ರಮಾಣಶಾಸ್ತ್ರ ವಿಕಾಸಗೊಳ್ಳುತ್ತದೆ. ಹೆಗಲ್‍ನ ಕಾಲಕ್ಕೆ ಅದು ಪರಿಪೂರ್ಣ ನ್ಯಾಯಶಾಸ್ತ್ರವಾಗಿ ತತ್ತ್ವದ ಪರಮಾರ್ಥ ಸ್ವರೂಪವನ್ನೂ ವಿವೇಚಿಸುವ ಸತ್ತಾಶಾಸ್ತ್ರವಾಗಿ ಪರಿಣಮಿಸುತ್ತದೆ.

ಪ್ರಮಾಣಶಾಸ್ತ್ರಕ್ಕೂ ಪರಮಾರ್ಥಶಾಸ್ತ್ರಕ್ಕೂ ಇರುವ ಸಂಬಂಧದ ವಿಚಾರವನ್ನೀಗ ನೋಡೋಣ. ಅನುಭವದ ಜ್ಞಾನ-ಸ್ವರೂಪ ವಿಚಾರ ಪ್ರಮಾಣಶಾಸ್ತ್ರವಾದರೆ ಅದರ ಅಸ್ತಿತ್ತ್ವ ಅಥವಾ ಸತ್ತಾವಿಚಾರವೇ (ಪರಮಾರ್ಥ) ಸತ್ತಾಶಾಸ್ತ್ರ ಎರಡೂ ಒಂದಕ್ಕೊಂದು ಪೂರಕವಾದ ಸತ್ತ್ವಶಾಸ್ತ್ರದ ಅಂಗಗಳಾಗಿವೆ. ನಮ್ಮ ಜ್ಞಾನ ಯಥಾರ್ಥವೇ ಎಂಬ ಪ್ರಶ್ನೆ ನಮ್ಮ ಜ್ಞಾನದ ಪರಮಾರ್ಥಸ್ವರೂಪವೇನು ಎಂಬ ಪ್ರಶ್ನೆಯೊಡನೆ ಸಮ್ಮಿಳತವಾಗಿವೆ. ಇವೆರಡೂ ಒಂದೇ ವಿವೇಚನೆಯ ಎರಡು ಪಾಶ್ರ್ವಗಳೆನ್ನಬಹುದು. ಚಿಂತನೆ ಮತ್ತು ಅಸ್ತಿತ್ತ್ವಗಳ ಅದ್ವೈತವನ್ನು ಸ್ಪಷ್ಟವಾಗಿ ಹೇಗಲ್‍ನಂತೆ ಹೇಳುವವರು ಕಡಿಮೆ. ಆದ್ದರಿಂದ ಹರಬರ್ಟ್ ಸ್ಪೆನ್ಸರನ ಅಜ್ಞೇಯವಾದ ಇತ್ಯಾದಿಗಳಲ್ಲಿ ಪ್ರಮಾಣ (ಜ್ಞಾನ) ಶಾಸ್ತ್ರ ಅಜ್ಞಾನಶಾಸ್ತ್ರದ ಸ್ವರೂಪವನ್ನು ತಾಳಿಬಿಡುತ್ತದೆ. ಇದೇ ಜನಪ್ರಿಯವಾದ ತತ್ತ್ವಶಾಸ್ತ್ರದ ಸ್ವರೂಪವನ್ನು ವ್ಯಾಖ್ಯೆಯೂ ಆಗುತ್ತದೆ. ಅನುಭವದ ವಿವೇಚನೆಯೇ ತತ್ತ್ವಶಾಸ್ತ್ರವೆನ್ನುವ ಜನರ ವರ್ಣನೆಯಲ್ಲಿ ಅದರ ಪರಮಾರ್ಥ ಸ್ವರೂಪದ ವಿವೇಚನೆ ಮರೆಯಾಗುತ್ತದೆ. ಯಥಾರ್ಥಜ್ಞಾನ ಮತ್ತು ಪರಮಾರ್ಥಸತ್ತೆಗಳ ವಿಷಯದಲ್ಲಿ ಮತಭೇದವೇ ತತ್ತ್ವಶಾಸ್ತ್ರದ ನಾನಾ ವಾದಗಳಿಗೆ ಮೂಲ. ಪರಮಾರ್ಥಸತ್ತಾ ವಿಚಾರವನ್ನೊಪ್ಪದೆ ಜಾತೃಗೋಚರ ಜ್ಞಾನವನ್ನಷ್ಟೇ ವಿವೇಚನಾ ವಿಷಯವೆನ್ನುವ ತತ್ತ್ವಶಾಸ್ತ್ರ ಶಾಖೆಗಳೂ ಉಂಟು-ಫಿನಾಮನಲಿಸಮ್ ಇತ್ಯಾದಿ.
ಆದರೆ ಯಥಾರ್ಥಜ್ಞಾನ ವಿವೇಚನೆಗೆ ಮೀಸಲಾದ ಪ್ರಮಾಣಶಾಸ್ತ್ರವೊಂದೇ ತತ್ತ್ವಶಾಸ್ತ್ರಕ್ಕೆ ಕೇಂದ್ರಿಭೂತವೆಂದು ಹೇಳುವುದು ಯೋಗ್ಯವಾದರೂ ಅದನ್ನು ಅತಿಯಾಗಿ ವಿಸ್ತರಿಸಬಾರದು, ಕಾಂಟ್ ಮುಂತಾದವರಂತೆ. ಕಾಂಟ್‍ನ ಅನುಯಾಯಿಗಳು ಅದನ್ನು ಎಷ್ಟು ವಿಸ್ತರಿಸದರೆಂದರೆ ಅವರ ಕಾರ್ಯವನ್ನು ಖಂಡಿಸಲು ಲಾಟ್ಸೆ ಹೀಗೆ ಹೇಳಬೇಕಾಯಿತು-ಕತ್ತರಿಸುವ ವಸ್ತುವೇ ಇಲ್ಲದಾಗ ಕತ್ತಿಯನ್ನು ನಾವು ಅತಿಯಾಗಿ ಸಾಣೆ ಹಿಡಿಯುತ್ತಲೇ ಹೋಗುವುದು ನಿರರ್ಥಕ. ಲಾಕ್, ಫಿಕ್ಟೆ-ಇವರೆಲ್ಲ ಯಥಾರ್ಥಜ್ಞಾನ, ಪರಮಾರ್ಥಸತ್ತೆ-ಇವು ವಿಭಿನ್ನವೆನ್ನುವವರು. ಏನೇ ತೀರ್ಮಾನವನ್ನು ಮೊದಲನೆಯದು ಹೇಳುವಾಗಲೂ ಎರಡನೆಯದಲ್ಲಿ ಪರ್ಯವಸಿತವಾಗುತ್ತದೆ. ಎರಡನೆಯದು ಮೊದಲನೆಯದಲ್ಲದೆ ಪ್ರವೃತ್ತವಾಗಲಾರದು. ಹೀಗೆ ತತ್ತ್ವಶಾಸ್ತ್ರದ ಕೇಂದ್ರದಲ್ಲಿ ಇವೆರಡೂ ಹಾಸುಹೊಕ್ಕಾಗಿ ಸೇರಿಕೊಂಡಿವೆಯೆನ್ನಬಹುದು.
ತರ್ಕ, ಸೌಂದರ್ಯಶಾಸ್ತ್ರ ಮತ್ತು ನೀತಿಶಾಸ್ತ್ರ : ಯಥಾರ್ಥಜ್ಞಾನ ವಿಚಾರ ಕಂಡೂ ಕಾಣದಂತೆ ಪರಮಾರ್ಥ ವಿಚಾರವಾಗಿಬಿಡುವದೆಂಬುದನ್ನು ನೋಡಿದೆವು. ಹಾಗಾದರೆ ತರ್ಕಕ್ಕೂ ಯಥಾರ್ಥ ಜ್ಞಾನವಿಚಾರವಾದ ಪ್ರಮಾಣಶಾಸ್ತ್ರಕ್ಕೂ ವ್ಯತ್ಯಾಸ ಹೇಳುವುದೇ ಕಷ್ಟವಾಗುತ್ತದೆ. ಯೂಬರ್ ವೆಗ್ ಕೊಡುವ ಸಾಂಪ್ರದಾಯಿಕ ತರ್ಕಶಾಸ್ತ್ರದ ಲಕ್ಷಣವಿದು : ಅದು ವಿಚಾರಗಳನ್ನು ನಿಯಂತ್ರಿಸುವ ನಿಯಮಗಳ ಶಾಸ್ತ್ರ. ನಿಯಂತ್ರಿಸುವ ಎಂಬ ವಿಶೇಷಣ ಮನಃಶ್ಶಾಸ್ತ್ರದಿಂದ ತರ್ಕಶಾಸ್ತ್ರವನ್ನು ಪ್ರತ್ಯೇಕಿಸುತ್ತದೆ. ಮನಃಶ್ಶಾಸ್ತ್ರ ಮನಃಪ್ರವೃತ್ತಿಗಳ ಸ್ವರೂಪ ವಿವೇಚನೆ ಮಾಡುವುದೇ ಹೊರತು ನಿಯಂತ್ರಕ ನಿಯಮಗಳನ್ನಲ್ಲ. ತರ್ಕವೂ ಪ್ರಮಾಣಶಾಸ್ತ್ರದಂತೆ ವಿಚಾರವನ್ನು ಜ್ಞಾನಸ್ವರೂಪವೆಂದು ವಿವೇಚಿಸುವುದೇ ಹೊರತು ಮನಃಪ್ರವೃತ್ತಿಯೆಂದು ಮನಃಶ್ಶಾಸ್ತ್ರದಂತೆ ವಿವೇಚಿಸುವುದಿಲ್ಲ. ಆದರೂ ಸಾಂಪ್ರದಾಯಿಕವಾಗಿ ತರ್ಕಶಾಸ್ತ್ರವನ್ನೂ ಪ್ರಮಾಣಶಾಸ್ತ್ರವನ್ನೂ ಬೇರೆಯಾಗಿ ಪರಿಗಣಿಸಲು ಮೂಲವನ್ನು ನಾವು ಹುಡುಕತೊಡಗಿದರೆ ಅದು ಮನೋವ್ಯಾಪಾರಗಳ ನಿಯಮಗಳ ವಿವೇಚನೆಯೆಂಬ ಒಂದೇ ಅಂಶದಲ್ಲಿ ಮಾತ್ರ ಸಿಕ್ಕಬಹುದಾಗಿದೆ. ಜ್ಞಾನದ ಸ್ವರೂಪ ವಿವೇಚನೆ ಪ್ರಮಾಣಶಾಸ್ತ್ರವಾದರೆ, ನಿಯಮ ವಿವೇಚನೆ ತರ್ಕಶಾಸ್ತ್ರ.

ಸೌಂದರ್ಯಶಾಸ್ತ್ರವನ್ನೂ ಮನಃಶ್ಶಾಸ್ತ್ರ ಅಥವಾ ಶರೀರಶಾಸ್ತ್ರಗಳ ಅಂಗವೆನ್ನುವವರೂ ಉಂಟು. ಇಂಗ್ಲೆಂಡಿನಲ್ಲಿ ಈ ಪ್ರವೃತ್ತಿಯೇ ಹೆಚ್ಚು. ಒಂದು ವಸ್ತುವನ್ನು ನಾವು ಸುಂದರವೆನ್ನುವಾಗ ನಮ್ಮಲ್ಲಿರುವ ಮನೋಭಾವಕ್ಕೆ ಕಾರಣೀಭೂತವಾದ ಶಾರೀರಿಕ ಸನ್ನಿವೇಶಗಳಾವುವು ಎಂಬ ಪ್ರಶ್ನೆಯನ್ನೆತ್ತಿ, ಆ ಮನೋಭಾವಗಳ ವೈಶಿಷ್ಟ್ಯವನ್ನು ವಿವರಿಸಲು ಚಿತ್ತವೃತ್ತಿಗಳನ್ನು ಮತ್ತಷ್ಟು ವಿಶ್ಲೇಷಿಸಿ, ಇಂದ್ರಿಯಜನ್ಯಸುಖಾದಿಗಳಿಗೂ ಅವುಗಳ ಔಚಿತ್ಯ, ಉಪಯೋಗಾದಿಗಳಿಗೂ ಇರುವ ಸಂಬಂಧದ ಬಗೆಗೆ ವಿವೇಚಿಸುವ ವಾಡಿಕೆಯಿದೆ. ಆದರೆ ಮನಃಶ್ಶಾಸ್ತ್ರವೇ ಪ್ರಮಾಣಶಾಸ್ತ್ರದ ಕೆಲಸವನ್ನು ಹೇಗೆ ಮಾಡಲಾರದೋ ಹಾಗೆಯೇ ಮನೋಭಾವಗಳನ್ನು ಚಿತ್ತದ ಮೂಲಪ್ರವೃತ್ತಿಗಳ ಯಾಂತ್ರಿಕ ಕ್ರಿಯೆಯೊಡನೆ ಸಮನ್ವಯ ಮಾಡಿದಷ್ಟರಿಂದ ಸೌಂದರ್ಯ ಸ್ವರೂಪವನ್ನೇನೂ ವಿವೇಚಿಸಿದಂತೆ ಆಗಲಾರದು. ಮನೋಭಾವವೆನ್ನುವುದು ಜಿಜ್ಞಾಸೆಗೆ ವೈಯಕ್ತಿಯ ಬಣ್ಣವನ್ನು ಕೊಡುತ್ತದೆ. ಅದನ್ನು ಸೌಂದರ್ಯದ ಪ್ರತ್ಯಕ್ಷಸಾಕ್ಷಾತ್ಕಾರವೆನ್ನಬೇಕು. ಸುಮ್ಮನೆ ಸುಖವೆನ್ನುವಾಗ ಅದರ ವಿಶಿಷ್ಟ ಲಕ್ಷಣವೇನೂ ಗೋಚರವಾಗದು. ಒಂದು ಸುಂದರ ವಸ್ತುವಿನ ಸಾಕ್ಷಾತ್ಕಾರಕಾಲದಲ್ಲಿ ಬರುವ ಸುಖಕ್ಕೆ ಒಂದು ವಿಶಿಷ್ಟ ಲಕ್ಷಣವಿರುತ್ತದೆ. ವಸ್ತುನಿಷ್ಠವಾದ ಕೆಲವೊಂದು ಗುಣಗಳು ಸೇರಿದಾಗ ಮಾತ್ರ ಅದು ಉತ್ಪನ್ನವಾಗುತ್ತದೆ. ಆದ್ದರಿಂದ ಸೌಂದರ್ಯವೆಂದರೆ ವಸ್ತುನಿಷ್ಠ ಸನ್ನಿವೇಶಗಳ ಧರ್ಮವೆನ್ನಲೂ ಅವಕಾಶವಿದೆ. ಆಗ ಸೌಂದರ್ಯಶಾಸ್ತ್ರದ ಪ್ರಶ್ನೆ ಈ ರೂಪಗಳನ್ನು ತಾಳಬಹುದು; ಸುಂದರವೆಂದೆನಿಸಲು ಸಾಧಕವಾಗಿ ವಸ್ತುಗಳಲ್ಲಿರುವ ಧರ್ಮ ಯಾವುದು? ವಿಶ್ವದ ಈ ತತ್ತ್ವಾಂಶಕ್ಕೂ ಪರಮಾರ್ಥ ತತ್ತ್ವಕ್ಕೂ ಇರುವ ಸಂಬಂಧವೇನು? ಈ ಪ್ರಶ್ನೆಗಳಿಗೆ ಉತ್ತರವನ್ನೊದಗಿಸುವುದೇ ತತ್ತ್ವಶಾಸ್ತ್ರದ ವಿಭಾಗವೆನಿಸುವ ಸೌಂದರ್ಯಶಾಸ್ತ್ರದ ಕಾರ್ಯವಾಗುತ್ತದೆ. ಕೇವಲ ಅಮೂರ್ತವಿಚಾರಗಳಲ್ಲೆ ಮಾತ್ರ ಈ ಶಾಸ್ತ್ರ ತೃಪ್ತವಾಗುವಂತಿಲ್ಲ. ಅದು ವಿಶ್ವದ ಇತಿಹಾಸದಲ್ಲೆ ಬಂದಿರುವ ನಾನಾ ಕಲಾಪ್ರಕಾರಗಳನ್ನೂ ಅಭ್ಯಸಿಸಿ ಅವನ್ನು ವಿಶ್ವಸಂಸ್ಕøತಿಯ ಸೌಂದರ್ಯಪ್ರಜ್ಞೆಯ ಬೇರೆ ಬೇರೆ ಅಂಶಗಳೊಡನೆ ಸಮನ್ವಯಗೊಳಿಸಬೇಕಾಗುತ್ತದೆ.

ನೀತಿಶಾಸ್ತ್ರದಲ್ಲಿ ಬರುವ ಅನೇಕ ವಿಷಯಗಳು ತತ್ತ್ವಶಾಸ್ತ್ರದ ಕಕ್ಷೆಯಲ್ಲಿ ಬರುವುದೇ ಇಲ್ಲ. ಅವೆಲ್ಲ ಹೆಚ್ಚಾಗಿ ವೈಜ್ಞಾನಿಕ ಮನಃಶ್ಶಾಸ್ತ್ರದ ವ್ಯಾಪ್ತಿಯಲ್ಲಿ ಅಥವಾ ಸಮಾಜಶಾಸ್ತ್ರದ ವ್ಯಾಪ್ತಿಯಲ್ಲಿ ಬರುವಂಥವು. ನೀತಿವಿಚಾರಗಳ ಉಗಮ ಮತ್ತು ವಿಕಾಸ ಮುಂತಾದ ವಿಚಾರಗಳೆಲ್ಲ ಆ ಶಾಸ್ತ್ರಾಂತರಗಳಲ್ಲಿಯೇ ಬರುವುವು. ನೀತಿತತ್ತ್ವದ ಸ್ವರೂಪವೇನು? ಪುರುಷನ ಸ್ವಾಂತಂತ್ರ್ಯಕ್ಕೂ ನೀತಿನಿಷ್ಠೆಗೂ ಸಂಬಂಧವೆಷ್ಟು-ಮುಂತಾಗಿ ಇಂಗ್ಲಿಷ್ ತತ್ತ್ವಜ್ಞಾನಿಗಳು ಚರ್ಚಿಸುವ ಪ್ರಶ್ನೆಗಳೂ ಹೀಗೆ ಶಾಸ್ತ್ರಾಂತರ ವಿಷಯಗಳೇ ಆಗುತ್ತವೆ. ಅವನ್ನೆಲ್ಲ ಕೈಬಿಟ್ಟು ತತ್ತ್ವಶಾಸ್ತ್ರದ ಅಂಗವೆನಿಸುವ ನೀತಿಶಾಸ್ತ್ರದ ಪ್ರಶ್ನೆಗಳೇನೆಂದು ವಿಚಾರಿಸಿದರೆ ಆಗ ಎರಡು ಅಂಶಗಳು ಎದ್ದುಕಾಣುತ್ತವೆ. ಒಂದು-ಕರ್ತವ್ಯಭಾವನೆ, ಎರಡು-ಕಾರ್ಯದ ಧ್ಯೇಯವಾದ. ಕಲ್ಯಾಣದ ಸ್ವರೂಪ ಮೊದಲನೆಯ ಅಂಶವಾದರೆ ಅದರಿಂದ ನಿರ್ಗಳಿತವಾಗುವ ವೈಯಕ್ತಿಕ ಕಾರ್ಯಗಳ ವಿವೇಚನೆ ಎರಡನೆಯ ಅಂಶವಾಗುತ್ತದೆ. ಆದರೆ ಎರಡನೆಯದರ ಜಿಜ್ಞಾಸೆಯನ್ನು ಕೈಬಿಟ್ಟು ಮೊದಲನೆಯದನ್ನು ಮಾತ್ರ ಬೆಳಸುವವರೇ ಹೆಚ್ಚು. ತತ್ತ್ವಚಿಂತಕರು ಮೊದಲನೆಯದರಲ್ಲಿ ಮತಭೇದ ಹೊಂದಿದ್ದರೂ ಎರಡನೆಯ ಅಂಶದಲ್ಲಿ ಮತೈಕ್ಯವನ್ನೇ ನಿದರ್ಶಿಸುತ್ತಾರೆ. ಏನೆಂದರೂ ಮೊದಲ ಅಂಶ ತತ್ತ್ವಶಾಸ್ತ್ರದ ಒಂದು ಅಂಗವೆಂಬುದು ನಿಸ್ಸಂಶಯ. ನಿಜವಾಗಿ ಅದನ್ನು ನೀತಿಯ ಪರಮಾರ್ಥ ತತ್ತ್ವಜಿಜ್ಞಾಸೆಯೆನ್ನಬೇಕು. ಕಾಂಟ್‍ನ ಹಾಗೆ, ಕಲ್ಯಾಣದ ಭಾವನೆಯಲ್ಲಿ ತನ್ನ ಸಿದ್ಧಾಂತಕ್ಕೆಲ್ಲ ಸಾಮಂಜಸ್ಯ ತಂದ ಪ್ಲೇಟೊ, ವಿಶ್ವವನ್ನೆಲ್ಲ ಅರ್ಥ ಪೂರ್ಣವಾಗಿ ವಿವರಿಸಲು ಧ್ಯೇಯವಾದವನ್ನು ಪುರಸ್ಕರಿಸಿದ ಅರಿಸ್ಟಾಟಲ್ ಇವರೆಲ್ಲ ನೀತಿಶಾಸ್ತ್ರಕ್ಕೂ ತತ್ತ್ವಶಾಸ್ತ್ರಕ್ಕೂ ಇರುವ ನಿಕಟ ಸಂಬಂಧದ ದೃಷ್ಟಾಂತಗಳೆನ್ನಬಹುದು.

ರಾಜ್ಯಶಾಸ್ತ್ರ, ಇತಿಹಾಸ ಮತ್ತು ಧರ್ಮಗಳ ತತ್ತ್ವ : ಪ್ಲೇಟೋ ಮತ್ತು ಅರಿಸ್ಟಾಟಲ್ ಇವರಲ್ಲಿ ನೀತಿಶಾಸ್ತ್ರಕ್ಕೂ ರಾಜ್ಯಶಾಸ್ತ್ರಕ್ಕೂ ಅವಿಭಾಜ್ಯ ಸಂಬಂಧವಿದೆ. ಮಾನವನ ಪರಮ ಕಲ್ಯಾಣ ಸಮಾಜದಲ್ಲಿ ಮಾತ್ರ ಶಕ್ಯವೆಂಬ ಕಾರಣದಿಂದ ರಾಜ್ಯಶಾಸ್ತ್ರವನ್ನು ಅವರು ಬೆಳೆಸುತ್ತಾರೆ; ಆಗ ರಾಜ್ಯಶಾಸ್ತ್ರವೂ ತತ್ತ್ವಶಾಸ್ತ್ರದ ವ್ಯಾಪ್ತಿಯಲ್ಲಿ ಬರುವಂತಾಗುತ್ತದೆ, ಆದರೆ ಈ ಮೊದಲೇ ಹೇಳಿದಂತೆ ವೈಯಕ್ತಿಕ ಕರ್ತವ್ಯಗಳಿಗೂ ಮೂಲಭೂತ ನೀತಿತತ್ತ್ವಕ್ಕೂ ಹೊಂದಾಣಿಕೆ ಶಾಸ್ತ್ರೀಯವಾಗಿ ಶಕ್ಯವಲ್ಲ. ನೀತಿಯ ನೆಲೆಯನ್ನರಿಯಲು ಒಂದು ಸಮಾಜದ ಕಾನೂನುಗಳು, ಸಂಘಸಂಸ್ಥೆಗಳು, ಸಾಂಪ್ರದಾಯಿಕ ಆಚಾರಗಳು- ಇವಷ್ಟೇ ಸಾಧನ. ಪ್ಲೇಟೋನ ರಿಪಬ್ಲಿಕ್, ಹೇಗಲನ ಫಿಲಾಸಫಿ, ಡೆಸ್ ರೆಖ್ಟ್- ಇವು ತುಂಬಾ ವಿಕಸಿತವಾದ ರಾಜ್ಯಶಾಸ್ತ್ರದ ತತ್ವ ವಿವೇಚನೆಯನ್ನು ಒಳಗೊಂಡ ಗ್ರಂಥಗಳಿಗೆ ಉದಾಹರಣೆಗಳಾಗಿವೆ. ಪ್ರಜೆಗಳ ಮೂಲಭೂತ ಹಕ್ಕುಗಳ ಹಾಗೂ ಸಾಮಾಜಿಕ ವ್ಯವಸ್ಥೆಗಳ ಬಗೆಗೆ ಆಧುನಿಕ ಕಾಲದಲ್ಲಿ ನಡೆದ ತಾತ್ತ್ವಿಕ ಚರ್ಚೆಗಳೂ ಈ ತತ್ತ್ವಶಾಸ್ತ್ರದ ವ್ಯಾಪ್ತಿಯಲ್ಲೇ ಬರುತ್ತವೆ. ಅಲ್ಲದೇ, ತತ್ತ್ವಶಾಸ್ತ್ರ ತನ್ನ ರಚನಾತ್ಮಕ ಕಾರ್ಯವನ್ನು ಪೂರ್ಣಗೊಳಿಸಲು ಮಾನವನ ಇತಿಹಾಸದ ಅಧ್ಯಯನವೂ ಅಗತ್ಯವೇ ಆಗುತ್ತದೆ. ಐತಿಹಾಸಿಕ ಸಂಗತಿಗಳನ್ನೆಲ್ಲ ವಿಕ್ಷಿಪ್ತ ಘಟನೆಗಳಾಗಿರದೆ ಒಂದು ಉದ್ದಿಷ್ಟ ಧ್ಯೇಯದತ್ತಲಿನ ಪ್ರಗತಿಯ ಕುರುಹುಗಳೆಂಬುದನ್ನು ತೋರಿಸಬೇಕಾಗುತ್ತದೆ. ಇತಿಹಾಸ ತತ್ವವೆಂಬ ಹೊಸ ಅಧ್ಯಯನ ಪರಂಪರೆ ಆಧುನಿಕ ಕಾಲದ ವೈಶಿಷ್ಟ್ಯವಾಗಿದೆ. ಇತಿಹಾಸವೆಂದರೆ ಮಾನವ ಕುಲದ ಶಿಕ್ಷಣಪ್ರಣಾಲಿ ಎಂಬ ಲೆಸಿಂಗ್‍ನ ವಚನ ಇದಕ್ಕೆ ಉತ್ತಮ ಉದಾಹರಣೆ. ಈ ಇತಿಹಾಸ ತತ್ತ್ವಶಾಸ್ತ್ರಕ್ಕೂ ಸಮಾಜಶಾಸ್ತ್ರಕ್ಕೂ ಭೇದವಿದೆ. ನಡೆದುದನ್ನು ಇದ್ದಂತೆ ವಿವೇಚಿಸುವುದು ಮಾತ್ರ ಸಮಾಜಶಾಸ್ತ್ರ; ಒಂದು ಗೂಢ ಧ್ಯೇಯದ ಆವಿಷ್ಕಾರಿಪ್ರಕಾರವೆಂದು ತೋರಿಸಿಕೊಡುವುದು ಇತಿಹಾಸತತ್ವ. ಉದಾಹರಣೆಗೆ, ಹೇಗಲ್ ಹೇಳುವಂತೆ ಇತಿಹಾಸ ಮಾನವನ ಸ್ವಾತಂತ್ರ್ಯಧ್ಯೇಯದ ಸಾಕ್ಷಾತ್ಕಾರವೆನ್ನಬಹುದು.

	ಕಡೆಯದಾಗಿ, ತತ್ತ್ವಶಾಸ್ತ್ರಕ್ಕೂ ದೇವತಾಶಾಸ್ತ್ರ ಅಥವಾ ಮತಧರ್ಮಶಾಸ್ತ್ರಕ್ಕೂ ಇರುವ ಸಂಬಂಧವನ್ನು ನಿರ್ದೆಶಿಸುವ ಕೆಲಸ. ಸಾಮಾನ್ಯವಾಗಿ ಒಬ್ಬ ಪ್ರವಾದಿಯ ಪ್ರಕಾರ ದೇವರು ಜಗತ್ತು ಮತ್ತು ದೇವ-ಮಾನವರ ಸಂಬಂಧದ ವಿಚಾರವೇ ದೇವತಾಶಾಸ್ತ್ರವೆನ್ನಲಾಗುತ್ತದೆ. ಆದರೆ ಈ ವಿಷಯಗಳನ್ನು ಪ್ರವಾದಿಯೊಬ್ಬನನ್ನು ಒಪ್ಪದ ತತ್ವಚಿಂತಕರೂ ಧರ್ಮಶಾಸ್ತ್ರಕಾರರೂ ವಿವೇಚಿಸಿರುವುದುಂಟು. ಅವರ ಜಿಜ್ಞಾಸೆಯನ್ನು ಪ್ರಾಕೃತಿಕ ದೇವತಾಶಾಸ್ತ್ರವೆನ್ನುವರು. ಪ್ರಾಚೀನ ಗ್ರೀಸಿನ ಸ್ಟೋಯಿಕ್ ತತ್ತ್ವಜ್ಞರ ವಾದಗಳೂ 18ನೆಯ ಶತಮಾನದಲ್ಲಿ ಬಳಕೆಗೆ ಬಂದ ನಿಯೋಜಿತ ವಿಶ್ವರಚನವಾದವೂ ಇದಕ್ಕೆ ದೃಷ್ಟಾಂತಗಳು. ಆದರೆ ಇದನ್ನು ಹೊಸ ತತ್ತ್ವಶಾಸ್ರ ಶಾಖೆಯೆನ್ನಬೇಕಾಗಿಲ್ಲ. ಇದು ಪರಮಾರ್ಥ ಚಿಂತನೆಯಲ್ಲೇ ಅಂತರ್ಗತವಾಗುತ್ತದೆ. ಆದರೆ ಮತಧರ್ಮತತ್ತ್ವದ ವಿಚಾರಕ್ಕೆ ತನ್ನದೇ ಆದ ವಿಷಯವಿದೆ. ಅದು ಧಾರ್ಮಿಕ ಭಾವನೆಯನ್ನೂ ಅದರಿಂದ ಮನುಷ್ಯ ಜೀವನದ ಮೇಲಾಗುವ ಪರಿಣಾಮವನ್ನೂ ವಿಶ್ವದ ಮೂಲಕಾರಣದೊಡನೆ ಮಾನವನ ಸಂಬಂಧವನ್ನೂ ವಿವೇಚಿಸುತ್ತದೆ. ಐಕ್ಯ, ಸಾಮರಸ್ಯ, ಶಾಂತಿ, ಆನಂದ- ಇವು ಧರ್ಮನಿಷ್ಠೆಯ ಲಕ್ಷಣಗಳು. ಈ ಧರ್ಮದ ಆತ್ಯಂತಿಕ ಸತ್ಯಸ್ವರೂಪದ ಪ್ರತೀಕವೋ ಇಲ್ಲವೆ ಮಾನವನ ಕನಸು ಭೀತಿಗಳಿಂದ ಕಲ್ಪಿತವಾದ ಭ್ರಮೆಯೋ ಎಂಬ ಪ್ರಶ್ನೆಗೆ ಧರ್ಮದ ತತ್ತ್ವಶಾಸ್ತ್ರ ಮೊದಲನೆಯ ಪಕ್ಷವನ್ನು ಉತ್ತರವಾಗಿ ಎತ್ತಿ ಹಿಡಿಯುತ್ತದೆ. ಸಕಲ ಅನುಭವಗಳ ಮೀಮಾಂಸೆ ತತ್ತ್ವಶಾಸ್ತ್ರವಾದ ಮೇಲೆ ಧಾರ್ಮಿಕ ಅನುಭವದ ಮೀಮಾಂಸೆಯೂ ಅದರ ಅಂಗವೆನಿಸಲೇಬೇಕಷ್ಟೆ. ಧಾರ್ಮಿಕ ಅನುಭಾವಿಗಳ ಉದ್ಗಾರಗಳು ಕಲ್ಪನಾಜನ್ಯವಿರಬಹುದು. ಆದರೆ ಅವುಗಳ ಹಿಂದಿರುವ ಅನುಭವಗಳ ಸ್ವರೂಪ, ಅವಕ್ಕೂ ಮಿಕ್ಕ ಅನುಭವಗಳಿಗೂ ತಾತ್ವಿಕ ಭಾಷೆಯಲ್ಲಿ ಸಂಬಂಧಯೋಜನೆ- ಇವನ್ನು ಧರ್ಮದ ತತ್ತ್ವಶಾಸ್ತ್ರ ಮಾಡಬೇಕಾಗುತ್ತದೆ. ಈ ಶಾಸ್ತ್ರ ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ಐತಿಹಾಸಿಕ ಮತಧರ್ಮಗಳ ಆಚಾರವಿಚಾರಗಳನ್ನೆಲ್ಲ ಅಭ್ಯಸಿಸಿ ಅವುಗಳ ವಿವಿಧ ವಿಕಾಸಗಳ ಹಂತಗಳನ್ನು ಗುರುತಿಸಬೇಕಾಗುತ್ತದೆ. ಆದರೆ ಇತಿಹಾಸಶಾಸ್ತ್ರ ಕೇವಲ ವಸ್ತುನಿಷ್ಠವಿರುವುದರಿಂದ ಧ್ಯೇಯನಿಷ್ಠವಾದ ಈ ಶಾಸ್ತ್ರ ಅದರಲ್ಲಿ ಅಂತರ್ಗತವಾಗದು.

	ಪರಮಾರ್ಥ ತತ್ತ್ವವಿಚಾರವೆಂಬುದೇ ಇಲ್ಲ ಅಥವಾ ಅವಶ್ಯಕ-ಎನ್ನುವ ವಾದಗಳನ್ನು ಅಂಗೀಕರಿಸುವವರು ಕೂಡ ಯಥಾರ್ಥ ಜ್ಞಾನದ ತತ್ತ್ವಮೀಮಾಂಸೆಯೆಂಬ ಶಾಸ್ತ್ರವನ್ನು ಸ್ವೀಕರಿಸಲು ಯಾವ ಅಡ್ಡಿಯೂ ಇರುವುದಿಲ್ಲ. ಅದರಿಂದ ಮಾನವನ ವಿಚಾರಶಕ್ತಿಯ ಪರಮಸತ್ಯದ ಬದಲು ಅವರ ಪರಮ ಅಸಾಮಥ್ರ್ಯವೇ ಅಭಿವ್ಯಕ್ತವಾದಂತಾಗುತ್ತದೆ.
(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ